ADVERTISEMENT

ಯುದ್ಧ ಮುಗಿದ ಮೇಲೆ ತಾಲೀಮು

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 6:01 IST
Last Updated 16 ಜುಲೈ 2017, 6:01 IST

ತುಮಕೂರು: ‘ಡೆಂಗಿ ಜ್ವರದ ಹಾವಳಿಗೆ ನಗರ ನಲುಗಿದ ಬಳಿಕ ಮಹಾನಗರ ಪಾಲಿಕೆ ಈಗ ಸಭೆ ಕರೆದಿರುವುದು ಯುದ್ಧ ಮುಗಿದ ಮೇಲೆ ತಾಲೀಮು ನಡೆಸಿದಂತಾಗಿದೆ. ಇನ್ನಾದರೂ ಡೆಂಗಿ ಸೊಳ್ಳೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಮಹಾನಗರ ಪಾಲಿಕೆ ಸದಸ್ಯರು ಮೇಯರ್‌ ಎಚ್.ರವಿಕುಮಾರ್ ಅವರಿಗೆ ಒತ್ತಾಯ ಮಾಡಿದರು.

ಡೆಂಗಿ ಮತ್ತು ಚಿಕೂನ್ ಗುನ್ಯಾ ರೋಗ ನಿಯಂತ್ರಣ ಕುರಿತು ಶನಿವಾರ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಮಾತನಾಡಿದರು.
ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಾದರೂ ನಗರ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸೊಳ್ಳೆ ನಿಯಂತ್ರಣಕ್ಕೆ, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ದ್ರಾವಣ ಸಿಂಪಡಣೆ ಮಾಡಬೇಕು. ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು ಎಂದು ಹೇಳಿದರು.

ADVERTISEMENT

ಬರೀ ನೈರ್ಮಲ್ಯ ಚಟುವಟಿಕೆ ಕೈಗೊಂಡರಷ್ಟೇ ಸಾಲದು. ಡೆಂಗಿ ಸೊಳ್ಳೆ ಮನೆಯ ಶುದ್ಧ ನೀರಿನಲ್ಲಿಯೇ ಉತ್ಪತ್ತಿಯಾಗುತ್ತದೆ. ಮನೆಯಲ್ಲಿ ಶೇಖರಿಸಿಟ್ಟ ನೀರಿನ ತೊಟ್ಟಿ ಮುಚ್ಚಬೇಕು. ಮನೆಯ ಒಳಗೆ ಹಾಗೂ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಿ ಡೆಂಗಿ ಜ್ವರ ನಿಯಂತ್ರಿಸಿ ಎಂದು ಪ್ರತಿ ವಾರ್ಡಿನಲ್ಲಿ ಜಾಗೃತಿ ಮೂಡಿಸಬೇಕು. ಈ ಕೆಲಸ 15 ದಿನಗಳ ಹಿಂದೆಯೇ ಮಾಡಬೇಕಿತ್ತು. ಈಗಲಾದರೂ ಆ ಕೆಲಸ ನಡೆಯಲಿ ಎಂದು ಹೇಳಿದರು.

ಪಾಲಿಕೆ ನೈರ್ಮಲ್ಯಕ್ಕೆ ಒತ್ತು ನೀಡಿಲ್ಲ. ಚರಂಡಿ ಸ್ವಚ್ಛಗೊಳಿಸುವುದಿಲ್ಲ. ಖಾಲಿ ನಿವೇಶನ, ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಇದರಿಂದಲೇ ಡೆಂಗಿ ಜ್ವರ ಬರುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡೆಂಗಿ ಜ್ವರ ಹರಡುವ ಈಡಿಸ್ ಸೊಳ್ಳೆ ಉತ್ಪತ್ತಿಯಾಗುವುದು ಶುದ್ಧ ನೀರಿನಲ್ಲಿಯೇ.

ಈ ವಿಷಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು, ಸರ್ಕಾರಿ ವೈದ್ಯರು, ಖಾಸಗಿ ವೈದ್ಯರು, ಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗದ ಅಧಿಕಾರಿ ಸಿಬ್ಬಂದಿಯೇ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದರು.

ಪಾಲಿಕೆ ನೈರ್ಮಲ್ಯ ವಿಭಾಗದ ಅಧಿಕಾರಿಗಳು ವಿವಿಧ ವಾರ್ಡ್‌ಗಳ ಬಡಾವಣೆಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಿಂಪಡಣೆ ಮಾಡಿದ ದ್ರಾವಣ ಪ್ರಮಾಣ, ಎಷ್ಟು ಬಾರಿ ಫಾಗಿಂಗ್ ಮಾಡಲಾಗಿದೆ ಎಂಬ ಅಂಕಿ ಅಂಶಗಳ ಸಮರ್ಪಕವಾಗಿಲ್ಲ. ವಾಸ್ತವಾಂಶವೇ ಬೇರೆ. ಅಧಿಕಾರಿಗಳು ನೀಡುವ ಅಂಕಿ ಅಂಶಗಳೇ ಬೇರೆಯಾಗಿವೆ ಎಂದು ದೂರಿದರು.

‘ಜಿಲ್ಲಾ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೆಂಗಿ ಜ್ವರ ಪೀಡಿತರು ತುಂಬಿ ತುಳುಕುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಜೀವ ಉಳಿಸಿಕೊಳ್ಳಲು ಬೆಂಗಳೂರಿಗೆ ಓಡುತ್ತಿದ್ದಾರೆ. ನಗರದಲ್ಲಿ ನರ್ಸಿಂಗ್‌ ಹೋಮ್‌ನವರು ಹಗಲು ದರೋಡೆ ಮಾಡುತ್ತಿದ್ದಾರೆ’ ಎಂದು ಸದಸ್ಯ ಎಂ.ಪಿ.ಮಹೇಶ್ ಆರೋಪಿಸಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿಯೇ ನೈರ್ಮಲ್ಯ ಇಲ್ಲ. ಅಲ್ಲಿಯೇ ಡೆಂಗಿ ಸೊಳ್ಳೆ ಉತ್ಪತ್ತಿಯಾಗುತ್ತವೆ. ಚಿಕಿತ್ಸೆಗೆ ಹೋದ ಸಿಬ್ಬಂದಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಇದನ್ನು ಹೇಗೆ ಸರಿಪಡಿಸುತ್ತೀರಿ’ ಎಂದು ಸದಸ್ಯ ಡೆಲ್ಟಾ ರವಿ ಅವರು ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ಡಾ.ಪುರುಷೋತ್ತಮ್ ಅವರಿಗೆ ಪ್ರಶ್ನಿಸಿದರು.

‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು. ಹೀಗಿದ್ದಾಗ್ಯೂ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತವಿದಳನ ಘಟಕ ಇಲ್ಲ ಎಂದರೆ ಹೇಗೆ’ ಎಂದು ಸದಸ್ಯ ಟಿ.ಆರ್.ನಾಗರಾಜ್ ಪ್ರಶ್ನಿಸಿದರು.

ಭಯ ಬೇಡ: ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ಡಾ.ಪುರುಷೋತ್ತಮ್ ಮಾತನಾಡಿ, ಡೆಂಗಿ ಜ್ವರ, ಚಿಕೂನ್ ಗುನ್ಯಾ ರೋಗಕ್ಕೆ ಭಯಪಡಬಾರದು ಎಂದು ಹೇಳಿದರು. ‘ಸಾರ್ವಜನಿಕರೇ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ಇವುಗಳಿಂದ ರಕ್ಷಣೆ ಪಡೆಯಬಹುದು.

ಡೆಂಗಿ ಜ್ವರಕ್ಕೆ ಕಾರಣವಾಗುವ ಈಡಿಸ್ ಸೊಳ್ಳೆ ಒಂದು ಬಾರಿ 3000 ಮೊಟ್ಟೆ ಇಡುತ್ತದೆ. ಅದೂ ಶುದ್ಧ ನೀರಿನಲ್ಲಿಯೇ ಹೀಗಾಗಿ ಈ ಸೊಳ್ಳೆ ನಿಯಂತ್ರಣಕ್ಕೆ ಮನೆಯಲ್ಲಿನ ನೀರಿನ ತೊಟ್ಟಿ ಮುಚ್ಚಿಡಬೇಕು. ನಲ್ಲಿ ತಿರುಗಿಸಿಯೇ ನೀರು ಪಡೆಯಬೇಕು. ಸಂಗ್ರಹಿಸಿಟ್ಟರೂ ಮುಚ್ಚಿಡಬೇಕು’ ಎಂದು ತಿಳಿಸಿದರು. ರೋಗ ಲಕ್ಷಣಗಳ ಬಗ್ಗೆ ವಿವರಿಸಿದರು. ಸದಸ್ಯರಾದ ಬಿ.ಸಿ.ನಾಗೇಶ್, ಇಂದ್ರಕುಮಾರ್, ಎಂ.ಮಹೇಶ್, ತರುಣೇಶ್‌, ಲೋಕೇಶ್ ಮಾತನಾಡಿದರು.

* * 

‘ಡೆಂಗಿ ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಆರೋಗ್ಯ ಇಲಾಖೆಯಿಂದಲೇ ಪ್ರತಿ ವಾರ್ಡುಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಬೇಕು. ಪಾಲಿಕೆ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ’
ಗೀತಾ ರುದ್ರೇಶ್, ಪಾಲಿಕೆ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.