ADVERTISEMENT

ಮಾರಾಟದ ಸರಕಾದ ಬಾಡಿಗೆ ತಾಯ್ತನ

ಮಹಿಳಾ ದಿನಾಚರಣೆಯಲ್ಲಿ ಲೇಖಕಿ ಡಾ.ಕೆ.ಶರೀಫಾ ಬೇಸರ, ಸ್ವಾತಂತ್ರ್ಯ ಕಸಿಯುತ್ತಿರುವ ಬಂಡವಾಳ ಶಾಹಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:32 IST
Last Updated 9 ಮಾರ್ಚ್ 2017, 7:32 IST
ತುಮಕೂರು: ‘ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಾಡಿಗೆ ತಾಯ್ತನ ಮಾರಾಟದ ಸರಕಾಗಿದೆ’ ಎಂದು ಲೇಖಕಿ ಡಾ.ಕೆ.ಶರೀಫಾ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ಅಧ್ಯಯನ ಕೇಂದ್ರ ಬುಧವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
 
‘ಮಹಿಳೆಯ ದೇಹ, ಮನಸ್ಸು, ಸೌಂದರ್ಯ ಮಾರಾಟದ ಸರಕಾಗಿತ್ತು. ಈಗ ತಾಯಿಯ ಮಾತೃತ್ವ ಕೂಡ ಬಾಡಿಗೆ ತಾಯ್ತನದ ಮೂಲಕ ಮಾರಾಟವಾಗುತ್ತಿದೆ. ಹಣಕ್ಕಾಗಿ ಮಗುವನ್ನು ಹೆತ್ತು ಮಾರಾಟ ಮಾಡುವ ಕ್ರೌರ್ಯ ಬಂಡವಾಳ ಶಾಹಿ ವ್ಯವಸ್ಥೆಯ ಹೀನಕೃತ್ಯ’ ಎಂದು ಬೇಸರ ವ್ಯಕ್ತಪಡಿಸಿದರು.
 
‘ಮಹಿಳಾ ದಿನಾಚರಣೆ ಆರಂಭವಾಗಿ 106 ವರ್ಷ ಕಳೆದರೂ ಮಹಿಳೆಯರಿಗೆ ಸಮಾನತೆ ಸಿಕ್ಕಿಲ್ಲ. ದುಡಿಯುವ ಹೆಣ್ಣಿನ ಪರಿಸ್ಥಿತಿ ಸುಧಾರಿಸಿಲ್ಲ. ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮಾರ್ಯಾದೆಗೇಡು ಹತ್ಯೆ, ಖಾಪ್‌ ಪಂಚಾಯಿತಿ ತೀರ್ಮಾನಗಳು ಹೆಣ್ಣನ್ನು ಮತ್ತಷ್ಟು ಶೋಷಣೆಗೆ ದೂಡುತ್ತಿವೆ’ ಎಂದರು.
 
‘ಹೋರಾಟದಿಂದ ಗಳಿಸಿದ ಸ್ವಾತಂತ್ರ್ಯವನ್ನು ಬಂಡವಾಳ ಶಾಹಿ ವ್ಯವಸ್ಥೆಯು ನಮಗೆ ಅರಿವಿಲ್ಲದಂತೆ ಕಸಿದುಕೊಳ್ಳುತ್ತಿದೆ. ಮಹಿಳೆಯರ ಹಕ್ಕಿನ ಹೋರಾಟದ ದಿನ ಹಾಗೂ ಧೀಶಕ್ತಿಯನ್ನು ಮಾರಾಟ ಜಾಲವೊಂದು ದುರುಪಯೋಗ ಮಾಡಿಕೊಂಡು ಹಣ ಗಳಿಸುತ್ತಿದೆ’ ಎಂದರು.
 
‘ಪ್ರಸಕ್ತ ಕಾಲಘಟ್ಟದಲ್ಲಿ ಗಾಂಧಿ ತತ್ವವನ್ನು ಚಸ್ಮಾಗೆ, ಸ್ವಚ್ಛ ಭಾರತದ ಧ್ಯೇಯವನ್ನು ಕಸಪೊರಕೆಗೆ ಇಳಿಸಲಾಗಿದೆ. ಮಹಿಳೆಯ ಹಕ್ಕು, ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಅವನತಿಯತ್ತ ಸಾಗುತ್ತಿವೆ’ ಎಂದರು.
 
‘ಕಾಲೇಜುಗಳಲ್ಲಿ ಬುರ್ಖಾಗೆ ಪರ್ಯಾಯವಾಗಿ ಯುವಕರು ಕೇಸರಿ ಶಾಲಿನೊಂದಿಗೆ ಬರುವ ಸಂಸ್ಕೃತಿ ಬೆಳೆಯುತ್ತಿದೆ. ಮುಸ್ಲಿಮ್‌ ಧರ್ಮದಲ್ಲಿ ಮಹಿಳೆಯರು ಬುರ್ಖಾ ಧರಿಸುವುದು ಸಂಪ್ರದಾಯ. ಅವರಿಗೂ ಉತ್ತಮ ಶಿಕ್ಷಣ ದೊರೆತರೆ ಸಂಪ್ರದಾಯಗಳನ್ನು ಬದಿಗೊತ್ತುತ್ತಾರೆ. ಆದ್ದರಿಂದ ಧಾರ್ಮಿಕ ವಿಚಾರದಲ್ಲಿ ವಿಷಮ ವಾತಾವರಣ ಸೃಷ್ಟಿಸುವ ಇಂತಹ ಕೃತ್ಯಗಳಿಂದ ಯುವ ಸಮೂಹ ದೂರ ಉಳಿಯಬೇಕು’ ಎಂದರು.
 
‘ಭಾರತ–ಪಾಕಿಸ್ತಾನದ ಜನರಿಗೆ ಯುದ್ಧ ಬೇಕಿಲ್ಲ. ಆದರೆ, ರಾಜಕಾರಣಿಗಳ ಸ್ವಹಿತಾಸಕ್ತಿಗಾಗಿ ಎರಡು ರಾಷ್ಟ್ರಗಳ ಮಧ್ಯೆ ವಿಷಬೀಜ ಬಿತ್ತಲಾಗುತ್ತಿದೆ. ಹುತಾತ್ಮ ಮೇಜರ್‌ ಮನದೀಪ್‌ ಸಿಂಗ್‌ ಅವರ ಪುತ್ರಿ ಗುರ್‌ಮೆಹರ್ ಕೌರ್‌, ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ. ಯುದ್ಧ ಕೊಂದಿತು ಎಂಬ ಅಭಿಪ್ರಾಯಕ್ಕೆ ಕೋಮುವಾದಿಗಳು ವಿರೋಧ ವ್ಯಕ್ತಪಡಿಸಿ, ಅತ್ಯಾಚಾರದ ಬೆದರಿಕೆ ಹಾಕಿದರು. ಎರಡೂ ರಾಷ್ಟ್ರಗಳ ನಡುವೆ ಯುದ್ಧರಹಿತ ಸೌಹಾರ್ದ ವಾತಾವರಣ ಬಯಸಿದ್ದು ತಪ್ಪೇ’ ಎಂದು ಪ್ರಶ್ನಿಸಿದರು. 
 
‘ವಿದ್ಯಾರ್ಥಿ ಸಂಘಟನೆಗಳ ರಾಜಕಾರಣದಿಂದ ವಿದ್ಯಾರ್ಥಿಗಳು ದೂರ ಇರಬೇಕು. ಜ್ಞಾನ, ಶಕ್ತಿ ಹಾಗೂ ಯುಕ್ತಿಯನ್ನು ಕ್ಷುಲ್ಲಕ ರಾಜಕಾರಣಕ್ಕೆ ಬಳಸಬಾರದು’ ಎಂದರು.
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂಥ್‌ ಮಾತನಾಡಿ, ‘ಮಹಿಳೆಯರ ಸಾಧನೆ ಸಂಭ್ರಮಿಸಲು ಒಂದು ದಿನ ಸಾಲದು. ಪ್ರತಿದಿನವೂ ಸಾಧನೆಗಳ ಸಂಭ್ರಮಾಚರಣೆ ಆಗಬೇಕು. ಮಹಿಳೆಯರನ್ನು ಹೀಗಳೆಯಬಾರದು. ಸಣ್ಣ ಪುಟ್ಟ ಸಾಧನೆಗಳನ್ನೂ ಸಮಾಜ ಹಾಗೂ ದೇಶಕ್ಕೆ ತಿಳಿಸಬೇಕು’ ಎಂದು ಹೇಳಿದರು.
 
‘ವಿದ್ಯಾರ್ಥಿಗಳು ಪೋಷಕರ ಮನಸ್ಸಲ್ಲಿ ನಂಬಿಕೆ ಬೆಳೆಸಬೇಕು. ಪ್ರತಿಯೊಬ್ಬ ಮಹಿಳೆಗೂ ತನ್ನ ಮೇಲೆ ತನಗೆ ನಂಬಿಕೆ ಇದ್ದರೆ ಇಡೀ ವಿಶ್ವವನ್ನೇ ಜಯಿಸಬಹುದು’ ಎಂದು ತಿಳಿಸಿದರು.
 
‘ಮಹಿಳೆಯರ ಮೇಲೆ ದೌರ್ಜನ್ಯ, ಚುಡಾಯಿಸುವಿಕೆ, ರ್‌್ಯಾಗಿಂಗ್‌ ನಡೆದರೆ ಪೊಲೀಸ್‌ ಠಾಣೆಗೆ ಬಂದು ದೂರು ನೀಡಬೇಕಿಲ್ಲ. ತಮ್ಮ ಬಳಿ ಇರುವ ಆ್ಯಂಡ್ರಾಯ್ಡ್‌ ಫೋನ್‌ನ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ತುಮಕೂರು ಪೊಲೀಸ್‌ ತಂತ್ರಾಂಶವಿದೆ.  ಕೂಡಲೇ ತಂತ್ರಾಂಶ ಡೌನ್‌ಲೋಡ್‌ ಮಾಡಿಕೊಂಡು ರಿಪೋರ್ಟ್‌ ಜಾಗದಲ್ಲಿ ಸೂಕ್ತ ಮಾಹಿತಿ ಕಳುಹಿಸಬಹುದು. ಆಗ ಆಯಾ ವ್ಯಾಪ್ತಿ ಪೊಲೀಸರು ಕ್ರಮ ಜರುಗಿಸುತ್ತಾರೆ’ ಎಂದು ಭರವಸೆ ನೀಡಿದರು.
 
‘ಮಹಿಳೆಯರಿಗಾಗಿ ಬಂದೂಕು ತರಬೇತಿ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದು. ಅಲ್ಲದೇ ಮಹಿಳೆಯರಿಗೆ ಸ್ವಯಂ ರಕ್ಷಣಾ ಕಲೆಗಳನ್ನು ಕಲಿಸಲಾಗುವುದು’ ಎಂದು ಹೇಳಿದರು.
 
ತಮಟೆ ನರಸಮ್ಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂಥ್‌, ಲೇಖಕಿ ಡಾ.ಕೆ.ಶರೀಫಾ ಅವರನ್ನು ಸನ್ಮಾನಿಸಲಾಯಿತು. ಕುಲಪತಿ ಪ್ರೊ.ಎ.ಎಚ್‌.ರಾಜಾಸಾಬ್‌, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಕೆ.ಎಸ್‌.ಗಿರಿಜಾ ಉಪಸ್ಥಿತರಿದ್ದರು.

ಕಾದು ಸುಸ್ತಾಗಿ ಎದ್ದು ಹೋದರು
ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿತ್ತು. ಅತಿಥಿಗಳಾಗಿ ಸಾಹಿತಿ ಡಾ.ಕೆ.ಶರೀಫಾ, ತಮಟೆ ನಾಗಮ್ಮ ನಿಗದಿತ ಅವಧಿಗೆ ಬಂದಿದ್ದರು. ಆದರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂಥ್‌ಗಾಗಿ ಕಾರ್ಯಕ್ರಮ ಆಯೋಜಕರು 11.45ರವರೆಗೆ ಕಾದು ಕುಳಿತರು.

ಕಾರ್ಯಕ್ರಮ ಆರಂಭವಾಗದ ಕಾರಣ ವಿದ್ಯಾರ್ಥಿಗಳು ಸಾಲು ಸಾಲಿನಲ್ಲಿ ಎದ್ದು ಹೊರಟರು. ಕೊನೆಗೆ 11.50ಕ್ಕೆ ಬಂದಿರುವ ಅತಿಥಿಗಳನ್ನೇ ಕರೆತಂದು ಕಾರ್ಯಕ್ರಮ ಆರಂಭಿಸಿದರು.

ಮೀಸಲಾತಿ ಮಸೂದೆ ನಿರ್ಲಕ್ಷ್ಯ
‘ಮಹಿಳಾ ಮೀಸಲಾತಿ ಮಸೂದೆ ಕಳೆದ 20 ವರ್ಷದಿಂದ ಸಂಸತ್ತಿನಲ್ಲೇ ಕೊಳೆಯುತ್ತಿದೆ. ಮಹಿಳೆಯರಿಗೆ ರಾಜಕೀಯ ಮೀಸಲಾತಿ ಸಿಕ್ಕರೆ ನಿಲುವುಗಳಲ್ಲಿ ಸ್ಪಷ್ಟತೆ, ದಿಟ್ಟತನ ತೋರುವ ಸಾಧ್ಯತೆ ಇದೆ ಎಂದರಿತ ಪುರುಷ ಪ್ರಧಾನ ಸಮಾಜ ಮಸೂದೆ ಜಾರಿಗೆ ಬಿಡುತ್ತಿಲ್ಲ’ ಎಂದು ಡಾ.ಕೆ.ಶರೀಫಾ ಹೇಳಿದರು.

‘ ಮಸೂದೆ ಜಾರಿಯಾದರೆ ಶೇ 33 ಮೀಸಲಾತಿಯಂತೆ 180 ಸ್ಥಾನ ಮಹಿಳೆಯರಿಗೆ ಬಿಟ್ಟುಕೊಡಬೇಕು. ಇದನ್ನರಿತ ಪುರುಷ ರಾಜಕಾರಣಿಗಳು ಮಸೂದೆ ಅಂಗೀಕಾರಕ್ಕೆ ಮನಸ್ಸು ಮಾಡುತ್ತಿಲ್ಲ’ ಎಂದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT