ADVERTISEMENT

ಮನೆ ಎದುರು ರಂಗೋಲಿ ರಂಗು, ಮನದೊಳಗೆ ಹಬ್ಬದ ಗುಂಗು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 9:04 IST
Last Updated 29 ಆಗಸ್ಟ್ 2015, 9:04 IST

ತುಮಕೂರು: ಎರಡು ದಿನಗಳಿಂದ ಹಬ್ಬದ ಸಿದ್ಧತೆಯ ಸಡಗರದಲ್ಲಿಯೇ ಇದ್ದ ಜನ ಶುಕ್ರವಾರ ‘ಐಶ್ವರ್ಯ’ದ ಸಂಕೇತವಾದ ವರಮಹಾಲಕ್ಷ್ಮಿ ಹಬ್ಬವನ್ನು ಮನೆಗಳಲ್ಲಿ ಸಂಭ್ರಮ, ಸಡಗರದಿಂದ ಆಚರಿಸಿದರು.

ಚಿನ್ನ ಹಾಗೂ ಚಿನ್ನ ಲೇಪಿತ ಮತ್ತು ಬೆಳ್ಳಿಯ ಲಕ್ಷ್ಮಿಮೂರ್ತಿ, ಕಲಶಗಳಿಗೆ ಬಗೆಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಅಲಂಕಾರಿಕ ವಸ್ತುಗಳಿಂದ, ವಿದ್ಯುತ್ ದೀಪಾಲಂಕಾರದಿಂದಲೂ ವರಮಹಾಲಕ್ಷ್ಮಿ ಮನೆಯಲ್ಲಿ ಝಗಮಗಿಸುತ್ತಿದ್ದುದು ಕಂಡು ಬಂದಿತು.

ಬಡಾವಣೆ ನಿವಾಸಿಗಳು ಅಕ್ಕಪಕ್ಕದ ಮನೆಗಳಿಗೆ, ಬಂಧು ಬಾಂಧವರು, ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡರು. ಅರಿಷಿಣ, ಕುಂಕುಮ, ಫಲ, ತಾಂಬೂಲ ನೀಡಿ ಹಬ್ಬದ ಖುಷಿ ಹಂಚಿಕೊಂಡರು.

ವಿವಿಧ ಬಡಾವಣೆಯಲ್ಲಿರುವ ಲಕ್ಷ್ಮಿ, ಮಹಾಲಕ್ಷ್ಮಿ ದೇವಸ್ಥಾನಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಕಳೆದ 13 ವರ್ಷಗಳಿಂದ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ವಿಭಿನ್ನ ರೀತಿಯ ಅಲಂಕಾರ ಮಾಡಲಾಗುತ್ತದೆ. ಹೂವು, ಅಲಂಕಾರಿಕ ವಸ್ತುಗಳಿಂದ ಲಕ್ಷ್ಮಿ ಅಲಂಕರಿಸಲಾಗುತ್ತದೆ ಎಂದು ನಗರದ ಗಾಂಧಿನಗರ ಬಡಾವಣೆ ನಿವಾಸಿಗಳಾದ ಶೋಭಾ ಪ್ರಶಾಂತ, ಹರ್ಷವರ್ಧಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂದಿನ ವರ್ಷ ದೀಪಗಳಲ್ಲಿಯೇ ಅಲಂಕಾರ ಮಾಡಲಾಗಿತ್ತು. ಈ ವರ್ಷ ಸ್ವಲ್ಪ ವಿಭಿನ್ನವಾಗಿ ಅಲಂಕಾರ ಮಾಡಲಾಗಿದೆ. ಕೇರಳದಲ್ಲಿ ಆನೆಗಳ ಹಣೆಗಳ ಮೇಲೆ ಅಲಂಕಾರಕ್ಕೆ ಹಾಕುವ ಆಕರ್ಷಕ ಹಣೆಪಟ್ಟಿ ಮಾದರಿಯಲ್ಲೇ ಪಟ್ಟಿಗಳನ್ನು ರೂಪಿಸಿ ಅಲಂಕರಿಸಲಾಗಿದೆ. ಮೂರು ತಿಂಗಳಿಂದ ಈ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲಿ ತಯಾರಿಸಲಾಗಿದೆ ಎಂದು ಶೋಭಾ ವಿವರಿಸಿದರು.

ಹೂವಿನ ಅಲಂಕಾರಕ್ಕೆ ರುದ್ರಾಕ್ಷಿ ಹೂವು ಮತ್ತು ಹಳದಿ ಸೇವಂತಿಗೆ ಹೂವುಗಳನ್ನು ಬೆಂಗಳೂರಿಂದ ತಂದಿದ್ದೇವೆ ಎಂದರು.

ಭಕ್ತಸಾಗರ
ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನದಲ್ಲಿ ಭಕ್ತ ಸಾಗರ ತುಂಬಿ ತುಳುಕಿತು. ಜಿಲ್ಲೆಯ ಮೂಲೆಮೂಲೆಗಳಿಂದ ಜನರು ಬಂದಿದ್ದರು. ಬೇರೆ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರಿಂದ ದೇವಸ್ಥಾನ ಕಿಕ್ಕಿರಿಯಿತು. ಸರತಿಯಲ್ಲಿ ನಿಂತು ಜನರು ದೇವರಿಗೆ ನಮಿಸಿದರು.

ಉಪ ವಿಭಾಗಾಧಿಕಾರಿ ಅನಿತಾಲಕ್ಷ್ಮಿ, ತಹಶೀಲ್ದಾರ್ ಏಕೇಶ್‌ಬಾಬು ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಪ್ರತಿ ವರ್ಷದಂತೆಯೇ ಈ ವರ್ಷವೂ ಪೂಜೆ ಪುನರಸ್ಕಾರಗಳು ನಡೆದವು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ವಿಶೇಷ ಪೂಜೆಗಳು ನಡೆದವು. ಪೊಲೀಸ್‌ ಬಿಗಿ ಬಂದೋಬಸ್ತ್‌ ಒದಗಿಸಲಾಗಿತ್ತು.

ಕಳೆದ ವರ್ಷ ರಜತ ಮಹೋತ್ಸವ ವೇಳೆ ಗೊಂದಲದ ಕಾರಣ ಈ ಸಲ ವಿಶೇಷ ಮುತುವರ್ಜಿ ವಹಿಸಲಾಗಿತ್ತು. ಹಿರಿಯರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು.

ಹಸಿರು ಬಳೆ, ಬಗೆಬಗೆ ಹೂ
ಗುಬ್ಬಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವತೆಗಳ ದೇಗುಲಕ್ಕೆ ಭಕ್ತರು ತೆರಳಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು.

ಪಟ್ಟಣದ ಮಹಾಲಕ್ಷ್ಮಿ ದೇವಾಲಯಕ್ಕೆ ಕುಟುಂಬ ಸಮೇತ ಆಗಮಿಸಿದ ಭಕ್ತರು ಹಸಿರು ಬಳೆ, ಕುಂಕುಮ, ಅರಿಶಿಣ, ತುಳಸಿಪತ್ರೆ, ಹೂ ಗಳನ್ನು  ಅರ್ಪಿಸಿದರು.
ಮುಂಜಾನೆಯೇ ಎದ್ದು ಬಾಳೆಕಂದು, ಮಾವಿನತೋರಣವನ್ನು ಕಟ್ಟುವ ಕೆಲಸವನ್ನು ‘ಯಜಮಾನ’ ಮಾಡಿದರೆ, ಬಣ್ಣ, ಬಣ್ಣದ ರಂಗೋಲಿಯನ್ನು ‘ಮನೆಯವರು’ ಹಾಕಿದರು.

ಲಕ್ಷ್ಮಿ ಕಳಸಕ್ಕೆ ಡೇರೆ ಹೂ, ಕಮಲದ ಹೂ ಅರ್ಪಿಸಿದರು. ನಾಲ್ಕೈದು ದಿನ ಮೊದಲೇ ಸಿದ್ಧಪಡಿಸಿದ್ದ ನಿಪ್ಪಟ್ಟು, ಕೋಡುಬಳೆ, ರವೆಉಂಡೆ, ಚಕ್ಕುಲಿ ಸೇರಿದಂತೆ ಹಲವು ತಿನಿಸುಗಳನ್ನು ನೈವೇದ್ಯ ಮಾಡಿದರು.

ಸ್ನೇಹಿತರು, ಬಂಧುಬಳಗದವರು ಮತ್ತು ಮುತ್ತೈದೆಯರನ್ನು ಆಹ್ವಾನಿಸಿ ಅರಿಶಿಣ-ಕುಂಕುಮ ನೀಡಿ ಉಪಚರಿಸಿದರು.

ಖರೀದಿ ಚುರುಕು
ಚಿಕ್ಕನಾಯಕನಹಳ್ಳಿ: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ  ಹೂ, ಹಣ್ಣು ಹಾಗೂ ಬಾಳೆ ಕಂದು ವ್ಯಾಪಾರ ಚುರುಕಾಗಿ ನಡೆಯಿತು.
ಒಂದು ಮಾರು ಸೇವಂತಿ ಮತ್ತು ಒಂದು ಕೆ.ಜಿ. ಸೇಬಿನ ಧಾರಣೆಯಲ್ಲಿ (ರೂ 100) ವ್ಯತ್ಯಾಸವೇ ಇರಲಿಲ್ಲ. ಮಲ್ಲೆ ರೂ 80, ಕನಕಾಂಬರ ರೂ 60, ಚೆಂಡು ಹೂ ರೂ 60ರ ಧಾರಣೆಯಲ್ಲಿ ವಹಿವಾಟಾಯಿತು.

ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿಯೂ ವ್ಯಾಪಾರಸ್ಥರು ಮಳಿಗೆಗಳನ್ನು ಅಳವಡಿಸಿದ್ದ ಕಾರಣ ಸಂಚಾರಕ್ಕೆ ಅಡಚಣೆಯಾಯಿತು.
ಕಚೇರಿಗಳು ಖಾಲಿ: ಪಟ್ಟಣದ ವಿವಿಧ ಕಚೇರಿಗಳು ನೌಕರರಿಲ್ಲದೆ ಬಣಗುಡುತ್ತಿದ್ದವು. ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮತ್ತು ಇತರ ಬೆಳರೆಣಿಕೆ ಸಿಬ್ಬಂದಿ ಕೆಲಸ ಮಾಡಿದರು.

ಪಹಣಿ, ಪಡಿತರ ಚೀಟಿ, ಜಾತಿ ಹಾಗೂ ವರಮಾನ ಪ್ರಮಾಣಪತ್ರ ಸೇರಿದಂತೆ ವಿವಿಧ ದಾಖಲೆಗಳಿಗಾಗಿ ಬಂದಿದ್ದ ಜನ ಪರದಾಡುವಂತಾಯಿತು.
ಆಸ್ಪತ್ರೆಯಲ್ಲಿಯೂ ತಾಲ್ಲೂಕು ವೈದ್ಯಾಧಿಕಾರಿ ಸೇರಿದಂತೆ ಬಹುತೇಕ ಸಿಬ್ಬಂದಿ ಗೈರು ಹಾಜರಾಗಿದ್ದರು. ವೈದ್ಯರಾದ ಡಾ.ಪ್ರೇಮಾ ಹಾಗೂ ನೇತ್ರ ಚಿಕಿತ್ಸಕ ಡಾ.ಗಂಗಾಧರಪ್ಪ ಮಾತ್ರ ಆಸ್ಪತ್ರೆಯಲ್ಲಿ ಕಂಡು ಬಂದರು.

ಹೆಚ್ಚಿನ ಸಂಖ್ಯೆಯಲ್ಲಿದ್ದ ರೋಗಿಗಳು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳ ಕಡೆ ಮುಖ ಮಾಡಿದರು. ಸೋಮವಾರ ಬನ್ನಿ: ಸರ್ಕಾರಿ ಕಚೇರಿಗಳಲ್ಲಿ ಇದ್ದ ನೌಕರರು ‘ಸಾಹೇಬರು ಇವತ್ತು ಬಂದಿಲ್ಲ, ನಾಳೆ ಬರೋದು ಅನುಮಾನ. ನಾಡಿದ್ದು ಭಾನುವಾರ, ನೀವು ಸೋಮವಾರ ಬರೋದು ಒಳ್ಳೇದು’ ಎಂದು ಜನರನ್ನು ವಾಪಸ್ ಕಳಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.