ADVERTISEMENT

ರೈತರು ನೀಡುತ್ತಿರುವ ಗೌರವ ರಾಷ್ಟ್ರಮಟ್ಟದ ಪ್ರಶಸ್ತಿಗೂ ಮಿಗಿಲು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 4:49 IST
Last Updated 12 ಏಪ್ರಿಲ್ 2017, 4:49 IST

ಹುಳಿಯಾರು: ‘ಗೋಶಾಲೆ ನಿರ್ವಹಣೆಯನ್ನು ಮೆಚ್ಚಿ ರೈತರು ನೀಡುತ್ತಿರುವ ಗೌರವ ರಾಷ್ಟ್ರಮಟ್ಟದ ಪ್ರಶಸ್ತಿಗೂ ಮಿಗಿಲಾದುದು’ ಎಂದು ತಹಶೀಲ್ದಾರ್ ಆರ್.ಗಂಗೇಶ್ ಹೇಳಿದರು.

ಹೋಬಳಿಯ ಕಾರೇಹಳ್ಳಿ ರಂಗನಾಥಸ್ವಾಮಿ ದೇಗುಲದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಗೋಶಾಲೆ ಸಿಬ್ಬಂದಿಗೆ ರೈತ ಬಾಂಧವರ ‘ಗೌರವ ಸಮರ್ಪಣಾ ಸಮಾರಂಭ’ದಲ್ಲಿ ಮಾತನಾಡಿದರು.

‘ಸರ್ಕಾರ ಗೋಶಾಲೆ ತೆರೆಯಲು ಸೂಚಿಸಿದಾಗ, ತಾಲ್ಲೂಕಿನ ಯಾವ ಭಾಗದಲ್ಲಿ ತೆರೆಯ ಬೇಕು ಎಂಬುದು ಯಕ್ಷಪ್ರಶ್ನೆಯಾಗಿತ್ತು. ನಂತರ ಕಾರೇಹಳ್ಳಿಯನ್ನು ಗುರುತಿಸಲಾಯಿತು. ಆರಂಭದಲ್ಲಿ ಹಲವು ತೊಡರುಗಳು ಬಂದರೂ, ರೈತರು ಅವುಗಳನ್ನು ಎದುರಿಸಿ ಸಹಕಾರ ನೀಡಿದ್ದರಿಂದ ಸುಸೂತ್ರವಾಗಿ ಗೋಶಾಲೆ ನಡೆಸಲು ಸಾಧ್ಯವಾಯಿತು’ ಎಂದು ಹೇಳಿದರು.

ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್ ಮಾತನಾಡಿ, ‘ರೈತರು ಪಾರಂಪರಿಕ ಕೃಷಿ ತ್ಯಜಿಸಿ ಹೆಚ್ಚು ನೀರು ಕೇಳುವ ತೆಂಗು, ಅಡಿಕೆ, ಬಾಳೆ ಬೆಳೆಗಳನ್ನು ಬೆಳೆಯಲು ಹೋಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ನಮ್ಮ ಪೂರ್ವಜರು ಬೆಳೆಯುತ್ತಿದ್ದ ರಾಗಿ, ನವಣೆ, ಹಾರಕ, ಸಾಮೆ ಬೆಳೆಯವುದನ್ನು ಮುಂದುವರಿಸಿದ್ದರೆ ಈಗಿನ ಕಷ್ಟದ ಸ್ಥಿತಿ ಬರುತ್ತಿರಲಿಲ್ಲ. ಅತೀ ಕಡಿಮೆ ಮಳೆಯಾದರೂ ಗೋವುಗಳಿಗೆ ಮೇವನ್ನಾದರೂ ಸಿಕ್ಕುತ್ತಿತ್ತು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಟಿ.ಮಹಾಲಿಂಗಯ್ಯ, ಉಪ ತಹಶೀಲ್ದಾರ್ ಬಿ.ಎಸ್.ಸತ್ಯನಾರಾಯಣ್, ಗಾಣಧಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ನೀಲಕಂಠಪ್ಪ, ನಿರ್ದೇಶಕರಾದ ಕೆ.ತ್ಯಾಗರಾಜು, ಜಿ.ಟಿ.ಜಯದೇವಪ್ಪ, ನಂಜೇಗೌಡ, ಪಶು ವೈದ್ಯಾಧಿಕಾರಿಗಳಾದ ರಂಗನಾಥ್, ನೇತ್ರಾವತಿ, ರಂಗನಾಥಸ್ವಾಮಿ ದೇಗುಲ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ದೊಡ್ಡಯ್ಯ, ಕಂದಾಯ ಅಧಿಕಾರಿ ಹನುಮಂತನಾಯ್ಕ, ಗ್ರಾ.ಪಂ ಸದಸ್ಯರಾದ ನಟರಾಜ್, ಮಧುಸೂದನ್, ರೈತರಾದ ಜಿ.ಎಂ.ರವಿಶಂಕರ್, ಸೋಮ್ಲಾ ನಾಯ್ಕ, ನಾಗರಾಜುಇ ದ್ದರು.
ಗೋಶಾಲೆ ನಿರ್ವಹಣೆ ಮಾಡಿದ ತಹಶೀಲ್ದಾರ್ ಮತ್ತು ಸಿಬ್ಬಂದಿಗೆ ರೈತರು ಸನ್ಮಾನಿಸುವ ಮೂಲಕ ಗೌರವ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.