ADVERTISEMENT

ತಂತ್ರಜ್ಞಾನ ಬೆಳೆದಂತೆ ಒತ್ತಡ ಹೆಚ್ಚು

ಮಾನಸಿಕ ಆರೋಗ್ಯ, ಆಪ್ತ ಸಮಾಲೋಚನೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 7:26 IST
Last Updated 5 ಜನವರಿ 2017, 7:26 IST

ತುಮಕೂರು: ‘ತಂತ್ರಜ್ಞಾನ ಬೆಳೆದಂತೆ ಜೀವನದಲ್ಲಿ ಒತ್ತಡವೂ ಹೆಚ್ಚಾಗುತ್ತಿದೆ’ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ತಿಳಿಸಿದರು. ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ‘ಮಾನಸಿಕ ಆರೋಗ್ಯ ಹಾಗೂ ಆಪ್ತ ಸಮಾಲೋಚನೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಮಾನಸಿಕ ಒತ್ತಡದಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಒತ್ತಡ ಮುಕ್ತರಾಗಲು ಯೋಗ, ಧ್ಯಾನದ ಮೊರೆ ಹೋಗಬೇಕು. ಇದರಿಂದ ಮಾನಸಿಕ ನೆಮ್ಮದಿ ಸಿಗಲಿದೆ’ ಎಂದು ಹೇಳಿದರು. ‘ಖಿನ್ನತೆಗೆ ಒಳಗಾದ ಸಂದರ್ಭದಲ್ಲಿ ಆಪ್ತ ಸಮಾಲೋಚನೆ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಕೀಲರ ಸಂಘದ ಆವರಣದಲ್ಲಿ ಪ್ರತಿ ಬುಧವಾರ ಎಲ್ಲರಿಗೂ ಮಾನಸಿಕ ಆರೋಗ್ಯ ತಪಾಸಣೆ ಹಾಗೂ ಆಪ್ತ ಸಮಾಲೋಚನೆಗೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ’ ಎಂದು ಬಣ್ಣಿಸಿದರು.

ಮನೋವೈದ್ಯ ಡಾ.ಚೇತನ್ ಮಾತನಾಡಿ, ‘ಎಲ್ಲ ಮನುಷ್ಯರಿಗೂ ಮಾನಸಿಕ ಅನಾರೋಗ್ಯ ಎದುರಾಗುತ್ತದೆ. ಸಾಮಾನ್ಯ ಕಾಯಿಲೆಗಳು ಪದೇ ಪದೇ ಎದುರಾದರೆ ನಿರ್ಲಕ್ಷಿಸಬಾರದು. ಸಮಾಲೋಚನೆ ಮೂಲಕ ಪರಿಹಾರ ಕಂಡುಕೊಳ್ಳಬೇಕು’ ಎಂದರು. ‘ಸಮತೋಲನದ ಆಹಾರ ಮತ್ತು ನಿದ್ರೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಆದರೆ ಬಹಳಷ್ಟು ಜನ ಇದರತ್ತ ಗಮನ ಹರಿಸುವುದೇ ಇಲ್ಲ. ಇದು ಮುಂದುವರಿದು ಮಾನಸಿಕ ಕಾಯಿಲೆ ಆಗಿ ಉಲ್ಬಣವಾಗಲಿದೆ’ ಎಂದು ಹೇಳಿದರು. ಆಪ್ತ ಸಮಾಲೋಚಕಿ ಡಾ.ಸುಷ್ಮಾ ಮಾತನಾಡಿ, ‘ಮನೋರೋಗ ಉಲ್ಬಣಿಸಿದಾಗ ಆತ್ಮಹತ್ಯೆಗೆ ಪ್ರೇರಣೆಯಾಗುತ್ತದೆ. ಯಾವ ವ್ಯಕ್ತಿಗಳಲ್ಲಿ ಖಿನ್ನತೆ ಇರುತ್ತದೆಯೋ ಅಂತಹವರನ್ನು ಮಾತನಾಡಿಸಿ ಖಿನ್ನತೆ ದೂರ ಮಾಡಬೇಕು’ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಹರಿಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಟಿ.ಎನ್.ಗುರುರಾಜ್, ಪ್ರಧಾನ ಕಾರ್ಯದರ್ಶಿ ಟಿ.ಎಚ್.ಕುಮಾರ್, ಖಜಾಂಚಿ ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.