ADVERTISEMENT

ವದಂತಿ ಹಬ್ಬಿಸುವವರ ವಿರುದ್ಧ ಕ್ರಮ

ಪಾವಗಡ: ಮಕ್ಕಳ ಕದಿಯುತ್ತಾರೆಂಬ ವದಂತಿ: ಡಿವೈಎಸ್ ಪಿ ಒ.ಬಿ.ಕಲ್ಲೇಶಪ್ಪ

​ಪ್ರಜಾವಾಣಿ ವಾರ್ತೆ
Published 22 ಮೇ 2018, 9:12 IST
Last Updated 22 ಮೇ 2018, 9:12 IST

ಪಾವಗಡ: ವಾಟ್ಸ್ಅಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪಹರಣಕಾರರ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿವೈಎಸ್ ಪಿ ಒ.ಬಿ. ಕಲ್ಲೇಶಪ್ಪ ಎಚ್ಚರಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಇತರೆ ರಾಜ್ಯಗಳ ಬೇರಾವುದೋ ಪ್ರಕರಣಕ್ಕೆ ಸಂಬಂಧಿಸಿದ ಚಿತ್ರ, ವಿಡಿಯೊಗಳನ್ನು ಎಡಿಟ್ ಮಾಡಿ ಕೆಲ ಕಿಡಿಗೇಡಿಗಳು ತಾಲ್ಲೂಕಿಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಇದರಿಂದ ಜನತೆಯ ನೆಮ್ಮದಿ ಹಾಳಾಗುತ್ತಿದೆ. ಶಾಂತಿಯುತ ವಾತಾವರಣಕ್ಕೆ ಬಂಗ ತರಲಾಗುತ್ತಿದೆ. ಸುಳ್ಳು ಸುದ್ದಿ ಹರಡುವವರು, ಅಂತಹ ಸುಳ್ಳು ಸಂದೇಶಗಳನ್ನು ಫಾರ್ವಾರ್ಡ್ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ADVERTISEMENT

‘ತಾಲ್ಲೂಕಿನ ಯಾವುದೇ ಠಾಣೆಯಲ್ಲಿ ಅಪಹರಣಕಾರರಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿಲ್ಲ. ಮಕ್ಕಳ ಅಪಹರಣಕಾರರನ್ನು ಯಾರೂ ನೋಡಿಲ್ಲ. ಕೆಲ ಕಿಡಿಗೇಡಿಗಳು ಮನರಂಜನೆಗಾಗಿ ಇಲ್ಲ ಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ. ಅಂತಹವರ ಮಾತಿಗೆ ಮನ್ನಣೆ ನೀಡಬೇಡಿ. ನಿದ್ದೆಗೆಟ್ಟು ಕೋಲು, ಮಾರಕಾಸ್ತ್ರಗಳನ್ನು ಹಿಡಿದು ಗ್ರಾಮದಲ್ಲಿ ಅನಗತ್ಯವಾಗಿ ಓಡಾಡಬೇಡಿ’ ಎಂದರು.

ಸಿಪಿಐ ಮಹೇಶ್, ಪಿಎಸ್ಐ ಮಧುಸೂದನ್, ಸಿಬ್ಬಂದಿ ಶ್ರೀನಿವಾಸ್, ಗೋಪಿ, ಮಂಜುನಾಥ್, ಸಚಿನ್, ಸಿದ್ದೇಶ್ ಉಪಸ್ಥಿತರಿದ್ದರು.

ವದಂತಿಗೆ ಕಿವಿಗೊಡಬೇಡಿ

ಚೇಳೂರು: ಮಕ್ಕಳನ್ನು ಕಳ್ಳತನ ಮಾಡಿ ನರ ಬಕ್ಷಣೆ ಮಾಡುತ್ತಾರೆ ಎಂದು ಹರಡಿರುವ ಸುದ್ದಿ ಕೇವಲ ವದಂತಿ ಎಂದು ಸಬ್‌ಇನ್‌ಸ್ಪೆಕ್ಟರ್‌ ಮುತ್ತುರಾಜ್ ತಿಳಿಸಿದರು.

ಹೋಬಳಿಯ ಮಂಚಲದೊರೆ, ಹಾಗಲವಾಡಿ, ನಿಟ್ಟೂರು, ಕೊಂಡ್ಲಿ, ಹೊಸಕೆರೆ, ಸೋಮಲಾಪುರ, ಅಂಕಸಂದ್ರ, ಸಾಗಸಂದ್ರ, ಮುಂತಾದ ಗ್ರಾಮಗಳಿಗೆ ಭೇಟಿ ಮಾಡಿ ವದಂತಿಗಳಿಗೆ ಕಿವಿ ಕೋಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.