ADVERTISEMENT

ನ್ಯಾನೊ ಸಂಶೋಧನೆ ಮುಂದಿನ ಭವಿಷ್ಯ

ಅಂತರ್‌ ವಿ.ವಿ ದಕ್ಷಿಣ ವಲಯ ವಿದ್ಯಾರ್ಥಿಗಳ ಸಂಶೋಧನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 10:46 IST
Last Updated 16 ಫೆಬ್ರುವರಿ 2017, 10:46 IST
ತುಮಕೂರು: ಮುಂದಿನ ಭವಿಷ್ಯ ನ್ಯಾನೊ ಸಂಶೋಧನೆಯಾಗಿದೆ. ಸಣ್ಣ, ಸಣ್ಣ ಸಂಶೋಧನೆಗಳು ದೊಡ್ಡ ದೊಡ್ಡ ಲಾಭ ತಂದುಕೊಡಲಿವೆ ಎಂದು  ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್‌.ಎ.ಕೋರಿ ಅಭಿಪ್ರಾಯಪಟ್ಟರು.
 
ತುಮಕೂರು ವಿ.ವಿಯಲ್ಲಿ ಬುಧವಾರ ಮುಕ್ತಾಯಗೊಂಡ ಅಂತರ್‌ ವಿಶ್ವವಿದ್ಯಾಲಯಗಳ ದಕ್ಷಿಣ ವಲಯ ವಿದ್ಯಾರ್ಥಿಗಳ ಸಂಶೋಧನಾ ಸಮಾವೇಶದಲ್ಲಿ ಮಾತನಾಡಿದರು.
 
ಭಾರತದ ಪುರಾಣ, ಪಂಚತಂತ್ರಗಳಲ್ಲಿ ಎಲ್ಲವೂ ಇದೆ. ಇಲ್ಲಿರುವ ಅನೇಕ ಕಥನಗಳ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಅವುಗಳ ಬಗ್ಗೆ ಚಿಂತಿಸುವುದಿಲ್ಲ, ಸಂಶೋಧನೆ ಮಾಡುವುದಿಲ್ಲ. ಆದರೆ ಪಾಶ್ಚಾತ್ಯರು ಇಂಥ ಚಿಂತನೆಗಳನ್ನು ವಾಸ್ತವಕ್ಕೆ ತರುತ್ತಾರೆ. ಆನಂತರ ನಾವು, ಇದು ಮೊದಲೇ ನಮ್ಮಲ್ಲಿ ಇತ್ತು ಎಂದು ಹೇಳುತ್ತೇವೆ. ಇದು ಬದಲಾಗಬೇಕು. ಸಣ್ಣ, ಸಣ್ಣ ಸಂಗತಿಗಳನ್ನು ಚಿಂತಿಸಬೇಕು, ಅವುಗಳ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ಸಲಹೆ ನೀಡಿದರು.
 
ಮಾನವನ ಅಗತ್ಯಗಳು ಹೊಸ ಹೊಸ ಸಂಶೋಧನೆಗೆ ಅವಕಾಶ ಮಾಡಿಕೊಡುತ್ತವೆ. ಸಂಪನ್ಮೂಲಗಳು ಬರಿದಾಗದಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಈಗ ನ್ಯಾನೊ ವಿಜ್ಞಾನದಲ್ಲಿ ದೊಡ್ಡ ಮಟ್ಟದ ಸಂಶೋಧನೆಗಳು ನಡೆಯುತ್ತಿವೆ. ದೊಡ್ಡದೊಡ್ಡ ಕಟ್ಟಡಗಳು, ಸೇತುವೆಗಳನ್ನು ಕಟ್ಟಲು  ಇನ್ನು ಮುಂದೆ ಲಾರಿಗಟ್ಟಲೆ ಲೋಡು ಕಬ್ಬಿಣ ಬೇಕಾಗಿಲ್ಲ. ಒಂದು ಲಾರಿ ಕಬ್ಬಿಣದಲ್ಲೇ ದೊಡ್ಡ ಸೇತುವೆ ಕಟ್ಟುವಂತಹ ಸಾಧ್ಯತೆ ನ್ಯಾನೊ ಸಂಶೋಧನೆಯಿಂದ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
 
ದೇಶದಲ್ಲಿ ಹಲವು ರೀತಿಯ ಸಮಸ್ಯೆಗಳು, ವೈವಿಧ್ಯತೆಯ ನಡುವೆಯೂ ಕೈಗಾರಿಕೆ, ಕೃಷಿ, ಎಂಜಿನಿಯರಿಂಗ್, ಆರೋಗ್ಯ, ಮಾಹಿತಿ ತಂತ್ರಜ್ಞಾನದಲ್ಲಿ ಅನೇಕ ಮಹತ್ವದ ಸಾಧನೆಯನ್ನು ಸಾಧಿಸಲಾಗಿದೆ. ಅನೇಕ ಸಂಶೋಧನೆಗಳು ನಡೆದಿವೆ ಎಂದು  ಹೇಳಿದರು.
ಡಾ.ಅಬ್ದುಲ್‌ ಕಲಾಂ ಅವರು ಹೇಳುವಂತೆ ಎಲ್ಲವನ್ನು ಪ್ರಶ್ನೆ ಮಾಡುವ ಮಕ್ಕಳು ನಿಜವಾದ ವಿಜ್ಞಾನಿಗಳಾಗಿದ್ದಾರೆ. ಎಲ್ಲವನ್ನೂ ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
 
ಸಂಶೋಧನಾ ಪ್ರಬಂಧಗಳನ್ನು ಮಂಡಿಸುವಲ್ಲಿ ಭಾರತ ಚೀನಾಕ್ಕಿಂತ ಹಿಂದಿದೆ. ಆದರೆ ಚೀನಾಕ್ಕಿಂತಲೂ ಉತ್ತಮ ಗುಣಮಟ್ಟದ ಹೆಚ್ಚಿನ ಸಂಶೋಧನಾ ಪ್ರಬಂಧಗಳು ದೇಶದಲ್ಲಿ ರಚನೆಯಾಗುತ್ತಿವೆ ಎಂಬುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
 
ತುಮಕೂರು ವಿ.ವಿ ಕುಲಪತಿ ಡಾ.ಎ.ಎಚ್‌.ರಾಜಾಸಾಬ್‌ ಮಾತನಾಡಿ, ಆವಿಷ್ಕಾರಗಳು ಕೆಲವೊಮ್ಮೆ ಅನಿರೀಕ್ಷಿತವಾಗಿ ಹುಟ್ಟುತ್ತವೆ. ಆದರೆ ಸಾಕಷ್ಟು ಆವಿಷ್ಕಾರಗಳಿಗೆ ಕಠಿಣ ಪರಿಶ್ರಮ, ನಿರಂತರ ಓದು, ಅಧ್ಯಯನ, ಸಂಶೋಧನೆಗಳಿಂದ ಮಾತ್ರ ಸಾಧ್ಯ ಎಂದರು.
 
ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಆವಿಷ್ಕಾರ ಕೇಂದ್ರಗಳನ್ನು ಸ್ಥಾಪಿಸಬೇಕು. ಇಲ್ಲಿ ವಿಜ್ಞಾನಿಗಳು, ವಿದ್ಯಾರ್ಥಿಗಳು, ಜನ ಸಾಮಾನ್ಯರು ಸಹ ತಮ್ಮ ಹೊಸ ಚಿಂತನೆಗಳನ್ನು ಸಂಶೋಧನೆ ಮಾಡಲು ಅವಕಾಶ ಇರುವಂತಿರಬೇಕು. ಈ ನಿಟ್ಟಿನಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ ಚಿಂತಿಸಿದೆ ಎಂದರು.
 
ವೈಜ್ಞಾನಿಕ ಚಿಂತನೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಆದರೆ ದೇಶದ ಜನರದ್ದು ದ್ವಂದ್ವ ಮನಸ್ಸು. ಶಾಲಾ–ಕಾಲೇಜಿನಲ್ಲಿ ವಿಜ್ಞಾನ ಬೋಧಿಸಿ ಮನೆಯಲ್ಲಿ ದೇವರನ್ನು ಪೂಜಿಸುತ್ತಾರೆ. ಇದು ಬೇರೆಯವರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ. ಈ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
 
ವೈಜ್ಞಾನಿಕ ಮನೋಭಾವ ಬೆಳೆಸಬೇಕು. ತ್ರಿ ಈಡಿಯಟ್‌ ಹಿಂದಿ ಸಿನಿಮಾ ಉತ್ತಮ ಉದಾಹರಣೆಯಾಗಿದೆ ಎಂದರು. ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ  ನಿರ್ದೇಶಕ ಅಮರೇಂದ್ರ ಪಾಣಿ, ಸಹಾಯಕ ನಿರ್ದೇಶಕಿ ಉಷಾ ರಾಯ್ ನೇಗಿ, ಕುಲ ಸಚಿವ ಪ್ರೊ.ವೆಂಕಟೇಶ್ವರಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.