ADVERTISEMENT

ತಾಲ್ಲೂಕಿನಲ್ಲಿ ಈಗ ರಂಗ ತಾಲೀಮಿನದ್ದೇ ಸದ್ದು

ವಿಶ್ವ ರಂಗಭೂಮಿ ದಿನ ವಿಶೇಷ: ಗುಬ್ಬಿ ಸುತ್ತಮುತ್ತಲ ಹಳ್ಳಿಗಳಲ್ಲಿ ಎಲ್ಲೆಲ್ಲೂ ಹಾರ್ಮೋನಿಯಂ ಸ್ವರ

ಟಿ.ಎಚ್‌.ಪಂಚಾಕ್ಷರಯ್ಯ
Published 28 ಮಾರ್ಚ್ 2017, 8:35 IST
Last Updated 28 ಮಾರ್ಚ್ 2017, 8:35 IST
ಗುಬ್ಬಿ: ತಾಲ್ಲೂಕಿನ ಹತ್ತಾರು ಹಳ್ಳಿಗಳಲ್ಲಿ ಈಗ ರಂಗ ಚಟುವಟಿಕೆಯ ತಾಲೀಮಿನ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ಮೇಷ್ಟ್ರು ನುಡಿಸುವ ಹಾರ್ಮೋನಿಯಂ ನಿನಾದ ಊರ ವಾಸಿಗಳಿಗೆ ಮಾಮೂಲಾಗಿದೆ.
 
ಪರ ಊರಿಂದ ಬಂದವರು ಹಾರ್ಮೋನಿಯಂ ನಾದ ಕೇಳಿ, ನಿಮ್ಮೂರಲ್ಲೂ ನಾಟ್ಕ ಆಡ್ತರಾ… ಯಾವ್ ನಾಟ್ಕ... ಎಂದು ಕೇಳುತ್ತಿದ್ದಾರೆ.
 
‘ಯುಗಾದಿ’ ಹಬ್ಬ ಆಚರಣೆ ಆದ ಒಂದು ವಾರಕ್ಕೆ ಬಹುತೇಕ ಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ನಾಟಕ ತಾಲೀಮಿನ ಮುಖ್ಯ ಪ್ರದರ್ಶನ ನಡೆಯುತ್ತದೆ. ಈಗಾಗಲೇ ಕೆಲ ಹಳ್ಳಿಗಳಲ್ಲಿ ಪೂರ್ಣ ಕಲಿತು, ಗೆಜ್ಜೆಪೂಜೆ ಮಾಡಿ ಅರಾಮವಾಗಿದ್ದಾರೆ. ಆದರೂ ಹಾಡು, ಸಂಭಾಷಣೆ ಗುನುಗುತ್ತಿದ್ದಾರೆ. ನಾಟಕ ಪ್ರದರ್ಶನ ಕಾಣುವ ದಿನ ಎದುರು ನೋಡುತ್ತಿದ್ದಾರೆ.
 
ಈ ವರ್ಷ ಮೂರು ತಿಂಗಳು ಮೊದಲೇ ನಾಟಕ ಕಲಿಕೆ ಆರಂಭವಾಗಿದೆ. ಬಹುತೇಕ ಯುವಕರು ಒಂದಲ್ಲ ಒಂದು ಪಾತ್ರ ಮಾಡಿಬಿಡೋಣ ಎಂಬ ಉತ್ಸುಕತೆ ತೋರಿದ್ದಾರೆ.
ಹಿರಿಯ ಕಲಾವಿದರು, ತಮ್ಮ ಪಾತ್ರ ಮಾಡಬಹುದಾದ ಹೊಸ ಕಲಾವಿದರನ್ನು ಪತ್ತೆ ಮಾಡಿ, ತಮಗೆ ರೂಢಿಗತವಾಗಿರುವ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ದೇವಸ್ಥಾನದ ಹಜಾರ, ತಾರಸಿಯ ಕಟ್ಟಡ, ಗರಿಸಿಕ್ಕಿಸಿದ ಗುಡಿಸಲುಗಳೂ ನಾಟಕ ತಾಲೀಮಿನ ತಾಣಗಳಾಗಿವೆ.
 
ರೋದನೆ, ಬೇಸರ, ಕುಣಿತ ಇಲ್ಲದ ನಾಟಕದಿಂದ ಮೆಚ್ಚಿಸೋದು ಕಷ್ಟ ಅಂತಾನೆ ‘ರಾಮಾಯಣ’ದ ಕಥೆ ಆಧರಿಸಿದ ನಾಟಕಗಳಿಗೆ ಮನ್ನಣೆ ಕೊಡುತ್ತಿಲ್ಲ. ಆದರೆ, ಮಾಹಾಭಾರತದಿಂದ ಸಿಡಿದ ಚೂರು ಕಥೆಗಳ ಮುಖೇನ ಗಮನ ಸೆಳೆದು ಮೆಚ್ಚುಗೆ ಗಳಿಸಲು ಕಲಾವಿದರು ಮುಂದಾಗಿದ್ದಾರೆ.
 
ಹೆಚ್ಚು ಕುಣಿತ, ಮಾರ್ಪಡಿಸಿದ ಸಂಗೀತ, ಸಂಭಾಷಣೆ ಇರುವುದರಿಂದ ಮನ್ನಣೆ ಸಿಕ್ಕಿದೆ. ಅಲ್ಲದೇ ಆಧುನಿಕ ಸಂಗೀತವೂ ಪೌರಾಣಿಕ ನಾಟಕದಲ್ಲಿ ಸೇರ್ಪಡೆಯಾಗಿದೆ. ಇಲ್ಲಿನ ರಂಗಭೂಮಿಗೆ ಶಿಸ್ತು ತುಂಬಲು ಆಗದೇ ಇದ್ದರೂ ಸಹ ಅಭಿನಯ ಸ್ವಾತಂತ್ರ್ಯಕ್ಕೆ ಹೆಚ್ಚು ಮನ್ನಣೆ ಸಿಕ್ಕಿದೆ.
 
ಗೆಜ್ಜೆಪೂಜೆ ನಡೆದ ನಂತರ ಬಹುತೇಕರು ನಾಟಕ ಮರೆಯುತ್ತಾರೆ. ಮತ್ತೆ ನೆನಪಾಗೋದು, ಸೀನ್ಸ್ ಕಟ್ಟುವಾಗಲೆ. ಪರದೆ, ಸೀನರಿ, ವಿದ್ಯುತ್ ಅಲಂಕಾರ, ಮೈಕ್ ಸೌಂಡ್, ಬಣ್ಣಹಚ್ಚುವ ಚಟುವಟಿಕೆ ಶುರು ಆಗೋದನ್ನೆ ಕಾಯುವ ಮಂದಿ ಪರದೆ ಹಿಂದಿನ ನಾಟಕೀಯತೆಯನ್ನು ಬಿಚ್ಚಿಡುತ್ತಾರೆ.
 
ಇದರಿಂದ ನಾಟಕ ಕಲೆಯ ಹಿನ್ನೋಟ ಅರ್ಥವಾಗುತ್ತದೆ. ಹತ್ತಿರದ ನೋಡುಗ ಸಂಜೆಯೇ ಸೀನ್ಸ್ ಬಳಿ ನಿಂತು ಸೀನ್ಸ್ ಹಾಕುವವರನ್ನ ಮಾತಾಡಿಸ್ತಾನೆ. ಸೀನ್ಸ್‌ಗೆ ಕಟ್ಟಿದ್ದ ಹಿಂದಿನ ಟಾರ್ಪಲ್ ಎತ್ತಿ ನುಗ್ಗುತ್ತಾನೆ. ಮೇಕಪ್ ಮಾಡುವ ಅಣ್ಣನ್ನ ಮಾತಾಡ್ಸಿ ಬರ್ತಾನೆ. ಹತ್ತಿರದಿಂದಲೇ ನಾಟ್ಕ ನೋಡ್ಬೇಕು ಅನ್ನೊ ಆಸೆ ಪೂರೈಸಿಕೊಳ್ಳುತ್ತಾನೆ.
 
ಮೇಕಪ್ (ಪ್ರಸಾದನ) ಮಾಡುವ ಅಣ್ಣ ಮಿಂಚುವ ವಸ್ತ್ರ, ಒಡವೆ, ಬಣ್ಣದ ಪೆಟ್ಟಿಗೆ ತೆಗೆದು ಜೋಡಿಸಿ, ಆರಂಭದ ಪಾತ್ರಗಳಿಗೆ ಬಣ್ಣ ಹಚ್ಚುತ್ತಾನೆ. ಮಕ್ಕಳು ಸೂತ್ರದಾರನ ಹಾಡು, ಮಾತಿನ ವೇಳೆಗೆ ಮಲಗುವ ಮಕ್ಕಳು ಬೆಳ್ಳಂ ಬೆಳಿಗ್ಗೆ ಎದ್ದು ನಾಟಕ ನಡೆದ ಜಾಗ ನೋಡಿ ಬಿದ್ದಿದ್ದ ಮೀಸೆ, ದಾಡಿಯ ತುಂಡುಗಳು ಹುಡುಕಿ, ಮೈಗಂಟಿಸಿದ್ದ ಮಿಂಚುವ ಬಟ್ಟೆಯ ತುಂಡುಗಳ ಆಯುವಿಕೆಯಲ್ಲಿ ನಾಟಕ ಮುಕ್ತಾಯ ಕಾಣುತ್ತದೆ. ಪಾತ್ರ ಮಾಡಿದ ವ್ಯಕ್ತಿ ಎಂದಿನ ಚಟುವಟಿಕೆಗೆ ತೊಡಗಿಸಿಕೊಂಡಾಗ, ಮುಖದ ಮೇಲೆ ಬಣ್ಣ ಇದ್ದರೆ ಹಿಂದಿನ ರಾತ್ರಿ ನಡೆದ ನಾಟಕ ಚಿತ್ರಣವನ್ನು ಮತ್ತೊಮ್ಮೆ ಮೆಲುಕು ಹಾಕುತ್ತಾರೆ ಸಹೃದಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.