ADVERTISEMENT

ಪರಿಶಿಷ್ಟ ಜಾತಿ ಪಟ್ಟಿಗೆ ಮಡಿವಾಳರನ್ನು ಸೇರಿಸಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:11 IST
Last Updated 3 ಫೆಬ್ರುವರಿ 2017, 7:11 IST

ತಿಪಟೂರು: ಮಡಿವಾಳ ಜನಾಂಗ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿ ಹೊಂದಲು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಎಂದು ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ ಒತ್ತಾಯಿಸಿದರು.

ರಾಜ್ಯ ಮಡಿವಾಳ ಸಂಘ ಹಾಗೂ ವಿವಿಧ ರಾಜ್ಯಗಳ ಮಡಿವಾಳ ಸಂಘಗಳ ಸಹಯೋಗದಲ್ಲಿ ಕನ್ಯಾಕುಮಾರಿಯಿಂದ ದೆಹಲಿಯ ರಾಮಲೀಲಾ ಮೈದಾನದವರೆಗೆ ಹಮ್ಮಿಕೊಂಡಿರುವ ಮಾಚಿದೇವ ರಥಯಾತ್ರೆಗೆ ಬಂದಿದ್ದ ಸಂದರ್ಭದಲ್ಲಿ ಮಾತನಾಡಿದರು. ಮಡಿವಾಳ ಜನಾಂಗಕ್ಕೆ ಸಾಮಾಜಿಕ ನ್ಯಾಯಕ್ಕೆ ಒತ್ತಾಯಿಸಿ ರಥಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು. ಮಡಿವಾಳ ಸಮುದಾಯ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಪ್ರಮುಖವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಮುದಾಯ ಯಶಸ್ಸು ಕಾಣಬೇಕಿದೆ.

ಬಡತನ ನಿರ್ಮೂಲನೆ ಮಾಡಲು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡಲು ಮಾ. 10ರಂದು ದೆಹಲಿ ರಾಮಲೀಲಾ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಡಿವಾಳ ಸಮುದಾಯದ ಒಗ್ಗಟ್ಟು ಪ್ರದರ್ಶಿಸಬೇಕು. ರಾಜಕೀಯವಾಗಿ ಮಡಿವಾಳ ಸಮುದಾಯಕ್ಕೆ ಯಾವುದೇ ಸ್ಥಾನಮಾನ ದೊರೆತಿಲ್ಲ. ಮಡಿವಾಳ ಜನಾಂಗ ಜಾಗೃತಿಗೊಳ್ಳಬೇಕು ಎಂದರು.

ತಾಲ್ಲೂಕು ಮಾಚಿದೇವ ಮಡಿವಾಳ ಸಂಘದವರು ರಥಯಾತ್ರೆಗೆ ನಗರದ ಪ್ರವಾಸಿ ಮಂದಿರದ ಬಳಿ ಅದ್ಧೂರಿ ಸ್ವಾಗತ ಕೋರಿದರು. ವಿವಿಧ ಜನಪದ ಕಲಾತಂಡ ಹಾಗೂ ಪೂರ್ಣಕುಂಬ ಕಳಸದೊಂದಿಗೆ ನಗರದ ಪ್ರವಾಸಿ ಮಂದಿರದಿಂದ ಕೋಡಿ ವೃತ್ತದವರೆಗೆ ರಥೋತ್ಸವ ಮೆರವಣಿಗೆ ನಡೆಯಿತು.
ಶಾಸಕ ಕೆ.ಷಡಕ್ಷರಿ ರಥಯಾತ್ರೆಗೆ ಮಾಲಾರ್ಪಣೆ ಮಾಡಿದರು. ಮಾಜಿ ಶಾಸಕ ಬಿ.ಸಿ.ನಾಗೇಶ್, ಜೆಡಿಎಸ್ ಮುಖಂಡ ಲೋಕೇಶ್ವರ, ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ನಿಜಲಿಂಗಪ್ಪ, ಉಪಾಧ್ಯಕ್ಷರಾದ ನರಸಿಂಹಮೂರ್ತಿ, ಮಹಾಲಿಂಗಪ್ಪ, ಕಾಳಪ್ಪ, ನಿರಂಜನಮೂರ್ತಿ, ಗೌರವಾಧ್ಯಕ್ಷರಾದ ಚನ್ನಬಸವಯ್ಯ, ಮಲ್ಲೇಶ್ವಪ್ಪ, ಪ್ರಧಾನ ಕಾರ್ಯದರ್ಶಿ ಬಳ್ಳೆಕಟ್ಟೆ ಶಂಕರಪ್ಪ, ಈಚನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.