ADVERTISEMENT

ಬಂದೀತೆ ಮಳೆ; ತಣಿದೀತೆ ಇಳೆ...

ಮತ್ತೊಂದು ಬರಗಾಲ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 9:08 IST
Last Updated 29 ಆಗಸ್ಟ್ 2015, 9:08 IST

ಪಾವಗಡ: ಬೀಳು ಬಿಟ್ಟಿರುವ ಭೂಮಿ, ಒಣಗಿದ ಕೆರೆ– ಕಟ್ಟೆ, ಅಲ್ಲಲ್ಲಿ ಕಂಡು ಬರುವ ಸೊರಗಿದ ತೆಂಗು, ಅಡಿಕೆ ತೋಟ. ಹಿಡಿ ಮೇವಿಗಾಗಿ ಪರಿತಪಿಸುವ ಬಡಕಲು ಜಾನುವಾರು... – ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸಾಮಾನ್ಯ ದೃಶ್ಯವಿದು.

ಮಳೆ ಅಭಾವದಿಂದಾಗಿ ತಾಲ್ಲೂಕಿನ ಮುಖ್ಯ ಬೆಳೆ ಶೇಂಗಾ ನೆಲ ಕಚ್ಚಿದೆ. ಹೊಲದಲ್ಲಿ ಬೆಳೆಯಿಲ್ಲದೆ, ಕೈಯಲ್ಲಿ ಕೆಲಸವಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ತಾಲ್ಲೂಕಿನ ಸಾವಿರಾರು ಕೂಲಿ ಕಾರ್ಮಿಕರು, ರೈತರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಈ ಬಾರಿ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಸಕಾಲಕ್ಕೆ ಮಳೆಯಾಗದ ಕಾರಣ ಸಾಲ ಮಾಡಿ ಖರೀದಿಸಿದ್ದ ಬಿತ್ತನೆ ಶೇಂಗಾವನ್ನು ರೈತರು ಮಿಲ್‌ಗಳಿಗೆ ಮಾರಿದರು. ಕೃಷಿ ಇಲಾಖೆಯು ತಾಲ್ಲೂಕಿನಲ್ಲಿ 65 ಸಾವಿರ ಹೆಕ್ಟೇರ್ ಬಿತ್ತನೆಗೆ ಗುರಿ ಇಟ್ಟುಕೊಂಡಿತ್ತು. ಅದರಲ್ಲಿ ಶೇ 12ರಷ್ಟು ಸಾಧನೆಯೂ ಆಗಿಲ್ಲ.

ಮೇ, ಜೂನ್ ಆರಂಭದಲ್ಲಿ ಮಳೆ ಬಿದ್ದರೂ ನಂತರದ ದಿನಗಳಲ್ಲಿ ವರುಣ ತಲೆಮರೆಸಿಕೊಂಡಿದ್ದರಿಂದ ರೈತರು ಮಳೆಗಾಗಿ ಆಕಾಶದತ್ತ ದೃಷ್ಟಿ ನೆಟ್ಟು ನಿಟ್ಟುಸಿರು ಬಿಟ್ಟರು. ಸಾಲ ಮಾಡಿ ಶೇಂಗಾ ಬಿತ್ತಿದವರು ಕಂಗಾಲಾದರು. ನೆಲ ಹಸನುಗೊಳಿಸಿ, ಬೀಜ ಖರೀದಿಸಿದವರು ಸಕಾಲಕ್ಕೆ ಮಳೆ ಬಾರದೆ ಹಣ ವ್ಯರ್ಥವಾಯಿತಲ್ಲಾ ಎಂದು ಕೈ ಚೆಲ್ಲಿ ಕುಳಿತರು.

ಮಳೆ ಬಿದ್ದರೂ ಪ್ರಯೋಜನವಿಲ್ಲ: ತಾಲ್ಲೂಕಿನ ಕೆಲವೆಡೆ ಕಳೆದ ಕೆಲವು ದಿನಗಳಿಂದ ಮಖೆ ಮಳೆ ಸುರಿಯಿತು. ಆದರೆ ಇದರಿಂದ ಶೇಂಗಾ ಬೆಳೆಗೆ ಯಾವುದೇ ಪ್ರಯೋಜನವಾಗಲಿಲ್ಲ.

ಬಹುತೇಕ ತಾಕುಗಳಲ್ಲಿ ಶೇಂಗಾ ಸಂಪೂರ್ಣ ಒಣಗಿದೆ. ಮಳೆ ಬಂದು ಗಿಡ ಚಿಗುರಿದರೂ ಇಳುವರಿ ಬಾರದು. ಗಿಡ ಬೆಳೆದರೂ ಹೂ ಬಿಡುವ ಕಾಲ ಮುಗಿದಿರುವುದರಿಂದ ಮೇವಿಗಾಗಿ ಬಳಸಬಹುದು.

ಅಲ್ಲಲ್ಲಿ ಕಂಬಳಿ ಹುಳು, ಬೆಂಕಿ ಸೀಡೆ ಕಾಣಿಸಿಕೊಂಡಿದ್ದು, ಔಷಧಿ ಸಿಂಪಡಿಸಲೂ ರೈತರು ಆಸಕ್ತಿ ತೋರುತ್ತಿಲ್ಲ. ಶೇಂಗಾ, ತೊಗರಿ ಗಿಡಗಳಲ್ಲಿ ಕಾಯಿ ಕಟ್ಟುತ್ತಿಲ್ಲ. ಅವರೆ, ಹುರಳಿಗೆ ಕೀಟ ಬಾಧೆ ಕಾಡುತ್ತಿದೆ.

ನೀರಾವರಿ ಪ್ರದೇಶದ ರೈತರ ಸ್ಥಿತಿಯೂ ಆಶಾದಾಯಕವಾಗಿಲ್ಲ. ಸಾವಿರ ಅಡಿ ಆಳಕ್ಕೆ ಅಂತರ್ಜಲ ಕುಸಿದಿದೆ. ಶೇಂಗಾ ಇರಲಿ, ಅಡಿಕೆ, ತೆಂಗು ರಕ್ಷಿಸಿಕೊಳ್ಳುವುದೂ ರೈತರಿಗೆ ಸವಾಲಿನ ಸಂಗತಿಯಾಗಿದೆ.

ಕೆರೆ– ಕುಂಟೆಗಳಲ್ಲಿ ನೀರಿಲ್ಲ: ತಾಲ್ಲೂಕಿನ ವಿವಿಧೆಡೆ ಕೆರೆ– ಕುಂಟೆಗಳು ಬತ್ತಿವೆ. ಜಾನುವಾರು, ಕಾಡುಪ್ರಾಣಿಗಳು ನೀರಿಗಾಗಿ ಹಪಹಪಿಸುವಂತಾಗಿದೆ. ಬೆಟ್ಟ, ಗುಡ್ಡಗಳಲ್ಲಿಯೂ ಆಹಾರ, ನೀರಿಲ್ಲದಿರುವುದರಿಂದ ಕರಡಿ, ಚಿರತೆ ಸೇರಿದಂತೆ ವನ್ಯಜೀವಿಗಳು ನಾಡಿಗೆ ಆಗಮಿಸಿ ದರ್ಶನವೀಯುತ್ತಿವೆ. ಜೊತೆಗೆ ಕೆಲ ಕೆರೆ, ಕಟ್ಟೆಗಳು ದುರಸ್ತಿಯಲ್ಲಿವೆ. ಮಳೆ ಬಂದರೂ ನೀರು ಪೋಲಾಗುವ ಸಂಭವವಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರುತ್ತದೆ.

ಜಾನುವಾರು‌ಮಾರಾಟ: ಕುಡಿಯುವ ನೀರು, ಮೇವಿನ ಅಭಾವದಿಂದಾಗಿ ತಾಲ್ಲೂಕಿನ ಬಹುತೇಕ ರೈತರು ಸಿಕ್ಕಷ್ಟು ಬೆಲೆಗೆ ಜಾನುವಾರುಗಳನ್ನು ಮಾರಿದ್ದಾರೆ. ರಾಮಕೃಷ್ಣ ಸೇವಾಶ್ರಮದಿಂದ ಮೇವು ವಿತರಿಸುವುದನ್ನು ಹೊರತುಪಡಿಸಿ ಸರ್ಕಾರ ಜಾನುವಾರು ರಕ್ಷಣೆಗೆ ಯಾವುದೇ ಕ್ರಮ ವಹಿಸಿಲ್ಲ.

ನೀರಿಗಾಗಿ ಕಾದಾಟ: ಕೊಳವೆ ಬಾವಿಗಳಲ್ಲಿ ನೀರು ತಳ ಕಚ್ಚಿರುವುದು, ನೀರು ಪೂರೈಕೆಯ ಮೇಲೆಯೂ ಪರಿಣಾಮ ಬೀರಿದೆ. ಪರಿಣಾಮವಾಗಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಬಿಂದಿಗೆ ನೀರಿಗಾಗಿ ನಿತ್ಯವೂ ಮಹಿಳೆಯರ ಕಾದಾಟ ಸಾಮಾನ್ಯವಾಗಿದೆ. ತುಂಬಾ ದೂರದಿಂದ ನೀರು ತರಬೇಕಾದ ಕಾರಣ ನೀರು ತರುವ ಹೊಣೆ ಪುರುಷರ ಹೆಗಲಿಗೆ ವರ್ಗಾವಣೆಯಾಗಿದೆ.

ಕೈಮಗ್ಗಕ್ಕೂ ಬಿಸಿ: ವೈ.ಎನ್.ಹೊಸಕೋಟೆ ಸೇರಿದಂತೆ ತಾಲ್ಲೂಕಿನಲ್ಲಿ ಕೈಮಗ್ಗ ನಂಬಿ ಜೀವನ ಸಾಗಿಸುವವರಿಗೂ ಬರದ ಬಿಸಿ ತಟ್ಟಿದೆ. ಕೂಲಿ ಕಾರ್ಮಿಕರು ವಲಸೆ ಹೋಗಿರುವುದರಿಂದಾಗಿ ಕಾರ್ಮಿಕರ ಅಭಾವದಿಂದ ಕೈಮಗ್ಗಗಳ ಮಾಲೀಕರು ಉದ್ಯಮ ನಿಲ್ಲಿಸುವ ಸ್ಥಿತಿಗೆ ತಲುಪಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.