ADVERTISEMENT

ತ್ರಿಕೋನ ಸ್ಪರ್ಧೆ: ಗೆಲುವು ನಿರ್ಧರಿಸುವ ಒಳ ಮುನಿಸಿನ ಲಾಭ

ವಿಧಾನ ಪರಿಷತ್‌: ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:52 IST
Last Updated 2 ಫೆಬ್ರುವರಿ 2017, 6:52 IST
ತ್ರಿಕೋನ ಸ್ಪರ್ಧೆ: ಗೆಲುವು ನಿರ್ಧರಿಸುವ ಒಳ ಮುನಿಸಿನ ಲಾಭ
ತ್ರಿಕೋನ ಸ್ಪರ್ಧೆ: ಗೆಲುವು ನಿರ್ಧರಿಸುವ ಒಳ ಮುನಿಸಿನ ಲಾಭ   
ತುಮಕೂರು: ವಿಧಾನ ಪರಿಷತ್‌ ಸದಸ್ಯರಾಗಿದ್ದ ವೈ.ಎ.ನಾರಾಯಣಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯು ಮೇಲ್ನೋಟಕ್ಕೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ನಡುವಿನ ತ್ರಿಕೋನ ಸ್ಪರ್ಧೆಯಾಗಿ ಕಾಣುತ್ತಿದೆ.
 
ಬಿಜೆಪಿಯಿಂದ ಗೆಲುವು ಸಾಧಿಸಿದ್ದ ವೈ.ಎ.ನಾರಾಯಣಸ್ವಾಮಿ ಬೆಂಗಳೂರು ಹೆಬ್ಬಾಳ ಕ್ಷೇತ್ರಕ್ಕೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಧಿಕಾರವಧಿ ಕೇವಲ 15 ತಿಂಗಳು ಮಾತ್ರ ಬಾಕಿ ಇರುವುದರಿಂದ ಚುನಾವಣೆ ಹಣ ಹಾಗೂ ಪ್ರಚಾರದ ದೃಷ್ಟಿಯಿಂದ ಜೋರು ಪಡೆದಿಲ್ಲ.
 
ಒಟ್ಟು 17 ಮಂದಿ ಅಂತಿಮ ಕಣದಲ್ಲಿದ್ದರೂ ಕಾಂಗ್ರೆಸ್‌ನ ಟಿ.ಎಸ್‌.ನಿರಂಜನ್, ಬಿಜೆಪಿಯ ಪೆಪ್ಸಿ ಬಸವರಾಜ್ ಹಾಗೂ ಜೆಡಿಎಸ್‌ನ ರಮೇಶ್‌ಬಾಬು ನಡುವೆ ಸ್ಪರ್ಧೆ ಕಾಣುತ್ತಿದೆ.   ಹರಿಹರ ಶಾಸಕ ಶಿವಶಂಕರ್‌ ಸಹೋದರ  ಎಚ್‌.ಎಸ್‌.ಅರವಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
 
ಪಕ್ಷೇತರ ಅಭ್ಯರ್ಥಿ ಕೆ.ರಾಮಕೃಷ್ಣ  ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೋಲಾರದ ಮಂಜುಳಾ ರಾಜಗೋಪಾಲ್ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಉಳಿದವರು ಆಟಕ್ಕುಂಟು, ಲೆಕ್ಕಕಿಲ್ಲವಾಗಿದ್ದಾರೆ.
 
ಕ್ಷೇತ್ರ ಉಳಿಸಿಕೊಳ್ಳುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ಬಿಜೆಪಿ ತೆಕ್ಕೆಯಿಂದ ಕ್ಷೇತ್ರ ಕಿತ್ತುಕೊಳ್ಳಲು ಜೆಡಿಎಸ್‌, ಕಾಂಗ್ರೆಸ್‌ ಹವಣಿಸಿವೆ.
ಕೇವಲ ಹದಿನೈದು ತಿಂಗಳ ಅಧಿಕಾರವಧಿಯ ಕಾರಣ ಹಣ ಹಂಚಿಕೆ, ಮತದಾರರನ್ನು ಸೆಳೆಯಲು ವಿವಿಧ ಆಮಿಷ ಅಷ್ಟಾಗಿ ಕಾಣುತ್ತಿಲ್ಲ. ಪಕ್ಷೇತರ ಅಭ್ಯರ್ಥಿಯೊಬ್ಬರು ಬೆಳ್ಳಿ ಸಾಮಾನು, ಸೀರೆ, ವಾಚು ಹಂಚಲು ಹೋಗಿ ಸಿಕ್ಕಿಬಿದ್ದಿರುವುದು ಬಿಟ್ಟರೆ ಚುನಾವಣೆ ಅಕ್ರಮಗಳು ಅಷ್ಟಾಗಿ ಕಾಣುತ್ತಿಲ್ಲ.
ಚುನಾವಣೆ ಹಿಂದಿನ ದಿನ ಅಭ್ಯರ್ಥಿಗಳ ಹಣಕಾಸಿನ ಲೆಕ್ಕಾಚಾರ ಹೇಗಿರುತ್ತದೆ ಎಂಬುದು ಹೇಳಲು ಕಷ್ಟವಾಗುತ್ತಿದೆ.
 
ಹೆಚ್ಚು ಮತದಾರರನ್ನು ಹೊಂದಿರುವ ಕಾರಣ ಎಲ್ಲ ಅಭ್ಯರ್ಥಿಗಳು ತುಮಕೂರು ಜಿಲ್ಲೆಯ ಮೇಲೆ ಹೆಚ್ಚು ಕಣ್ಣಿಟ್ಟು ಮತ ಯಾಚಿಸುತ್ತಿದ್ದಾರೆ.
 
ನಿರಂಜನ್‌ ಅವರು ತಮ್ಮದೆ ತಂಡ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್‌ನ ಸಚಿವರನ್ನು ಸೇರಿಸಿಕೊಂಡು ತುಮಕೂರಿನಲ್ಲಿ ಸಮಾವೇಶ ಮಾಡಿದ್ದಾರೆ. ಕಾಂಗ್ರೆಸ್‌ನ ಎಲ್ಲ ಸಚಿವರು, ಶಾಸಕರು ಕ್ಷೇತ್ರ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲೂ ಮನಪೂರ್ವಕವಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿಲ್ಲ. ಚುನಾವಣೆ ಪ್ರಕಟಣೆಗೂ ಮುನ್ನವೇ ನಿರಂಜನ್ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದ್ದರಿಂದ ಮೊದಲಿನಿಂದಲೂ ಪ್ರಚಾರದಲ್ಲಿದ್ದಾರೆ.
 
ಪೆಪ್ಸಿ ಬಸವರಾಜ್‌, ನಿರಂಜನ್‌ ಹಾಗೂ ಎಚ್‌.ಎಸ್‌.ಅರವಿಂದ ಮೂವರು ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಈ ಸಮುದಾಯದ ಮತಗಳು ಹಂಚಿಕೆಯಾಗಲಿವೆ. ಇದು ಜೆಡಿಎಸ್‌ಗೆ ಪ್ಲಸ್‌ ಆಗಬಹುದು ಎಂಬ ನಿರೀಕ್ಷೆಯಲ್ಲಿ ಜೆಡಿಎಸ್‌ ಇದೆ. ಆದರೆ ಬಂಡಾಯ ಅಭ್ಯರ್ಥಿ ಮಗ್ಗುಲು ಮುಳ್ಳಾಗಿದ್ದಾರೆ.   ಅರವಿಂದ ಅವರು ಪಕ್ಷದ ಮತಬುಟ್ಟಿಗೆ ಕೈ ಹಾಕಿದರೆ ಅಧಿಕೃತ ಅಭ್ಯರ್ಥಿಗೆ ಕಷ್ಟವಾಗಬಹುದು.
 
ಶಾಸಕ ಶಿವಶಂಕರ್‌ ಅವರು ತಮ್ಮ ಸಹೋದರ ಅರವಿಂದ ಅವರು ಜೆಡಿಎಸ್‌ನ ನೈತಿಕ ಅಭ್ಯರ್ಥಿ ಎಂದು ಪ್ರಚಾರ ನಡೆಸಿದ್ದಾರೆ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ  ಅರವಿಂದ ಪರ ಪರೋಕ್ಷ ಪ್ರಚಾರ ನಡೆಸಿದ್ದಾರೆ.
 
ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ರಮೇಶ್‌ ಬಾಬು ಅವರೇ ಅಧಿಕೃತ ಅಭ್ಯರ್ಥಿ ಎಂದು ಪ್ರಚಾರದ ವೇಳೆ ಹೇಳಿ ಹೋಗಿದ್ದಾರೆ.   
 
ರಮೇಶ್‌ಬಾಬು ಬಲಿಜ ಸಮುದಾಯಕ್ಕೆ ಸೇರಿರುವುದರಿಂದ ಅಹಿಂದ ಮತಬುಟ್ಟಿ ಹಾಗೂ ಪಕ್ಷದ ಮೇಲೆ ಪ್ರೀತಿ ತೋರುವ ಶಿಕ್ಷಕರ ಮೇಲೆ ಕಣ್ಣಿಟ್ಟು ಪ್ರಚಾರ ನಡೆಸಿದ್ದಾರೆ. ಬಿಜೆಪಿಯ ಪೆಪ್ಸಿ ಬಸವರಾಜ್‌ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಅಭ್ಯರ್ಥಿ. ಹೀಗಾಗಿ ಬಿಜೆಪಿಯೊಳಗಿನ ಇನ್ನೊಂದು ಗುಂಪಿನ ಮೌನ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
 
ಬಿಜೆಪಿ ಬೆಂಬಲಿತ ಮಾಧ್ಯಮ ಶಿಕ್ಷಕರ ಸಂಘ ಪೆಪ್ಸಿ ಬಸವರಾಜ್‌ ಪರ ಕೆಲಸ ಮಾಡುತ್ತಿದೆ. ಆದರೆ ಇದೇ ಉತ್ಸಾಹ, ಆಸಕ್ತಿಯನ್ನು ಬಿಜೆಪಿ ಇನ್ನಿತರ ಮುಖಂಡರು ತೋರುತ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಕೋಲಾರ ಜಿಲ್ಲೆ ಕೆಜಿಎಫ್‌ ವಲಯದಲ್ಲಿ ಬಿಜೆಪಿ ಜೋರು ಪ್ರಚಾರದಲ್ಲಿದ್ದರೆ, ಉಳಿದ ಕಡೆ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಪ್ರಚಾರ ಕಾಣುತ್ತಿದೆ. ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌, ಕೊತ್ತೂರು ಮಂಜುನಾಥ್‌ ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್– ಬಿಜೆಪಿ ನಡುವೆ ಹೆಚ್ಚು ಪ್ರಚಾರ ಕಾಣುತ್ತಿದೆ. ಕಾಂಗ್ರೆಸ್‌ ಸೊರಗಿದೆ. ಆ ಪಕ್ಷದ ಅಭ್ಯರ್ಥಿ ಪರ ಪ್ರಚಾರವೇ ಇಲ್ಲವಾಗಿದೆ.
 
ದಾವಣಗೆರೆ– ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಜೆಪಿ ಅಬ್ಬರದ ಪ್ರಚಾರದಲ್ಲಿದೆ. ಪಕ್ಷೇತರ ಅಭ್ಯರ್ಥಿ ಅರವಿಂದ ಸಹ ಪ್ರಚಾರದಲ್ಲಿ ಮುಂದಿದ್ದಾರೆ. ಕಾಂಗ್ರೆಸ್‌ ಪರ  ಪ್ರಚಾರ ಅಷ್ಟಾಗಿ ಕಾಣುತ್ತಿಲ್ಲ.
 
ಇಲ್ಲಿ ಲಿಂಗಾಯತರ ಒಳಪಂಗಡದ ಹೆಸರಿನಲ್ಲಿ ಮತದಾರರನ್ನು ಇಬ್ಭಾಗ ಮಾಡಲಾಗುತ್ತಿದೆ. ಇದು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 
 
**
ಉಪ ಚುನಾವಣೆಗೆ ಸಿದ್ಧತೆ
ಬೆಂಗಳೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಫೆ. 3ರಂದು ನಡೆಯಲಿದ್ದು, ಫೆ. 6ರಂದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತೆ ಎಂ. ವಿ. ಜಯಂತಿ ತಿಳಿಸಿದರು.
 
ಕಾಂಗ್ರೆಸ್ ಪಕ್ಷದ ಟಿ.ಎಸ್. ನಿರಂಜನ್, ಬಿಜೆಪಿಯ ಪಿ.ಆರ್. ಬಸವರಾಜು, ಜೆಡಿಎಸ್‌ನ  ರಮೇಶ್ ಬಾಬು, ಕರುನಾಡು ಪಕ್ಷದ ಬಿ. ವೆಂಕಟೇಶ್ ಹಾಗೂ13 ಪಕ್ಷೇತರರು ಸೇರಿ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೋಲಾರದ ಮಂಜುಳಾ ರಾಜಗೋಪಾಲ್ ಕಣದಲ್ಲಿರುವ ಏಕೈಕ ಮಹಿಳಾ ಅಭ್ಯರ್ಥಿ. ಫೆ.1 ರಂದು ಸಂಜೆ 4 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
 
ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿವೆ. ಈ ಜಿಲ್ಲೆಗಳ ಪ್ರತಿ ತಾಲ್ಲೂಕು ಕಚೇರಿಗಳಲ್ಲಿ ಮತದಾನ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. 15,139 ಪುರುಷ ಹಾಗೂ 6,215 ಮಹಿಳೆಯರು ಸೇರಿ ಒಟ್ಟು 21,354 ಮಂದಿ ಮತ ಚಲಾಯಿಸಲಿದ್ದಾರೆ ಎಂದರು.
 
**
ನಾಳೆ ಮತದಾನ
ಫೆ. 3ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಫೆ. 6ರಂದು ನಡೆಯಲಿದೆ.
 
**
ಅನಧಿಕೃತ ಮತದಾರರಿಗೆ ಕಡಿವಾಣ
ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನಧಿಕೃತ ಮತದಾರರ ಮತಗಳೇ ಕಾರಣ ಎಂಬ ಗುಲ್ಲು ಜಿಲ್ಲೆಯಲ್ಲಿ ಪ್ರತಿ ಸಲ ಕೇಳಿಬರುತ್ತಿತ್ತು. ಆದರೆ ಈ ಸಲ ಅನಧಿಕೃತ ಮತದಾರರ ನೋಂದಣಿಗೆ ತೆಗೆದುಕೊಂಡಿರುವ ಬಿಗಿ ಕ್ರಮ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.