ADVERTISEMENT

ನಿವೇಶನಕ್ಕೆ ಗೋಮಾಳ ಮಂಜೂರು: ವಿರೋಧ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 10:07 IST
Last Updated 10 ನವೆಂಬರ್ 2017, 10:07 IST

ಶಿರಾ: ತಾಲ್ಲೂಕಿನ ಮೇಲ್ಕುಂಟೆ ಗ್ರಾಮ ಪಂಚಾಯಿತಿ ಮುದ್ದರಂಗನಹಳ್ಳಿ ಸಮೀಪ ನಿವೇಶನಕ್ಕಾಗಿ ಗೋಮಾಳದ ಜಾಗವನ್ನು ಮಂಜೂರು ಮಾಡಿರುವುದನ್ನು ತಕ್ಷಣ ರದ್ದು ಪಡಿಸಿ ಜಾನುವಾರುಗಳಿಗೆ ಮೀಸಲಿಡಬೇಕು ಎಂದು ಗುರುವಾರ ರೈತರು ಪ್ರತಿಭಟನೆ ನಡೆಸಿ ಗ್ರೇಡ್ - 2 ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಮುದ್ದರಂಗನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಮೇಲ್ಕುಂಟೆ ಸರ್ವೆ ನಂ 206 ರಲ್ಲಿ 5 ಎಕರೆ ಹಾಗೂ ಸರ್ವೆ ನಂ 207 ರಲ್ಲಿ 9 ಎಕರೆ 20 ಗುಂಟೆ ಸೇರಿದಂತೆ ಒಟ್ಟು 14.20 ಎಕರೆ ಜಮೀನನ್ನು ವಸತಿ ರಹಿತರಿಗೆ ನಿವೇಶನ ನೀಡಲು ಮಂಜೂರು ಮಾಡಲಾಗಿದೆ. ಇದರಿಂದಾಗಿ ಮುದ್ದರಂಗನಹಳ್ಳಿ ಭಾಗದಲ್ಲಿ ಜಾನುವಾರುಗಳಿಗೆ ಹೆಚ್ಚಿನ ತೊಂದರೆಯಾಗುವುದು. ಪರ್ಯಾಯ ಮಾರ್ಗಗಳೂ ಇಲ್ಲ ಎಂದು ಅವರು ವಿವರಿಸಿದರು.

ಗ್ರಾಮ ಪಂಚಾಯಿತಿಯಿಂದ ಗ್ರಾಮ ಸಭೆಯನ್ನು ಸಹ ಮಾಡದೆ ಗ್ರಾಮ ಸಭೆ ನಡೆಸಿರುವುದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ತಹಶೀಲ್ದಾರ್ ಅವರು ಸಹ ಸ್ಥಳ ಪರಿಶೀಲನೆ ನಡೆಸದೆ ಪರಿಶೀಲನೆ ನಡೆಸಿರುವುದಾಗಿ ಉಪ ವಿಭಾಗಾಧಿಕಾರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಪಶುಪಾಲನಾ ಇಲಾಖೆ ಅಧಿಕಾರಿಗಳು ದೃಢೀಕರಿಸಿರುವಂತೆ ಮುದ್ದರಂಗನಹಳ್ಳಿ ಗ್ರಾಮದಲ್ಲಿ 11,515 ಜಾನುವಾರುಗಳಿಗೆ. ಇಲ್ಲಿ ನಿವೇಶನ ಹಂಚಿಕೆ ಮಾಡಿದರೆ ಜಾನುವಾರುಗಳಿಗೆ ಮೇವಿಗೆ ತೊಂದರೆ ಆಗಲಿದೆ. ಜೊತೆಗೆ ತಾಲ್ಲೂಕಿನಲ್ಲಿ ಪ್ರತಿ ಗ್ರಾಮ ವ್ಯಾಪ್ತಿಯಲ್ಲಿ ನಿವೇಶನ ನೀಡಲಾಗುತ್ತಿದೆ. ಆದರೆ ಇಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ನಿವೇಶನ ರಹಿತರಿಗೆ ನಿವೇಶನ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದರು.

ಇಲ್ಲಿ ನಿವೇಶನ ಹಂಚಿಕೆ ಮಾಡುವ ಮೂಲಕ ಕುರಿಗಾಹಿ ಮತ್ತು ಜಾನುವಾರು ಸಾಕಾಣಿಕೆ ಮಾಡುವರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಅಧಿಕಾರಿಗಳು ಮಾಡಲು ಹೊರಟಿರುವುದು ಶೋಚನೀಯ. ಇಲ್ಲಿ ಯಾವುದೇ ಕಾರಣಕ್ಕೂ ನಿವೇಶನ ಹಂಚಿಕೆ ಮಾಡದೆ ಗೋಮಾಳಕ್ಕೆ ಮೀಸಲಿಡುವಂತೆ ಒತ್ತಾಯಿಸಿ ಗ್ರೇಡ್- 2 ತಹಶೀಲ್ದಾರ್ ಮುರಳೀಧರ್ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ನಾಗರಾಜು, ರಾಜಣ್ಣ, ರಂಗನಾಥ್, ರವಿ, ಪುಟ್ಟರಂಗಪ್ಪ, ಜಯಣ್ಣ, ತಿಪ್ಪೇಸ್ವಾಮಿ, ಗುರುಸಿದ್ದಪ್ಪ, ಕೃಷ್ಣಪ್ಪ, ಮಹಲಿಂಗಪ್ಪ, ಶಿವಲಿಂಗಯ್ಯ, ಪ್ರಕಾಶ್, ಈಶ್ವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.