ADVERTISEMENT

ನೂರಾರು ಜನರಿಗೆ ಜ್ವರ: ನಿಗಾವಹಿಸಲು ಸೂಚನೆ

ತಹಬದಿಗೆ ಬಾರದ ಡೆಂಗಿ, ಕೊನೆಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 9:20 IST
Last Updated 11 ಜುಲೈ 2017, 9:20 IST

ತುಮಕೂರು: ನಗರದಲ್ಲಿ ಹೆಚ್ಚುತ್ತಿರುವ ಡೆಂಗಿ, ಚಿಕೂನ್ ಗುನ್ಯಾ, ಮೆದುಳು ಜ್ವರದಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಸೋಮವಾರ ಶಾಸಕ ಡಾ. ರಫೀಕ್ ಅಹಮದ್ ತಮ್ಮ ಕಚೇರಿಯಲ್ಲಿ ನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು.

‘ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳಿಗೆ ಹೆಚ್ಚು ಜನರು ತುತ್ತಾಗುತ್ತಿದ್ದು, ಹಲವಾರು ಮಂದಿ ಆಸ್ಪತ್ರೆ ಸೇರಿದ್ದಾರೆ. ನೂರಾರು ಪ್ರಕರಣಗಳು ವರದಿಯಾಗಿವೆ. ರೋಗದ ನಿಯಂತ್ರಣಕ್ಕೆ ಪಾಲಿಕೆಯ ಪರಿಸರ ಎಂಜನಿಯರ್‌ಗಳು, ಹೆಲ್ತ್ ಇನ್‌ಸ್ಪೆಕ್ಟರ್‌ ಮತ್ತು ಜಿಲ್ಲಾಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ  ತುರ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಪರಿಸರ ಎಂಜಿನಿಯರ್‌ಗಳು ರೋಗಿಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಜನರಿಗೆ ಆಗಿರುವ ತೊಂದರೆಗಳ ಬಗ್ಗೆ ವಿವರ ಪಡೆದು ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಬೇಕು ಎಂದರು.

ADVERTISEMENT

ಎಲ್ಲೆಲ್ಲಿ ನೀರು ಹರಿಯಲು ತೊಂದರೆಯಾಗಿದೆಯೋ ಅಂತಹ ಕಡೆಗಳಲ್ಲಿ ತಕ್ಷಣವೇ ಕಾಮಗಾರಿ ನಡೆಸಿ ನೀರು ಹರಿಯಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.

ಮಳೆಯಿಲ್ಲದ ಕಾರಣ ಜನರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಕಷ್ಟಕರವಾಗುತ್ತಿದೆ. ಆದರೂ ಶಕ್ತಿ ಮೀರಿ ನೀರನ್ನು ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾಗರಿಕರು ನೀರು ಸಂಗ್ರಹಣೆ ಮಾಡುವುದು ಅನಿವಾರ್ಯ.  ಆದರೆ ಈ ರೀತಿ ಸಂಗ್ರಹಣೆಯಾದ ನೀರಿನಲ್ಲಿಯೇ ಡೆಂಗಿ, ಚಿಕೂನ್‌ ಗುನ್ಯಾ ರೋಗಾಣು ಹೊಂದಿದ ಸೊಳ್ಳೆಗಳು ಸಂತಾನೋತ್ಪತ್ತಿ ಹೆಚ್ಚು ಮಾಡಿಕೊಳ್ಳುತ್ತವೆ ಎಂದರು.

ಸಾರ್ವಜನಿಕರು ನೀರು ಸಂಗ್ರಹಿಸುವ ಎಲ್ಲಾ ಪಾತ್ರೆ, ತೊಟ್ಟಿಗಳನ್ನು ಸಂಪೂರ್ಣ ಸೊಳ್ಳೆಗಳು ಹೋಗದಂತೆ ಮುಚ್ಚಬೇಕು ಎಂದರು. ಪಾಲಿಕೆಯಲ್ಲಿರುವ ನಾಲ್ಕು  ಧೂಮೀಕರಣ (ಫಾಗಿಂಗ್) ಯಂತ್ರಗಳಲ್ಲಿ 3 ಮಾತ್ರ ಕೆಲಸ ಮಾಡುತ್ತಿದ್ದು, ದುರಸ್ತಿಯಲ್ಲಿರುವ ಮತ್ತೊಂದನ್ನು ಶೀಘ್ರ ದುರಸ್ತಿ ಮಾಡಿ ಬಳಕೆ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿಗಳಿಂದ ಸೊಳ್ಳೆಗಳ ಲಾರ್ವ ನಾಶ ಮಾಡುವ ಅಬೇಟ್ ದ್ರಾವಣದ ಜತೆಗೆ, ಬಿಟಿಐ ದ್ರಾವಣವನ್ನು ಖರೀದಿಸಿ 35 ವಾರ್ಡ್‌ಗಳಲ್ಲಿ ಸಿಂಪಡಿಸುವಂತೆ ಪರಿಸರ ಎಂಜಿನಿಯರ್‌ಗಳಿಗೆ ಆದೇಶಿಸಿದರು.

ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ವೀಣಾ ಮಾತನಾಡಿ, ನಗರದಲ್ಲಿ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಈಗಾಗಲೇ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ 450ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಎ.ಎನ್.ಎಂ ಕಾರ್ಯಕರ್ತರನ್ನು ನಿಯೋಜಿಸಿ ಲಾರ್ವ ಸರ್ವೆ ನಡೆಸಲಾಗಿದೆ ಎಂದರು.

ರೋಗ ಹೆಚ್ಚಾಗಿ ಕಂಡು ಬಂದಿರುವ ಕುರಿಪಾಳ್ಯ, ಪಿ.ಎಚ್.ಕಾಲೊನಿ, ವಿದ್ಯಾನಗರ, ಎನ್.ಆರ್.ಕಾಲೋನಿ, ವಾಲ್ಮೀಕಿ ನಗರ, ಮರಳೂರು ದಿಣ್ಣೆ ಸೇರಿದಂತೆ ಪ್ರತಿ ಮನೆ ಮನೆಗೆ ತೆರಳಿ ನೀರು ಸಂಗ್ರಹಣಾ ತೊಟ್ಟಿ,  ಸ್ವಚ್ಛತೆ ಕಾಯ್ದುಕೊಳ್ಳಲು ಜಾಗೃತಿ ಆಂದೋಲನ  ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ. ವೀರಭದ್ರಯ್ಯ ಮಾತನಾಡಿ, ಇದುವರೆಗೂ 180 ಡೆಂಗಿ ಪ್ರಕರಣಗಳು ವರದಿಯಾಗಿವೆ ಎಂದರು.

ನಗರಪಾಲಿಕೆಯವರು ಸೊಳ್ಳೆಗಳ ನಿಯಂತ್ರಣಕ್ಕೆ ಬೆಳಿಗ್ಗೆ 5ರಿಂದ 7 ಗಂಟೆ ಮತ್ತು ಸಂಜೆ 5ರಿಂದ 7 ಗಂಟೆ  ಧೂಮೀಕರಣ ಮಾಡಬೇಕು.  ಖಾಲಿ ಸೈಟ್‌ಗಳಲ್ಲಿ ಬೆಳೆದಿರುವ ಗಿಡ-ಗಂಟೆಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಿದರು. ನಗರಪಾಲಿಕೆಯ ಎಇಇ ತಿಪ್ಪೇಸ್ವಾಮಿ, ವಸಂತ್‌  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.