ADVERTISEMENT

ಬೆಳೆಗಿಂತ ಮೇವು ಬೆಳೆಯುವುದು ಲಾಭ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 4:48 IST
Last Updated 24 ಮಾರ್ಚ್ 2017, 4:48 IST

ತೋವಿನಕೆರೆ: ಬರಗಾಲದಿಂದ ಮಳೆ, ಬೆಳೆ, ಬೆಲೆಗಳಿಂದ ವಂಚಿತರಾಗುತ್ತಿರುವ ರೈತರಲ್ಲಿ ಕೆಲವರು ಮೇವು ಬೆಳೆದು ಖಾಸಗಿಯವರಿಗೆ ಮಾರಾಟ ಮಾಡಿ ಅದಾಯ ಕಾಣುತ್ತಿರುವುದು ಗ್ರಾಮದ ಸುತ್ತಮುತ್ತಲ ಹಳ್ಳಿಗಳಲ್ಲಿ ಕಂಡು ಬರುತ್ತಿದೆ.

ಗ್ರಾಮದ ಪಣಗಾರ್ ಟಿ.ವಿ.ಗೋಪಾಲಕೃಷ್ಣ  ತಮ್ಮ 2.20 ಎಕರೆ ಜಮೀನಿನಲ್ಲಿ ಕಳೆದ ಜನವರಿ ತಿಂಗಳ ಮೊದಲ ವಾರ ಜೋಳವನ್ನು ಬಿತ್ತಿ ಸಮೃದ್ದಿಯಾದ ಮೇವನ್ನು ಬೆಳೆದಿದ್ದಾರೆ.

ಬೀಜಕ್ಕೆ, ಭೂಮಿ ಹದ ಮಾಡಲು, ನಾಟಿ, ಗೊಬ್ಬರಕ್ಕೆ ₹ 15 ಸಾವಿರ ಖರ್ಚು ಮಾಡಿರುತ್ತಾರೆ. ಕೊಳವೆ ಬಾವಿಯಿಂದ ನೀರು ಹಾಯಿಸಿದ್ದು ನಾಟಿ ಮಾಡಿದ್ದ 45 ದಿನಗಳ ನಂತರ ಮೇವನ್ನು ವಿಭಾಗ ಮಾಡಿ ಕೆಲವರಿಗೆ ಮಾರಾಟ ಮಾಡಿ ₹ 50 ಸಾವಿರ ಸಂಪಾದಿಸಿರುತ್ತಾರೆ. ಮೇವು ಖರೀದಿ ಮಾಡಿರುವ ಹೆಚ್ಚಿನ ಜನ ಕುರಿ ಮತ್ತು ಮೇಕೆ ಸಾಕುವವರಾಗಿರುತ್ತಾರೆ.

ತೋವಿನಕೆರೆ ಸುತ್ತಮುತ್ತಲಿನ ಅನೇಕ ಜನ ಕೊಳವೆ ಬಾವಿ ಮಾಲೀಕರು ಬೆಳೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮೇವು ಬೆಳೆಯುವುದರ ಕಡೆ
ಗಮನ ಹರಿಸಿರುವುದು ಕಂಡು ಬರುತ್ತಿದೆ.

ಹೆಚ್ಚು ಆದಾಯ
ಮುಂಗಾರು ಸಮಯದಲ್ಲಿ ಮಳೆ ಬರದೆ ಇದ್ದುದರಿಂದ ಬೆಳೆ ಇಟ್ಟು ಅಪಾಯ ತಂದುಕೊಳ್ಳುವುದು ಬೇಡ ಎಂದು ಎರಡು ತಿಂಗಳಲ್ಲಿ ಮೇವು ಬರುತ್ತದೆ ಎಂದು ಜೋಳವನ್ನು ಬಿತ್ತಿದ್ದೆ. ಕೇವಲ ಏಳು ಸಲ ಮಾತ್ರ ನೀರು ಹಾಯಿಸಿದ್ದೇನೆ. ಖರ್ಚು ಹೋಗಿ ₹ 35 ಸಾವಿರಕ್ಕೂ ಹೆಚ್ಚು ಅದಾಯ ಬಂದಿದೆ ಎನ್ನುತ್ತಾರೆ ಮಾಲೀಕ ಟಿ.ವಿ.ಗೋಪಾಲಕೃಷ್ಣ.

*
ಮೇವು ಖರೀದಿಗೆ ಸಿದ್ಧ
ಸರ್ಕಾರ ಟನ್‌ಗೆ ₹ 1500 ಹಸಿ ಮೇವು ಖರೀದಿಸಲು ಸಿದ್ಧವಿದೆ. ಒಂದು ಎಕರೆಯಲ್ಲಿ ವ್ಯವಸ್ಥಿತವಾಗಿ ಬೆಳೆದರೆ 60 ದಿನಗಳಲ್ಲಿ 15 ಟನ್‌ಗೂ ಹೆಚ್ಚು ಬರುತ್ತದೆ. ಮೇವಿನ ಬೀಜವನ್ನು ನಾವೇ ಕೊಡುತ್ತೇವೆ. ಬೆಳೆಗಾರರು ಮೇವು ಕಟ್ಟು ಮಾಡಿ ವಾಹನಕ್ಕೆ ತುಂಬಿಕೊಡಬೇಕು.

ADVERTISEMENT

ಸಾಗಣೆ ನಾವೇ ಮಾಡಿಕೊಳ್ಳುತ್ತೇವೆ. ನೀರು ಹಾಗೂ ಜಮೀನಿನ ಅನುಕೂಲವಿರುವ ರೈತರು ಪ್ರಯತ್ನಿಸಬಹುದು ಎನ್ನುತ್ತಾರೆ ಕೊರಟಗೆರೆ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರವಿ.

*
ನಾಲ್ಕು ಹಸು ಸಾಕಿದ್ದೇನೆ. ಅದರಲ್ಲಿ ಒಂದನ್ನು ₹ 15 ಸಾವಿರಕ್ಕೆ ಮಾರಾಟ ಮಾಡಿ ಮೇವನ್ನು ಖರೀದಿಸಿರುತ್ತೇನೆ. ಮಿಕ್ಕ ಮೂರು ಹಸು ಸಾಕಿ ಹಾಲನ್ನು ಮಾರಿ ಜೀವನ ನಿರ್ವಹಣೆ ಮಾಡುತ್ತೇವೆ.
-ವೀರಭದ್ರಯ್ಯ, ದಾಸಾಲಕುಂಟೆ ಗ್ರಾಮದ ಹೈನುಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.