ADVERTISEMENT

ಮರಳಿಗೆ ಟ್ರ್ಯಾಕ್ಟರ್: ವ್ಯವಸಾಯಕ್ಕೆ ಹಿನ್ನಡೆ

ಪ್ರಜಾವಾಣಿ ವಿಶೇಷ
Published 23 ಏಪ್ರಿಲ್ 2014, 10:23 IST
Last Updated 23 ಏಪ್ರಿಲ್ 2014, 10:23 IST

ಚಿಕ್ಕನಾಯಕನಹಳ್ಳಿ: ನಿರೀಕ್ಷೆಯಂತೆ ಪೂರ್ವ ಮುಂಗಾರು ಮಳೆ ಸುರಿದರೂ; ಸಕಾಲಕ್ಕೆ ಉಳುಮೆ ಮಾಡಲಾಗದೆ ತಾಲ್ಲೂಕಿನ ರೈತರು ಪರದಾಡು­ತ್ತಿದ್ದಾರೆ.
ತಾಲ್ಲೂಕಿನಾದ್ಯಂತ ಚೆದುರಿದಂತೆ ಸುರಿದಿರುವ ಪೂರ್ವ ಮುಂಗಾರು ಮಳೆ ರೈತರಲ್ಲಿ ಭರವಸೆ ಮೂಡಿ­ಸಿದೆ. ಆದರೆ ಉಳುಮೆ ಮಾಡುತ್ತಿದ್ದ ರಾಸು­ಗಳನ್ನು ಕಳೆದುಕೊಂಡಿರುವ ರೈತರು, ಉಳುಮೆ ಮಾಡಿಕೊಡಲು ಟ್ರ್ಯಾಕ್ಟರ್‌ ಮಾಲೀಕರನ್ನು ಬೇಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ನಾಲ್ಕು ವರ್ಷದ ಸತತ ಬರಗಾಲಕ್ಕೆ ಹೆದರಿರುವ ರೈತರು ಹೊಸದಾಗಿ ಎತ್ತುಗಳನ್ನು ಕೊಳ್ಳಲೂ ಹಿಂಜರಿ­ಯುತ್ತಿದ್ದಾರೆ. ಟ್ರ್ಯಾಕ್ಟರ್‌ಗಳು ಕೆರೆ–ಕೊಳ್ಳ­ಗಳಲ್ಲಿ ಮರಳು ಎತ್ತಲು ಬಳಕೆಯಾಗುತ್ತಿರುವುದ­ರಿಂದ ಬೇಸಾಯದ ಕೆಲಸ ಹಿಂದುಳಿದಿದೆ.

‘ಒಂದು ಗಂಟೆ ಕಾಲ ಟ್ರ್ಯಾಕ್ಟರ್ ಉಳುಮೆಗೆ ರೂ.550ರಿಂದ 600 ಬಾಡಿಗೆ ಇದೆ. ಅಷ್ಟು ಹಣ ಕೊಡಲೂ ರೈತರು ಸತಾಯಿಸುತ್ತಾರೆ. ಒಂದು ಲೋಡ್‌ ಮರಳು ಸಾಗಿಸಿದರೆ ನಿರಾಯಾಸವಾಗಿ ರೂ.3000 ಸಿಗುತ್ತದೆ. ಮಳೆ ಬಂದು ಕೆರೆಗಳಿಗೆ ನೀರು ತುಂಬಿಕೊಂಡರೆ ಮರಳು ತೆಗೆಯಲು ಆಗುವುದಿಲ್ಲ. ಅದಕ್ಕೆ ಉಳುಮೆ– ಗಿಳುಮೆ ಏನೂ ಬ್ಯಾಡ ಅಂತ ಮರಳು ಸಾಗಿಸುತ್ತಿದ್ದೇನೆ ಎಂದು ಟ್ರ್ಯಾಕ್ಟರ್ ಮಾಲೀಕ ಶಿವಣ್ಣ ಹೇಳಿದರು.

‘ಬಾಡಿಗೆ ಟ್ರ್ಯಾಕ್ಟರ್ ನೆಚ್ಚಿಕೊಂಡವರು ಈ ಸಲ ಬೇಸಾಯ ಮಾಡಿದಂತೆಯೇ ಇದೆ. ಅವರೆಲ್ಲ ಮರಳು ದುಡ್ಡಿನ ರುಚಿ ಕಂಡಿದ್ದಾರೆ. ಕಷ್ಟಪಟ್ಟು ಎತ್ತು ಉಳಿಸಿಕೊಂಡಿದ್ದಕ್ಕೆ ಹದಕ್ಕೆ ಸರಿಯಾಗಿ ಉಕ್ಕೆ ಮಾಡಲು ಸಾಧ್ಯವಾಯ್ತು ಎಂದು ಹೊಲದಲ್ಲಿ ಉಳುಮೆ ಮಾಡುತ್ತಿದ್ದ ರೈತ ಉಮೇಶ್ ಪ್ರತಿಕ್ರಿಯಿಸಿದರು.

ತಾಲ್ಲೂಕಿನ ಕಂದಿಕೆರೆ, ಹಂದನಕೆರೆ ಹೋಬಳಿ ಹೊರತು ಪಡಿಸಿ ಉಳಿದೆಡೆ ಉತ್ತಮ ಮಳೆ­ಯಾಗಿದೆ. ಹದ ಆರುವ ಮುನ್ನ ಉಕ್ಕೆ ಮುಗಿಸಿ­ಕೊಂಡು ಭೂಮಿಯನ್ನು ಸಿದ್ಧಪಡಿಸಿಕೊಳ್ಳಲು ರೈತರು ತವಕಿಸುತ್ತಿದ್ದಾರೆ. ಪೂರ್ವ ಮುಂಗಾರು ಬೆಳೆ­ಗಳಾದ ಹೆಸರು, ಉದ್ದು, ತೊಗರಿ, ಎಳ್ಳು, ಹಲ­ಸಂದೆ, ಔಡಲ ಬಿತ್ತನೆಗೆ ಸಿದ್ಧತೆ ನಡೆದಿದೆ. ಆದರೆ ತಾಲ್ಲೂಕಿನ ಮರಳು ದಂಧೆ ರೈತರ ಆಸೆಗೆ ತಣ್ಣೀರು ಎರಚುತ್ತಿದೆ.

ತಾಲ್ಲೂಕಿನಲ್ಲಿ 151 ಕೆರೆಗಳಿವೆ. 100ಕ್ಕೂ ಹೆಚ್ಚು ಕೆರೆಗಳಲ್ಲಿ ಮರಳು ದೋಚ­ಲಾಗಿದೆ. ಸುವರ್ಣಮುಖಿ ದೊಡ್ಡಹಳ್ಳದ ಇಕ್ಕೆಲ­ಗಳಲ್ಲಿ ಫಲ ಭರಿತ ತೆಂಗಿನ ತೋಟಗಳೇ ಮರಳು ದಂಧೆಗೆ ಬಲಿಯಾಗಿವೆ. ಸರಾಸರಿ ಹತ್ತು ಮನೆಗೆ ಒಂದರಂತೆ ಹಳ್ಳಿಗಳಲ್ಲಿ ಟ್ರ್ಯಾಕ್ಟರ್‌ಗಳಿವೆ. ಕೆಲ­ವರು ಪಹಣಿ ಕೊಟ್ಟು ಭೂ ಅಭಿವೃದ್ಧಿ ಹೆಸರಿ­ನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಟ್ರ್ಯಾಕ್ಟರ್ ಖರೀದಿಸಿ, ಮರಳು ದಂಧೆಗೆ ಬಳಸುತ್ತಿದ್ದಾರೆ. ಮಳೆ ಬಂದು ಭೂಮಿ ಬಿತ್ತನೆಗೆ ಹದವಾಗಿದೆ. ಆದರೂ ಉಳುಮೆ ಮಾಡಲು ಎತ್ತುಗಳೂ ಇಲ್ಲದೆ– ಟ್ರ್ಯಾಕ್ಟರ್‌ಗಳೂ ಬಾರದೆ ರೈತರು ಕಂಗಾಲಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.