ADVERTISEMENT

ಬಯಲು ಬಹಿರ್ದೆಸೆ ಮುಕ್ತ ಪಂಚಾಯಿತಿ: ವರದಿ ನೀಡಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 4:18 IST
Last Updated 22 ಸೆಪ್ಟೆಂಬರ್ 2017, 4:18 IST
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸಭೆಯಲ್ಲಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿದರು
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸಭೆಯಲ್ಲಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿದರು   

ತುಮಕೂರು: ‘ಶೇ 100ರಷ್ಟು ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಎನ್ನುವ ಸಾಧನೆಗೆ ಪಾತ್ರವಾಗಿರುವ ಪಂಚಾಯಿತಿಗಳ ವಿವರಗಳನ್ನು ಅಕ್ಟೋಬರ್‌ 2ರ ಒಳಗೆ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ಎನ್.ನರಸಿಂಹಮೂರ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದರು.

‘ಸ್ವಚ್ಛ ಭಾರತ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ಪ್ರತಿ ಮನೆಯೂ ಶೌಚಾಲಯ ಹೊಂದಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಈಗಾಗಲೇ ಬಾಕಿ ಇರುವ ಶೌಚಾಲಯ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಿ ವರದಿ ನೀಡಬೇಕು’ ಎಂದರು.

ADVERTISEMENT

ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಕ್ರಿಯಾಯೋಜನೆ ಮಂಡಿಸಿ ಅನುಮೋದನೆ ಪಡೆಯದೆ, ಸಿಇಒ ಮತ್ತು ಸಿಪಿಒ ಅವರಿಂದ ಕಡತಕ್ಕೆ ಸಹಿ ಪಡೆದಿರುವ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕ್ರಮಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಸ್ಥಾಯಿ ಸಮಿತಿ ಸಭೆಯ ಎದುರು ಪರಿಷ್ಕೃತ ಕ್ರಿಯಾಯೋಜನೆ ಮಂಡಿಸಿಲ್ಲ. ಸ್ಥಾಯಿ ಸಮಿತಿಯನ್ನು ಕಡೆಗಣಿಸಿರುವುದು ತರವಲ್ಲ. ಅಧಿಕಾರಿಗೆ ನೋಟಿಸ್ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.

154 ಟ್ಯಾಂಕ್ ನಿರ್ಮಾಣ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 154 ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೂ 74 ಕಾಮಗಾರಿಗಳು ಪೂರ್ಣಗೊಂಡಿವೆ. ಚಿಕ್ಕನಾಯನಹಳ್ಳಿಯಲ್ಲಿ 2, ಗುಬ್ಬಿ 17, ಕುಣಿಗಲ್ 2, ಕೊರಟಗೆರೆ 2, ತುರುವೇಕೆರೆ 7, ತುಮಕೂರು 23, ತಿಪಟೂರು 6, ಶಿರಾ 5, ಪಾವಗಡ 6 ಮತ್ತು ಮಧುಗಿರಿ ತಾಲ್ಲೂಕಿನಲ್ಲಿ 6 ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮುಕ್ತಾಯವಾಗಿದೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಶಿಕ್ಷಣ, ಆರೋಗ್ಯ, ಸಾಮಾಜಿಕ ಅರಣ್ಯ, ಕ್ರೀಡೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ತೋಟಗಾರಿಕೆ, ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ಸ್ಥಾಯಿ ಸಮಿತಿ ಸದಸ್ಯ ಕಾರ್ಯದರ್ಶಿ ಪ್ರಕಾಶ್, ಸದಸ್ಯರಾದ ಶಿವಮ್ಮ ಡಾ.ನಾಗರಾಜು, ಯಶೋಧಮ್ಮ, ಸಿದ್ದರಾಮಣ್ಣ, ಅಕ್ಕಮಹಾದೇವಿ, ಕಲ್ಲೇಶ್, ರಾಜಣ್ಣ ಹಾಜರಿದ್ದರು.

**

ಶಾಲಾ ಕಟ್ಟಡದ ದುರಸ್ತಿಗೆ ₹ 50 ಲಕ್ಷ

ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಶಿಥಿಲವಾಗಿರುವ ಶಾಲಾ ಕಟ್ಟಡಗಳ ದುರಸ್ತಿಗೆ ₹ 50 ಲಕ್ಷ ಬಿಡುಗಡೆಯಾಗಿದೆ. ಇದರಲ್ಲಿ ಸುಮಾರು 25 ಕ್ಕೂ ಹೆಚ್ಚು ಶಾಲೆಗಳ ದುರಸ್ತಿ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.