ADVERTISEMENT

ಮಧ್ಯಾಹ್ನದ ಬಿಸಿಯೂಟಕ್ಕೆ ಇಲ್ಲ ಬೇಳೆ ಕಾಳು

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 9:43 IST
Last Updated 6 ಜುಲೈ 2017, 9:43 IST

ತುಮಕೂರು: ಅಕ್ಷರ ದಾಸೋಹ ಯೋಜನೆಯಡಿ ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಮೂರು ತಿಂಗಳಿಂದ ತೊಗರಿ ಬೇಳೆ, ತಾಳೆ ಎಣ್ಣೆ ಪೂರೈಕೆಯಾಗಿಲ್ಲ. ಬೇಳೆ ಇಲ್ಲದ ಕಾರಣ ಸಾಂಬಾರು ಸಿದ್ಧಪಡಿಸಲು ಶಾಲಾ ಮುಖ್ಯ ಶಿಕ್ಷಕರು ಹೈರಾಣು ಆಗುತ್ತಿದ್ದಾರೆ. ಅಳಿದುಳಿದ ಕಡ್ಲೆಕಾಳನ್ನು ಒಡೆಸಿ ಬೇಳೆ ಮಾಡಿಕೊಂಡು ಬಳಸಲಾಗುತ್ತಿದೆ ಎಂದು ಕೆಲವು ಶಿಕ್ಷಕರು ತಿಳಿಸಿದ್ದಾರೆ.

‘ಬೇಸಿಗೆಯಲ್ಲೂ ಬಿಸಿಯೂಟ ಹಾಕಲಾಗಿದೆ. ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಸಹ ಬೇಳೆ ಬಂದಿರಲಿಲ್ಲ. ಪ್ರತಿ ತಿಂಗಳು ನಮಗೆ 6 ಕೆಜಿ ಬೇಳೆ ಬೇಕು. ತರಕಾರಿ, ಸಾಂಬಾರು ಪುಡಿಗೆ ನೀಡುವ ಹಣದಲ್ಲೆ ಬೇಳೆ ಕೊಳ್ಳುವಂತೆ ಇಲಾಖೆಯಿಂದ ಸುತ್ತೋಲೆ ಬಂದಿದೆ. ಪ್ರತಿ ತಿಂಗಳು ತರಕಾರಿ ಮತ್ತಿತರ ಸಾಮಗ್ರಿ ಕೊಳ್ಳಲು ಶಾಲೆಗೆ ₹ 147 ಹಣ ನೀಡುತ್ತಾರೆ.

ಈ ಹಣದಲ್ಲಿ ತರಕಾರಿ ಜತೆಗೆ ಬೇಳೆ ಕೊಳ್ಳಲು ಸಾಧ್ಯವಾ’ ಎಂದು ಪಾವಗಡ ತಾಲ್ಲೂಕಿನ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಪ್ರಶ್ನಿಸಿದರು. ‘ತರಕಾರಿ, ಮೆಣಸಿನಕಾಯಿ, ಮಸಾಲೆ, ತೆಂಗಿನಕಾಯಿ ಮತ್ತಿತರ ಸಾಮಾಗ್ರಿಕೊಳ್ಳಲು ಪ್ರತಿ ಮಗುವಿಗೆ ಪ್ರತಿ ದಿನ 1.40 ಪೈಸೆ ಕೊಡಲಾಗುತ್ತದೆ. ತರಕಾರಿ ಬೆಲೆ ಗಗನಕ್ಕೇರಿದೆ. ಈ ಹಣದಲ್ಲಿ ಅಡುಗೆಗೆ ಬೇಕಾಗುವಷ್ಟು ತರಕಾರಿ ಕೊಳ್ಳಲು ಸಹ ಸಾಧ್ಯವಿಲ್ಲ’ ಎಂದರು.

ADVERTISEMENT

‘ನೂರಾರು ಮಕ್ಕಳಿರುವ ಪ್ರೌಢಶಾಲೆಗಳಲ್ಲಿ ಮಕ್ಕಳ ಗೈರು ಹಾಜರಿ ಕಾರಣ ತರಕಾರಿ ಹಣದಲ್ಲಿ ಅಲ್ಪಸ್ವಲ್ಪ ಹಣ ಉಳಿಯುತ್ತದೆ. ಇಂಥ ಕಡೆ ಬೇಳೆ ಕೊಂಡು ಅಡುಗೆಗೆ ಬಳಸಲಾಗುತ್ತಿದೆ. ಆದರೆ ಎಲ್ಲ ಕಡೆಯೂ ಇದು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದರು.

‘ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಗಮನಕ್ಕೆ  ಇದನ್ನು ತರಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಗಳು ಏನನ್ನು ಹೇಳುತ್ತಿಲ್ಲ. ನನ್ನ ಸಂಬಳದಲ್ಲಿ ಮಕ್ಕಳಿಗೆ ಊಟ ಹಾಕುತ್ತಿದ್ದೇನೆ’ ಎಂದರು. ‘ಸಾಂಬಾರು ಗಟ್ಟಿ ಬರಲೆಂದು ಸೊಪ್ಪು ಅರೆದು ಹಾಕಲಾಗುತ್ತಿದೆ.  ತೊಗರಿ ಬೇಳೆ ಬಳಸದ ಕಾರಣ ಸಾರು ತಿನ್ನಲು ಮಕ್ಕಳಿಂದ ಆಗುತ್ತಿಲ್ಲ’ ಎಂದು ಮಿಡಿಗೇಶಿಯ ರಂಗನಾಥ್ ತಿಳಿಸಿದರು.

‘ಟೊಮೆಟೊ, ತರಕಾರಿ ಬೆಲೆ ಹೆಚ್ಚಳವಾಗಿದೆ. ತರಕಾರಿ ಸಹ ಕಡಿಮೆ ಬಳಸುತ್ತಿದ್ದಾರೆ. ಬೇಳೆ ಇಲ್ಲದ ಮೇಲೆ ಇನ್ನೆಂಥ ಗುಣಮಟ್ಟದ ಆಹಾರ ನೀಡಲು ಸಾಧ್ಯ. ಕಡ್ಲೆಕಾಳು, ಮಸಾಲೆ ಹಾಕಿ ಬೇಯಿಸಿ ಊಟ ಬಡಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

‘ಅಡುಗೆ ಹೇಗೆ ಮಾಡಬೇಕೆಂದು ತೋಚುತ್ತಿಲ್ಲ. ಸಾರು ಗಟ್ಟಿ ಬರಲೆಂದು ಕಡ್ಲೆಕಾಳು ಒಡೆದು ಬೇಳೆ ಮಾಡಿ ಹಾಕುತ್ತಿದ್ದೇವೆ. ಪ್ರತಿ ದಿನ ಅದನ್ನೆ ಹಾಕುವುದರಿಂದ ಮಕ್ಕಳಿಗೆ ಸಾರು ರುಚಿಸುತ್ತಿಲ್ಲ’ ಎಂದು ಅಡುಗೆ ಸಹಾಯಕಿಯೊಬ್ಬರು ತಿಳಿಸಿದರು.

ಸಕ್ಕರೆಗೂ ಹಣ ಕಡಿಮೆ
‘ಕ್ಷೀರಭಾಗ್ಯ ಯೋಜನೆಯನ್ನು ವಾರದಲ್ಲಿ ಐದು ದಿನ ವಿಸ್ತರಿಸಲಾಗಿದೆ.  ಸಕ್ಕರೆಗೆ ಪ್ರತಿ ಕೆಜಿಗೆ ₹ 30 ರೂಪಾಯಿ ನೀಡಲಾಗುತ್ತಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕೆಜಿಗೆ ₹ 40 ಇದೆ. ಈ ಹಣವನ್ನು ಸರಿದೂಗಿಸುವುದು ಸಹ ಕಷ್ಟವಾಗುತ್ತಿದೆ’ ಶಿಕ್ಷಕರೊಬ್ಬರು ತಿಳಿಸಿದರು.

ನಾಳೆಯಿಂದ  ಪೂರೈಕೆ
‘ಮಧ್ಯಾಹ್ನದ ಬಿಸಿಯೂಟ ಯೋಜನೆಗಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ 2014– 15ರಲ್ಲೆ ವಾರ್ಷಿಕ ₹ 15 ಕೋಟಿ ನೀಡಲಾಗಿತ್ತು. ಆ ಹಣ ಖರ್ಚಾಗುತ್ತಾ ಬಂದಿತ್ತು. ಈ ಹಿಂದೆ ಬಿಪಿಎಲ್ ಕಾರ್ಡ್ ದರದಲ್ಲಿ ಆಹಾರ ಪೂರೈಕೆ ಮಾಡಲಾಗುತ್ತಿತ್ತು. ಮಧ್ಯದಲ್ಲಿ ಎಪಿಎಲ್ ದರದಲ್ಲಿ ಆಹಾರ ಪೂರೈಕೆ ಮಾಡಿದ ಗೊಂದಲವು ಈ ಸಮಸ್ಯೆಗೆ ಕಾರಣವಾಯಿತು’ ಎಂದು ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು.

‘ಬೇಳೆ ಕೊಂಡುಕೊಳ್ಳಲು ಶಾಲೆಯಲ್ಲಿರುವ ಯಾವುದೇ ಅನುದಾನ ಬಳಸಲು ಮುಖ್ಯ ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ. ಅಡುಗೆ ನಿಲ್ಲದಂತೆ ನೋಡಿಕೊಳ್ಳುವುದು ಮುಖ್ಯ ಶಿಕ್ಷಕರ ಹೊಣೆಯಾಗಿದೆ’ ಎಂದು ಹೇಳಿದರು.

‘ಏಪ್ರಿಲ್‌ – ಮೇ ತಿಂಗಳ ವೇಳೆಗೆ ನಿಗಮದಲ್ಲಿ ಜಿಲ್ಲಾ ಪಂಚಾಯಿತಿಯ ₹ 6 ಕೋಟಿ ಬಾಕಿ ಇತ್ತು. ಆದರೆ ಇದರಲ್ಲಿ ಆಹಾರ ನಿಗಮದವರು ಏಕಾಏಕಿ ₹ 3.30 ಕೋಟಿ ಹಣವನ್ನು  (ಎಪಿಎಲ್‌ ದರದಲ್ಲಿ ಸಾಮಗ್ರಿ ಪೂರೈಸಿದ್ದ ಬಾಕಿ) ತೀರುವಳಿ ಮಾಡಿಕೊಂಡರು. ಈ ಬಗ್ಗೆ ಸರ್ಕಾರಕ್ಕೆ ಬರೆಯಲಾಗಿದೆ.  ಇದರಿಂದಾಗಿ ಬೇಳೆ ಕೊಳ್ಳುವ ಟೆಂಡರ್‌ ವಿಳಂಬವಾಯಿತು. ಜೂನ್ 14ರಂದು ಟೆಂಡರ್‌ ಆಗಿದೆ. ಗುರುವಾರದಿಂದ ತಾಲ್ಲೂಕುಗಳಿಗೆ ಬೇಳೆ ಪೂರೈಕೆಯಾಗಲಿದೆ. ವಾರದಲ್ಲಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ’ ಎಂದು ಮಾಹಿತಿ ನೀಡಿದರು.

‘ಶಾಲಾ ಹಂತದಲ್ಲೆ ಬೇಳೆ ಕೊಂಡುಕೊಳ್ಳಲು ಸುತ್ತೋಲೆ ಹೊರಡಿಸಲಾಗಿತ್ತು. ಕೆಲವು ಕಡೆಗಳಲ್ಲಿ ಬೇಳೆ ಕೊಳ್ಳಲಾಗಿದೆ. ಮತ್ತಷ್ಟು ಶಾಲೆಗಳಲ್ಲಿ ಸಂಗ್ರಹದಲ್ಲಿದ್ದ ಕಡ್ಲೆಕಾಳು ಹಾಕಿ ಸರಿದೂಗಿಸಿದ್ದಾರೆ. ಇನ್ನೂ ಕೆಲವು ಶಾಲೆಯವರು ಬೇಳೆ ಕೊಂಡುಕೊಳ್ಳದೆ ಸಮಸ್ಯೆಯಾಗಿರುವುದು ನಿಜ’ ಎಂದು ಅವರು ಹೇಳಿದರು.

ಅಂಕಿ–ಅಂಶ
2.51 ಲಕ್ಷ ಜಿಲ್ಲೆಯಲ್ಲಿ ಬಿಸಿಯೂಟ ಮಾಡುವ ಮಕ್ಕಳು

1,334ಕ್ವಿಂಟಲ್‌ ತಿಂಗಳಿಗೆ ಬೇಕಾಗಿರುವ ತೊಗರಿ ಬೇಳೆ

39,720 ಲೀಟರ್‌ ತಿಂಗಳಿಗೆ ಬೇಕಾಗಿರುವ ತಾಳೆ ಎಣ್ಣೆ

ಸಿ.ಕೆ.ಮಹೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.