ADVERTISEMENT

ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 4:33 IST
Last Updated 23 ಮೇ 2017, 4:33 IST

ತುಮಕೂರು: ‘ಈ ವರ್ಷದ ಕೊನೆಯಲ್ಲಿಯೇ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಾರ್ಯಕರ್ತರು ಇಂದಿನಿಂದಲೇ ಸಜ್ಜಾಗಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಜೆಡಿಎಸ್ ನವೀಕೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘15ದಿನಗಳಿಂದ ರಾಜ್ಯದಲ್ಲಿ 6.5 ಸಾವಿರ ಕಿಲೋಮೀಟರ್ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಮಾನವೀಯತೆ ಮತ್ತು ಸ್ಪಂದಿಸುವ ಹೃದಯವಂತಿಕೆ ಇದ್ದರೆ ರೈತರ ಕಷ್ಟಗಳು ಅರಿವಾಗುತ್ತವೆ. ಬರದಿಂದ ₹ 65 ಸಾವಿರ ಕೋಟಿ ಬೆಳೆ ನಷ್ಟ ಸಂಭವಿಸಿದೆ’ ಎಂದು ಆತಂಕ ವ್ಯಕ್ತಪಡಿಸಿರು.

‘ಕಲ್ಪತರು ನಾಡು ಎನ್ನುವ ಹೆಗ್ಗಳಿಕೆ ಪಡೆದಿರುವ ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ತೆಂಗಿನ ಮರಗಳು ಪೂರ್ಣ ಒಣಗಿವೆ. ತೆಂಗು ಮತ್ತು ಕೊಬ್ಬರಿಯನ್ನು ನೆಚ್ಚಿ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಕೊಬ್ಬರಿ ಹಾಗೂ ಅಡಿಕೆಗೆ ಬೆಂಬಲ ಬೆಲೆ ನೀಡುವಂತೆ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ರೈತರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸಲು ಚಾಲನೆ ನೀಡಿದೆ. 10 ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸರ್ಕಾರಗಳು ಎತ್ತಿನಹೊಳೆ ಸೇರಿದಂತೆ ಯೋಜನೆಗಳ ಹೆಸರಿನಲ್ಲಿ ಹಣ ಲೂಟಿ ಮಾಡಿವೆ’ ಎಂದು ದೂರಿದರು.

ರೈತರ ಸಾಲ ಮನ್ನಾ: ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ. ನಾನು ರೈತರ ಸಾಲ ಮನ್ನಾ ಮಾಡಿದೆ ಎಂದು ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ಅವರು ಸಾಲಮನ್ನಾಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬೇರೆ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಿಸಿ ನಾನು ಸಾಲ ಮನ್ನಾ ಮಾಡಿದೆ’ ಎಂದು ವಿವರಿಸಿದರು.

‘ಜನರು ಕಟ್ಟುವ ತೆರಿಗೆ ಹಣದ ಸೋರಿಕೆ ತಡೆಗಟ್ಟುವುದರಿಂದಲೇ ಸಾಲ ಮನ್ನಾಕ್ಕೆ ಹಣ ಒದಗಿಸಬಹುದು. ರೈತರ ಉತ್ಪನ್ನಗಳಿಗೆ  ಸರ್ಕಾರ ಸೂಕ್ತ ಮಾರುಕಟ್ಟೆ ನೀಡಬೇಕು’ ಎಂದು ಆಗ್ರಹಿಸಿದರು.

ಕೇಸರಿ ಹೂವಿಟ್ಟ ಪ್ರಧಾನಿ: ‘ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಜನರ ಕಿವಿಗೆ ಕೇಸರಿ ಹೂ ಇಟ್ಟಿದ್ದಾರೆ. ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ₹ 46 ಸಾವಿರ ಕೋಟಿ ಖರ್ಚು ಮಾಡುತ್ತೇವೆ ಎಂದು ಮೂರು ವರ್ಷವಾಯಿತು. ಸಾವಿರ ಕೋಟಿಯನ್ನೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ’ ಎಂದು ಟೀಕಿಸಿದರು.

‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸೌಲಭ್ಯಕ್ಕೆ ರಾಜ್ಯದ ರೈತರು ಆ ವಿಮಾ ಕಂಪೆನಿಗೆ ಒಟ್ಟು ₹ 1250 ಕೋಟಿ ಕಟ್ಟಿದ್ದಾರೆ. ವಿಮಾ ಕಂಪೆನಿಗೆ ದೇಶದ ವಿವಿಧ ರಾಜ್ಯಗಳ ರೈತರು ₹ 80 ಸಾವಿರ ಕೋಟಿ ಕಟ್ಟಿದ್ದಾರೆ. ಆದರೆ ಯಾವುದೇ ಪರಿಹಾರವೂ ದೊರೆತಿಲ್ಲ. ನರೇಂದ್ರ ಮೋದಿ ಅವರ ಚುನಾವಣೆಗಳಿಗೆ ಆರ್ಥಿಕ ನೆರವು ನೀಡುವ ವ್ಯಕ್ತಿಗಳಿಗೆ ಈ ಕಂಪೆನಿ ಸೇರಿದೆ’ ಎಂದು ಆರೋಪಿಸಿದರು.

‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಐಎಎಸ್ ಅಧಿಕಾರಿಗಳಿಂದ ಸರ್ಕಾರ ನಡೆಯುವುದಿಲ್ಲ. ಜನಸಾಮಾನ್ಯರು, ಕೊಳೆಗೇರಿ ನಿವಾಸಿಗಳು ಮತ್ತು ರೈತರಿಂದ ಸರ್ಕಾರ ನಡೆಯುತ್ತದೆ. ಆಯಾ ಜಿಲ್ಲೆಗಳ ಮಾದರಿ ರೈತರನ್ನು ಕರೆದು ಅವರಿಂದ ಮಾಹಿತಿ ಪಡೆದು ರೈತರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ’ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚನ್ನಿಗಪ್ಪ, ‘ಜಿಲ್ಲೆಯ ಶಾಸಕರು, ಮುಖಂಡರು ಮನೆ ಮನೆಗಳಿಗೆ ತೆರಳಿ ಕೆಲಸ ಮಾಡಬೇಕು. ನಿಮ್ಮ ಮೇಲೆ ದೂರು ಹೇಳುವವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಶಾಸಕರು ಎಂದಿಗೂ ಜಾತಿ ತಾರತಮ್ಯ ಮಾಡಬಾರದು. ಅಂತಸ್ತು ನೋಡಬಾರದು’ ಎಂದರು. ಹಿರಿಯ ಮುಖಂಡ ವಿಶ್ವೇಶ್ವರಯ್ಯ ಅವರನ್ನು ಸನ್ಮಾನಿಸಲಾಯಿತು.

ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್ ಬಾಬು, ಸುಧಾಕರ್ ಲಾಲ್, ಡಾ.ಶ್ರೀನಿವಾಸಮೂರ್ತಿ, ಮುಖಂಡರಾದ ಲೋಕೇಶ್ವರ್, ತಿಮ್ಮಾರೆಡ್ಡಿ ಮಾತನಾಡಿದರು. ಶಾಸಕರಾದ ಡಿ.ನಾಗರಾಜಯ್ಯ, ಶ್ರೀನಿವಾಸಮೂರ್ತಿ, ವಿಧಾನಪರಿಷತ್ ಸದಸ್ಯ ಕಾಂತರಾಜು, ರಮೇಶ್ ಬಾಬು, ಜಿಲ್ಲಾ ವೀಕ್ಷಕರಾದ ಪಟೇಲ್ ಶಿವರಾಂ, ಅಪ್ಪಾಜಿ ಗೌಡ, ಮೇಯರ್ ರವಿಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಮುಖಂಡರಾದ  ಡಿ.ಸಿ.ಗೌರಿಶಂಕರ್, ಸತ್ಯನಾರಾಯಣ್, ವೀರಭದ್ರಯ್ಯ, ನರಸೇಗೌಡ ಇದ್ದರು.

ಶಿಳ್ಳೆ ಹೊಡೆದರೆ ಸಾಲದು
ಗುಬ್ಬಿ ಶಾಸಕ ಎಸ್‌.ಆರ್.ಶ್ರೀನಿವಾಸ್, ‘ಕುಮಾರಸ್ವಾಮಿ ಅವರು ಬಂದಾಗ ಹೆಚ್ಚು ಜನರು ಸೇರುತ್ತಾರೆ. ಕಾರ್ಯಕರ್ತರು ಶಿಳ್ಳೆ ಹೊಡೆದು ಜೈಕಾರ ಸಹ ಹಾಕುತ್ತೀರಿ. ಆದರೆ ಇವು ಮತಗಳಾಗಿ ಪರಿವರ್ತನೆ ಆಗಬೇಕು. ಕುಮಾರಸ್ವಾಮಿ ಅವರನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಬೇಕು. ಇಲ್ಲದಿದ್ದರೆ ಅವರು ಸಿನಿಮಾ ತೆಗೆಯಲು ಹೋಗುತ್ತಾರೆ’ ಎಂದಾಗ ಎಚ್‌ಡಿಕೆ ಸಹ ಮುಗುಳ್ನಕ್ಕರು.

ವೀರಶೈವರು ಮೋಹಕ್ಕೆ ಬೀಳದಿರಿ
‘ಯಡಿಯೂರಪ್ಪ ಅವರಿಗೆ ಬಲ ತುಂಬಬೇಕು ಎನ್ನುವ ಉದ್ದೇಶದಿಂದ ಇಲ್ಲವೆ ಮೋಹಕ್ಕೆ ಒಳಗಾಗಿ ವೀರಶೈವರು ಬಿಜೆಪಿ ಬೆಂಬಲಿಸದಿರಿ. ನೀವು ಒಂದು ವೇಳೆ ಆ ಪಕ್ಷಕ್ಕೆ ಮತ ನೀಡಿದರೆ ಅದು ಬಿಜೆಪಿಗೆ ಸಲ್ಲುತ್ತದೆ ಅಷ್ಟೇ. ಚುನಾವಣೆಯ ನಂತರ ಯಡಿಯೂರಪ್ಪ ಅವರನ್ನು ಬಿಜೆಪಿಯವರೇ ಮನೆಯಲ್ಲಿ ಕೂರಿಸುತ್ತಾರೆ’ ಎಂದು ಕುಮಾರಸ್ವಾಮಿ ಹೇಳಿದರು.

ಚನ್ನಿಗಪ್ಪ ರಾಜ್ಯಸಭೆಗೆ
ತಮ್ಮ ಭಾಷಣದಲ್ಲಿ ‘ನಾನು ಯಾವುದೇ ಅಧಿಕಾರದ ಆಕಾಂಕ್ಷಿಯಲ್ಲ. ಪಕ್ಷ ಸಂಘಟನೆಯೇ ನನ್ನ ಗುರಿ’ ಎಂದ ಚನ್ನಿಗಪ್ಪ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಚನ್ನಿಗಪ್ಪ ಅವರು ಹಿರಿಯರು. ಸಂಸತ್ತಿಗೆ ದೇವೇಗೌಡರ ಜೊತೆ ಹೋಗಲಿ. ಅವರನ್ನು ರಾಜ್ಯಸಭೆಗೆ ಕಳುಹಿಸೋಣ’ ಎಂದರು.

* * 

ಜನರ ಮನಸ್ಸು ಮತ್ತು ಭಾವನೆಗಳನ್ನು ಬೇರೆಡೆ ಸೆಳೆಯಲು ನನ್ನ ಮೇಲೆ ತನಿಖೆಯ ನಾಟಕವನ್ನು ಸರ್ಕಾರ ಆಡುತ್ತಿದೆ. ನಾನು ತಪ್ಪೇ ಮಾಡಿಲ್ಲ. ಕಾರ್ಯಕರ್ತರು ಭಯಪಡುವ ಅಗತ್ಯ ಸ್ವಲ್ಪವೂ ಇಲ್ಲ.
ಎಚ್.ಡಿ.ಕುಮಾರಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.