ADVERTISEMENT

ವಿದೇಶಿಗರಿಗೆ ಮಣೆ, ಸķಳೀಯರಿಗೆ ಬರೆ

ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲೆಯವರಿಗಿಲ್ಲ ಭೂಮಿ

ಸಿ.ಕೆ.ಮಹೇಂದ್ರ
Published 28 ಸೆಪ್ಟೆಂಬರ್ 2016, 10:48 IST
Last Updated 28 ಸೆಪ್ಟೆಂಬರ್ 2016, 10:48 IST

ತುಮಕೂರು: ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಉದ್ದೇಶಿತ ರಾಷ್ಟ್ರೀಯ ಉತ್ಪಾದನಾ ಮತ್ತು ಹೂಡಿಕೆ ವಲಯದಲ್ಲಿ (ನಿಮ್ಜ್‌) ಬಂಡವಾಳ ಹೂಡಲು ದೇಶ– ವಿದೇಶಗಳ ಹೂಡಿಕೆದಾರರಿಗೆ ಕೆಂಪು ಹಾಸಿಗೆ (ರೆಡ್‌ ಕಾರ್ಪೆಟ್‌) ಹಾಕುತ್ತಿರುವ ಸರ್ಕಾರ, ಜಿಲ್ಲಾಡಳಿತ ಸ್ಥಳೀಯ ಹೂಡಿಕೆದಾರರನ್ನು ಕಡೆಗಣಿಸುತ್ತಿದೆ.

ಜಿಲ್ಲೆಯವರು ಕಾರ್ಖಾನೆಗಳನ್ನು ಸ್ಥಾಪಿಸಿದರೆ ಸ್ಥಳೀಯರಿಗೆ ಹೆಚ್ಚು ಉದ್ಯೋಗ ನೀಡುತ್ತಾರೆ. ಅಲ್ಲದೇ ಬೃಹತ್  ಬಂಡವಾಳ ಹೂಡಿಕೆ ಮಾಡಲು ಸ್ಥಳೀಯರಿಗೆ ಸಾಧ್ಯವಿಲ್ಲ. ಹೀಗಾಗಿ ಸಣ್ಣಪುಟ್ಟ ಕೈಗಾರಿಕೆ ತೆರೆಯಲು ಅನುಕೂಲವಾಗುವಂತೆ ಮಧ್ಯಮವರ್ಗದ ಉದ್ಯಮಶೀಲರನ್ನು ಪ್ರೋತ್ಸಾಹಿಸಲು ನಿಮ್ಜ್‌ನಲ್ಲಿ ಭೂಮಿ ನೀಡುವ ಪ್ರಸ್ತಾವ ನಾಲ್ಕು ವರ್ಷ ಕಳೆದರೂ ಕಾರ್ಯರೂಪಕ್ಕೆ ತರುತ್ತಿಲ್ಲ. ಈ ಮೂಲಕ ಜಿಲ್ಲೆಯ ಜನರನ್ನು ಕಡೆಗಣಿಸಲಾಗುತ್ತಿದೆ.

2012ರಲ್ಲೇ ಈ ಬಗ್ಗೆ ಚರ್ಚೆ ನಡೆದಿತ್ತು.  ಅದರಂತೆ ವಸಂತನರಸಾಪುರ ಮೂರನೇ ಹಂತದ ವಸಾಹತುವಿನಲ್ಲಿ  50 ಎಕರೆ  ನೀಡಲು ಜಿಲ್ಲಾಧಿಕಾರಿ ಅಧ್ಯಕ್ಷತೆ ಏಕ ಗವಾಕ್ಷಿ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಜಿಲ್ಲೆಯ ಸಣ್ಣ, ಮಧ್ಯಮ ವರ್ಗದ ಉದ್ಯಮಶೀಲರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ಕೈಗಾರಿಕೆ ಶೆಡ್‌ಗಳನ್ನು ನಿಮ್ಜ್‌ ವಲಯದಲ್ಲಿ ನೀಡಲು ತೀರ್ಮಾನಿಸಲಾಗಿತ್ತು.

ನಿಮ್ಜ್‌ನಲ್ಲಿ ಚೀನಾ, ಜಪಾನ್‌ ಟೌನ್‌ಶಿಪ್‌ ಸೇರಿ ಹಲವು ಬಹುರಾಷ್ಟ್ರೀಯ ಕಂಪೆನಿಗಳಿಗೆ ನೂರಾರು ಎಕರೆ ಭೂಮಿ ಹಂಚಿಕೆ ಮಾಡುತ್ತಿದ್ದಾರೆ. ಆದರೆ ಜಿಲ್ಲೆಯ ಉದ್ಯಮಶೀಲರಿಗೆ ಭೂಮಿ ನೀಡಲು ದಿನದೂಡುತ್ತಾ ಬರಲಾಗುತ್ತಿದೆ.

ಜಿಲ್ಲೆಯ ಸಣ್ಣ, ಮಧ್ಯಮ ವರ್ಗದ ಉದ್ಯಮಶೀಲರಿಗೆ 50 ಎಕರೆ ಭೂಮಿ ನೀಡುವುದಾಗಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ) ವಾಗ್ದಾನ ನೀಡಿತ್ತು. ಅದರಂತೆ  ತಾತ್ಕಾಲಿಕ ಭೂಮಿಯ ಮೌಲ್ಯ ಮತ್ತು ಸೇವಾ ಶುಲ್ಕದ ಒಟ್ಟು ಮೊತ್ತದ ಶೇ 20ರಷ್ಟು ಮೊತ್ತ ನೀಡುವಂತೆ ಬೇಡಿಕೆ ಮುಂದಿರಿಸಿತ್ತು.

ಕೆಐಎಡಿಬಿ ಬೇಡಿಕೆಗೆ ಅನುಗುಣವಾಗಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವು ₹1.72 ಕೋಟಿ ಹಣವನ್ನು 2013ರಲ್ಲೆ ಪಾವತಿಸಿದೆ. ಅಲ್ಲಿಂದ ಈವರೆಗೂ ಭೂಮಿಗಾಗಿ ಕಾಯುವುದೇ ಆಗಿದೆ.

ಎಕರೆಗಟ್ಟಲೆ ಭೂಮಿ ಖರೀದಿಸುವ ಬಹುರಾಷ್ಟ್ರೀಯ ಕಂಪೆನಿಗಳಿಗೆ  ಕೆಐಎಡಿಬಿ ಭೂಮಿ ನೀಡುತ್ತಿದೆ. ಆದರೆ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೆ ಭೂಮಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

ಏಕ ಗವಾಕ್ಷಿ ಸಮಿತಿಯಲ್ಲಿ ತೀರ್ಮಾನದಂತೆ  ವಸಂತ ನರಸಾಪುರ  ಕೈಗಾರಿಕಾ ಪ್ರದೇಶದಲ್ಲಿ ಬರುವ ಬತ್ಸಂದ್ರದ ಗ್ರಾಮದಲ್ಲಿ ಭೂಮಿ ಅಭಿವೃದ್ಧಿ ಪಡಿಸಿ ನೀಡಬೇಕಾಗಿತ್ತು. ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ಅನುಮತಿ ಸಿಕ್ಕ  ಕೂಡಲೇ ಭೂಮಿ ನೀಡುವುದಾಗಿ ಹೇಳಿ ಮೂರು ವರ್ಷ ಕಳೆದರೂ ಭೂಮಿ ನೀಡಿಲ್ಲ.

‘ಭೂಮಿ ಆದಷ್ಟು ಬೇಗ ನೀಡುವಂತೆ ಕೆಐಎಡಿಬಿಗೆ ಹಲವು ಸಲ ಪತ್ರ ಬರೆಯಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೂ ತರಲಾಗಿದೆ’ ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಜಿಲ್ಲೆಯ ಅನೇಕರು ಸಣ್ಣ ಸಣ್ಣ ಕೈಗಾರಿಕಾ ನಿವೇಶನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಆದರೆ ಕೆಐಎಡಿಬಿ ಭೂಮಿ ಹಂಚಿಕೆ ಮಾಡುತ್ತಿಲ್ಲ. ಬೇಗ ಭೂಮಿ ಹಂಚಿಕೆ ಮಾಡುವಂತೆ ಪತ್ರ ಕೂಡ ಬರೆಯಲಾಗಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್‌ ತಿಳಿಸಿದರು.

‘50 ಎಕರೆಗೆ ಸುಮಾರು ₹8.60 ಕೋಟಿ ಮೌಲ್ಯ ನಿಗದಿಪಡಿಸಲಾಗಿದೆ. ಮುಂಗಡವಾಗಿ ₹1.72 ಕೋಟಿ ಹಣ ಪಾವತಿಸಲಾಗಿದೆ. ಆದರೂ ಭೂಮಿ ನೀಡುತ್ತಿಲ್ಲ’ ಎಂದು ಅವರು  ತಿಳಿಸಿದರು.

‘ಫುಡ್‌ ಪಾರ್ಕ್‌ ಸ್ಥಾಪನೆಯಾದಾಗ ಸ್ಥಳೀಯರಿಗೆ ಸಾವಿರಾರು ಸಂಖ್ಯೆಯ ಉದ್ಯೋಗ ಸಿಗಲಿದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಈಗ ಇಲ್ಲಿ ಬೆರಳಣಿಕೆಯಷ್ಟು ಸ್ಥಳೀಯರು ಉದ್ಯೋಗದಲ್ಲಿಲ್ಲ.  ಇಂಥ ಸಂದರ್ಭದಲ್ಲಿ ಸ್ಥಳೀಯರಿಗೆ ಭೂಮಿ ನೀಡಲು ಹಿಂದೇಟು ಹಾಕುತ್ತಿರುವುದು ಎಷ್ಟು ಸರಿ’ ಎಂದು ಕರ್ನಾಟಕ ರಾಜ್ಯ ಮಾರಾಟ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕುಮಾರ್ ಹೇಳಿದರು.

ಸ್ಥಳೀಯರಿಗೂ ಆದ್ಯತೆ ಕೊಟ್ಟರೆ ಜಿಲ್ಲೆಯ ಜನರಲ್ಲಿ ಉದ್ಯಮಶೀಲತೆ ಬೆಳೆಯಲಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.