ADVERTISEMENT

ತೆಂಗು ಅಭಿವೃದ್ಧಿಗೆ ಹಣ ಬಿಡುಗಡೆ

ಬೆಳೆಗಾರರ ಆರ್ಥಿಕ ಪ್ರಗತಿಗಾಗಿ ₹ 44 ಕೋಟಿ

​ಪ್ರಜಾವಾಣಿ ವಾರ್ತೆ
Published 25 ಮೇ 2018, 4:13 IST
Last Updated 25 ಮೇ 2018, 4:13 IST

ಕುಣಿಗಲ್: ರಾಜ್ಯದ ತೆಂಗು ಬೆಳೆಗಾರರಿಗೆ ಅರಿವು ಮೂಡಿಸಿ, ಆರ್ಥಿಕ ಪ್ರಗತಿಗಾಗಿ ತೆಂಗು ಅಭಿವೃದ್ಧಿ ಮಂಡಳಿ ಹಣ ಬಿಡುಗಡೆ ಮಾಡಿದೆ ಎಂದು ತೆಂಗು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಹೇಮಚಂದ್ರ ತಿಳಿಸಿದರು.

ತಾಲ್ಲೂಕಿನ ಮುತ್ತಗದಹಳ್ಳಿ ಭೈರವೇಶ್ವರ ತೆಂಗು ಉತ್ಪಾದಕರ ಕಂಪನಿ ವತಿಯಿಂದ 360 ತೆಂಗು ಬೆಳೆಗಾರರಿಗೆ ₹ 2.50ಕೋಟಿ ಮೌಲ್ಯದ ಗೊಬ್ಬರವನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.

‘ದೇಶದಲ್ಲಿ ತೆಂಗು ಉತ್ಪಾದನೆಯಲ್ಲಿ ತುಮಕೂರು ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಕಲ್ಪತರು ನಾಡಿನಲ್ಲಿ ತೆಂಗು ಬೆಳೆಗಾರರ ಆದಾಯ ಹೆಚ್ಚಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ತೆಂಗು ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿದೆ. ತೆಂಗಿನ ತೋಟಗಳಲ್ಲಿ ಪ್ರಾತ್ಯಕ್ಷಿಕೆ ನಡೆಸುವ ಮೂಲಕ ಗುಣಮಟ್ಟದ ತೆಂಗು ಉತ್ಪಾದನೆಗೆ ತಾಂತ್ರಿಕ ಸಲಹಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ’ ಎಂದು ತಿಳಿದರು.

ADVERTISEMENT

ಕುಣಿಗಲ್ ತೆಂಗು ಉತ್ಪಾದಕರ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುಲಿವಾನ ಗಂಗಾಧರಯ್ಯ ಮಾತನಾಡಿ, ನಾಡಿನಲ್ಲಿ ಬೆಳೆದ ತೆಂಗನ್ನು ಪೂಜೆ ಮತ್ತು ಅಡಿಗೆಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ವಿವಿಧ ಉತ್ಪನ್ನಗಳನ್ನು ತಯಾರಿಸುವಲ್ಲಿ ಮತ್ತು ತೆಂಗು ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸದ ಕಾರಣ ತೆಂಗು ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ತಾಲ್ಲೂಕಿನಲ್ಲಿ ತೆಂಗು ಬೆಳೆಗಾರರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗಾಗಿ ಕಂಪನಿ ಪ್ರಾರಂಭಿಸಲಾಗಿದೆ ಎಂದರು.

ನೀರಾ ಇಳಿಸುವ ಬಗ್ಗೆ ಅಬ್ಕಾರಿ ಇಲಾಖೆ ವತಿಯಿಂದ ತಾತ್ವಿಕ ಅನುಮತಿ ಬಂದಿದೆ. ಮುಂದಿನ ದಿನಗಳಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು.ಬಿಳಿ ದೇವಾಲಯದಲ್ಲಿ ತೆಂಗಿನ ಎಣ್ಣೆ ಉತ್ಪಾದನಾ ಘಟಕ ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ತೆಂಗು ಖರೀದಿ ಘಟಕ ಸಹ ಪ್ರಾರಂಭಿಸಲಾಗುವುದು.ತೆಂಗು ಬೆಳೆಗಾರರು ಸಹಕಾರ ನೀಡಿ, ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಮುಂದುವರೆದು ಯೋಜನೆಗಳ ಸದುಪಯೋಗ ಪಡೆದು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.

ಉದ್ಯಮಿ ಭರತೇಶ್, ಭೈರವೇಶ್ವರ ತೆಂಗು ಉತ್ಪಾದಕರ ಸಂಘ ಅಧ್ಯಕ್ಷ ಆನಂದ್ ಸ್ವಾಮಿ, ತೆಂಗು ಅಭಿವೃದ್ಧಿ ಮಂಡಳಿಯ ಅಧಿಕಾರಿ ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.