ADVERTISEMENT

ಪಶುಪಾಲನೆ ಇಲಾಖೆ ಅಧಿಕಾರಿ, ಸಿಬ್ಬಂದಿ ಧರಣಿ

​ಪ್ರಜಾವಾಣಿ ವಾರ್ತೆ
Published 17 ಮೇ 2017, 4:46 IST
Last Updated 17 ಮೇ 2017, 4:46 IST

ತುಮಕೂರು: ‘ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ಪಶುವೈದ್ಯಕೀಯ ಸಂಘ, ಪಶು ವೈದ್ಯಕೀಯ ಪರಿವೀಕ್ಷಕರ ಸಂಘ ಹಾಗೂ ಪಶು ವೈದ್ಯಕೀಯ ಸಹಾಯಕರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಪ್ರಾರಂಭಿಸಿದರು.

‘ಸರ್ಕಾರವು 2012ರಲ್ಲಿ ಕರ್ನಾಟಕ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಪುನರ್ ರಚನೆಗೆ ಸಂಬಂಧಿಸಿದಂತೆ ಹೊರಡಿಸಿದ ಆದೇಶದ ಪ್ರಕಾರ 2012ರ ಡಿಸೆಂಬರ್ 31ರಂದು ಗೆಜೆಟೆಡ್ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಅದರಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಉನ್ನತ ಮಟ್ಟದ ಸಮಿತಿ ನೇಮಕ ಮಾಡಲಾಗಿತ್ತು. ಸಮಿತಿಯು 2016ರಲ್ಲೇ ವರದಿ ಸಲ್ಲಿಸಿದೆ. ಸಂಪುಟದ ಒಪ್ಪಿಗೆಯೂ ದೊರೆತಿದೆ. ಆದಾಗ್ಯೂ ವೃಂದ ಮತ್ತು ನೇಮಕಾತಿ ಅಂತಿಮ ಅಧಿ ಸೂಚನೆ ಹೊರಡಿಸಿಲ್ಲ’ ಎಂದು ಆರೋಪಿಸಿದರು.

ಐದು ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೌಕರರು ಬಡ್ತಿ ವಂಚಿತರಾಗಿದ್ದಾರೆ. ಇಲಾಖೆಯ ಪುನರ್ ರಚನೆ ಕಾಲದಲ್ಲಿ ರದ್ದಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಕಡ್ಡಾಯ ನಿರೀಕ್ಷಣಾವಧಿಯಲ್ಲಿರುವುದರಿಂದ ಐದಾರು ತಿಂಗಳಿಂದ ವೇತನವಿಲ್ಲದೇ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಸಮಸ್ಯೆ ವಿವರಿಸಿದರು.

ADVERTISEMENT

ಇಲಾಖೆ ಪುನರ್ ರಚನೆ ಬಳಿಕ ಮಂಜೂರಾದ ಹುದ್ದೆಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಸ್ಥಗಿತಗೊಂಡಿದೆ. ಇದರಿಂದ ಅನೇಕ ಹುದ್ದೆಗಳು ಖಾಲಿ ಇವೆ. ಅನೇಕ ತಾಲ್ಲೂಕುಗಳಲ್ಲಿ ಪಶುವೈದ್ಯಾಧಿಕಾರಿಗಳೇ ಸಹಾಯಕ ನಿರ್ದೇಶಕರಾಗಿ ಹೆಚ್ಚುವರಿ ಕಾರ್ಯನಿರ್ವಹಿಸುವಂತಾಗಿದೆ. ಹೀಗಾಗಿ ಸರ್ಕಾರವು ನೇಮಕಾತಿಗೆ ಅಂತಿಮ ಅಧಿಸೂಚನೆ ಹೊರಡಿಸಿದರೆ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ಹೇಳಿದರು.

ಕರ್ನಾಟಕ ಪಶು ವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ.ವಿ.ಸಿ.ರುದ್ರಪ್ರಸಾದ್, ಪ್ರಧಾನ ಕಾರ್ಯದರ್ಶಿ ಡಾ.ಎ.ಸಿ. ದಿವಾಕರ್, ಜಂಟಿ ಕಾರ್ಯದರ್ಶಿ ಡಾ.ಬಿ.ಆರ್.ನಂಜೇಗೌಡ, ಖಜಾಂಚಿ ಡಾ.ಆರ್.ಎಂ.ನಾಗಭೂಷಣ್, ಪಶುವೈದ್ಯಕೀಯ ಪರಿವೀಕ್ಷಕ ಸಂಘದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.