ADVERTISEMENT

ಮಾತಿಗೆ ತಪ್ಪಿದ ಸರ್ಕಾರ: ಟೀಕೆ

ಪೌರ ಕಾರ್ಮಿಕರು: ಸಚಿವ ಸಂಪುಟ ತೀರ್ಮಾನಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಮೇ 2016, 5:46 IST
Last Updated 24 ಮೇ 2016, 5:46 IST

ತುಮಕೂರು: ‘ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ಮಾಡುವುದಾಗಿ ಈವರೆಗೂ ಹೇಳುತ್ತಿದ್ದ  ಸರ್ಕಾರ, ಗುತ್ತಿಗೆದಾರರು ನೀಡುವ ಸಂಬಳವನ್ನು ಆರ್‌ಟಿಜಿಎಸ್‌ ಮೂಲಕ ಅವರ ಬ್ಯಾಂಕ್‌ ಖಾತೆಗೆ ಹಾಕುವ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡಿರುವುದು ಅಪಹಾಸ್ಯದಿಂದ ಕೂಡಿದೆ’ ಎಂದು ರಾಜ್ಯ ಮುನ್ಸಿಪಲ್‌ ಕಾರ್ಮಿಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಮುಜೀಬ್‌ ಹೇಳಿದರು.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಪೌರ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಆರ್‌ಟಿಜಿಎಸ್‌ ಮೂಲಕ ಸಂಬಳ ಹಾಕಲಾಗುತ್ತಿದೆ. ಆದರೂ ಸರ್ಕಾರ ಸಚಿವ  ಸಂಪುಟದಲ್ಲಿ ಆರ್‌ಟಿಜಿಎಸ್‌ ಮೂಲಕ ಸಂಬಳ ಹಾಕುವ ನಿರ್ಣಯ ಕೈಗೊಂಡಿದೆ. ಇದೊಂದು ಪ್ರಚಾರ ಗಿಟ್ಟಿಸುವ ತಂತ್ರ’ ಎಂದು ಟೀಕಿಸಿದರು.

‘ಕಾರ್ಮಿಕರ ಕಾಯಂಮಾತಿ ಬಗ್ಗೆ, ಗುತ್ತಿಗೆ ಪದ್ಧತಿ ತೆಗೆದು ಹಾಕುವ ಬಗ್ಗೆ ಸರ್ಕಾರ ಮೌನ ತಾಳಿದೆ.  ಕಲುಬುರಗಿ ಹೈಕೋರ್ಟ್ ಪೀಠವು ಗುತ್ತಿಗೆ ಪೌರ ಕಾರ್ಮಿಕರನ್ನು  ಮೂರು ತಿಂಗಳಲ್ಲಿ ಕಾಯಂ ಮಾಡುವಂತೆ  ಆದೇಶಿಸಿತ್ತು. ಕೋರ್ಟ್ ಆದೇಶವನ್ನೂ ಜಾರಿ ಮಾಡುತ್ತಿಲ್ಲ. ಇತ್ತ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆಯೂ ನಡೆದುಕೊಳ್ಳುತ್ತಿಲ್ಲ’ ಎಂದು  ಆರೋಪಿಸಿದರು.

‘ಗುತ್ತಿಗೆ ನಿಯಂತ್ರಣ ನಿಷೇಧ ಕಾಯ್ದೆ ಸೆಕ್ಷನ್‌ (ಎಫ್‌) ನಿರಂತರ ಕೆಲಸ ಮಾಡುವವರನ್ನು ಕಾಯಂ ಮಾಡಬೇಕು ಎಂದು ಹೇಳುತ್ತದೆ. ಕಾಯಂ ನೌಕರರಿಗೆ ನೀಡುವ ವೇತನದಷ್ಟೆ ವೇತನ ಹಾಗೂ ಸೌಲಭ್ಯವನ್ನು ಗುತ್ತಿಗೆ ಕಾರ್ಮಿಕರಿಗೂ ನೀಡಬೇಕು ಎಂದು ಹೇಳುತ್ತದೆ. ಇಲ್ಲಿ ಸರ್ಕಾರವೇ  ಕಾನೂನು ಉಲ್ಲಂಘನೆ ಮಾಡುತ್ತಿದೆ’ ಎಂದರು.
‘ಬೆಂಗಳೂರಿನಲ್ಲಿ 2013ರಲ್ಲಿ ನಡೆದ ಪೌರ ಕಾರ್ಮಿಕರ ಸಮಾವೇಶದಲ್ಲಿ ಗುತ್ತಿಗೆ ಪದ್ಧತಿ ನಿಷೇಧ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿ ಮಾತಿಗೆ ತಪ್ಪಿದ್ದಾರೆ’ ಎಂದು ಲೇವಡಿ ಮಾಡಿದರು.

‘ಆರ್‌ಟಿಜಿಎಸ್‌ ಮೂಲಕ ವೇತನ ಹಾಕುವುದರಿಂದ ಕಾರ್ಮಿಕರ ಕಲ್ಯಾಣ ಸಾಧ್ಯವಾಗುವುದಿಲ್ಲ. ಹೊರಗುತ್ತಿಗೆ ನೌಕರರಿಗೆ ಬಯೋ ಮೆಟ್ರಿಕ್‌ ಪದ್ಧತಿ ಜಾರಿಗೆ ತರುವುದಾಗಿ  ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಈಗಾಗಲೇ ಬಯೋ ಮೆಟ್ರಿಕ್‌ ಜಾರಿಯಾಗಿದೆ.  ಕಾರ್ಮಿಕರ ವೇತನದ ಶೇ 25 ರಷ್ಟು ವೇತನವನ್ನು ಸರ್ಕಾರ ಭರಿಸುವುದಾಗಿ ಕೈಗೊಂಡಿರವ ತೀರ್ಮಾನ ಬಿಟ್ಟರೆ ಉಳಿದವುಗಳಿಂದ ಪ್ರಯೋಜನ ಇಲ್ಲ’ ಎಂದರು.

₹ 50 ಕೊಡಿ: ‘ಪೌರ ಕಾರ್ಮಿಕರಿಗ ಬೆಳಗಿನ ಜಾವ ನೀಡುತ್ತಿದ್ದ ತಿಂಡಿಯನ್ನು ಮಹಾನಗರ ಪಾಲಿಕೆ ನಿಲ್ಲಿಸಿದೆ. ಒಂದು ತಿಂಡಿಗೆ ₹ 40ನಂತೆ ಗುತ್ತಿಗೆ ನೀಡಲಾಗಿತ್ತು. ಈಗ ಪೌರ ಕಾರ್ಮಿಕರ ಖಾತೆಗೆ ತಿಂಡಿಗಾಗಿ ಪ್ರತಿ ದಿನ ₹ 20 ಹಾಕುವುದಾಗಿ ಹೇಳುತ್ತಿದೆ. ಪ್ರತಿ ದಿನ ₹ 50 ನೀಡಬೇಕು ಎಂದು ಒತ್ತಾಯಿಸಲಾಗಿದೆ. ಅರ್ಧ ಟೀ ಬೆಲೆ ₹ 10 ಇದೆ. ಹೀಗಿರುವಾಗ ₹ 20 ಕ್ಕೆ ತಿಂಡಿ ಎಲ್ಲಿ ಸಿಗಲಿದೆ’ ಎಂದು  ಅವರು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಶಿಫಾರಸಿನಂತೆ ಡಿ ದರ್ಜೆ ನೌಕರರಿಗೆ ಮಾಸಿಕ ₹ 18 ಸಾವಿರ ಸಂಬಳ ನೀಡಬೇಕು. ಇದನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

‘ಕಾಯಂ ನೌಕರರಿಗೆ ಜವಾಬ್ದಾರಿ ಇರುವುದರಿಂದ ಅವರಿಗೆ ನೀಡುವಷ್ಟು ಸಂಬಳ, ಸೌಲಭ್ಯವನ್ನು ಗುತ್ತಿಗೆ ನೌಕರರಿಗೆ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಅಫಿಡವಿಟ್‌ ಸಲ್ಲಿಸಿದೆ. ಗುತ್ತಿಗೆದಾರರಿಗೆ ಒಂದು ಕಸ, ಕಾಯಂ ನೌಕರರಿಗೆ ಒಂದು ಕಸ ಇರಲು ಸಾಧ್ಯವೇ? ಕಸ, ಕಸವೇ ಅಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಪೌರ ಕಾರ್ಮಿಕರು, ಗುತ್ತಿಗೆ ಕಾರ್ಮಿಕರ ಬಗೆಗಿನ ರಾಜ್ಯ ಸರ್ಕಾರದ ನಿಲುವು ಖಂಡಿಸಿ  ವಿವಿಧ ಸಂಘಟನೆಗಳ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ದುಡಿಯುತ್ತಿರುವ ಸಂಘಟನೆಗಳ ಜತೆ ಸೇರಿ ಜಂಟಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ  ಕೊಳೆಗೇರಿ ನಿವಾಸಿಗಳ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಪೌರ ಕಾರ್ಮಿಕರ ಸಂಘದ ನಗರ ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ಉಮೇಶ್‌, ರಾಜು, ನರಸಿಂಹಮೂರ್ತಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.