ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ತುಮಕೂರು ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಅಂಗನವಾಡಿ ನೌಕರರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 5:12 IST
Last Updated 21 ಜನವರಿ 2017, 5:12 IST
ಶಿರಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಶುಕ್ರವಾರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು
ಶಿರಾದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಶುಕ್ರವಾರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು   

ತುಮಕೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಬಿಜಿಎಸ್‌ ವೃತ್ತದಿಂದ ತಾಲ್ಲೂಕು ಪಂಚಾಯಿತಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಘಟಕ ಅಧ್ಯಕ್ಷ ಸೈಯದ್‌ ಮುಜೀಬ್ ಮಾತನಾಡಿ, ‘ಗೌರವಧನ ಆಧಾರದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಬೆಲೆ ಏರಿಕೆಗೆ ತಕ್ಕಂತೆ ವೇತನ ಸಹ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷೆ ಗಂಗಮ್ಮ ಮಾತನಾಡಿ, ‘ಅಂಗನವಾಡಿ ಕೇಂದ್ರಗಳಿಗೆ ಬರಬೇಕಾದ ₹ 3500 ಕೋಟಿ ಹಣವನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಎಸ್ಎಫ್ಐ ಜಿಲ್ಲಾ ಘಟಕ ಅಧ್ಯಕ್ಷ ಇ.ಶಿವಣ್ಣ,  ‘ಮಕ್ಕಳಿಗೆ ಅಂಗನವಾಡಿಯಿಂದಲೇ ಶಿಕ್ಷಣ ಪ್ರಾರಂಭವಾಗುತ್ತದೆ. ಆದರೆ ಈ ನೌಕರರ ಸಮಸ್ಯೆಗಳನ್ನು ಈಡೇರಿಸಲು ಸರ್ಕಾರ ನಿರ್ಲಕ್ಷಿಸುತ್ತಿದೆ. ಕೂಡಲೇ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಂದಾಗದಿದ್ದಲ್ಲಿ ಹೋರಾಟ ತೀವ್ರ ಗೊಳಿಸಲಾಗುವುದು’ ಎಂದು ಹೇಳಿದರು.

ಸಂಘಟನೆ ಖಜಾಂಚಿ ಮೆಹಂತಾಜ್, ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರಿ, ಲಕ್ಷ್ಮಿದೇವಮ್ಮ, ದರ್ಶನ್ ಸೇರಿದಂತೆ ತಾಲ್ಲೂಕಿನ ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸರ್ಕಾರಕ್ಕೆ ಮನವಿ
ಶಿರಾ:
ನಗರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಪ್ರತಿಭಟನೆ ನಡೆಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮಹಮದ್ ಮುಬೀನ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರವಾಸಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ನಂತರ ತಾಲ್ಲೂಕು ಪಂಚಾಯಿತಿ ಕಚೇರಿಗೆ ತೆರಳಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷ ನಿಸಾರ್ ಅಹಮದ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಹದೇವಮ್ಮ, ಕಾರ್ಯದರ್ಶಿ ನಾಗರತ್ನ, ಖಚಾಂಚಿ ಕಮಲಮ್ಮ, ಮಂಜುಳಾ, ಕವಿತಾ, ಲಕ್ಷ್ಮಿಕುಮಾರಿ, ಶಾರದಾ, ಪ್ರಮೀಳಾ ಮತ್ತಿತರರು ಇದ್ದರು. 

ಮರಳಿ ಕೆಲಸಕ್ಕೆ ತೆಗೆದುಕೊಳ್ಳಿ
ಮಧುಗಿರಿ:
ಅಂಗನವಾಡಿ ನೌಕರರ ಸಂಘ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಲಬುರ್ಗಿ, ರಾಯಚೂರು ಮತ್ತು ಗದಗ ಜಿಲ್ಲೆಗಳಲ್ಲಿ ಕೆಲಸದಿಂದ ಅಮಾನ್ಯ ಮಾಡಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳುವುದು, ಜಿಲ್ಲೆಯಲ್ಲಿ ಗುರುತಿಸಿದ ಆಸ್ಪತ್ರೆಗಳಲ್ಲಿ ಕಾರ್ಯಕರ್ತೆಯರಿಗೆ ಚಿಕಿತ್ಸೆಗೆ ಅವಕಾಶ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಅಂಗನವಾಡಿ ನೌಕರರ ತಾಲ್ಲೂಕು ಅಧ್ಯಕ್ಷೆ ಎಸ್.ಡಿ.ಪಾರ್ವತಮ್ಮ, ಕಾರ್ಯದರ್ಶಿ ನಾಗರತ್ನಮ್ಮ, ಪದಾಧಿಕಾರಿಗಳಾದ ಸುಶೀಲಮ್ಮ, ಸಾವಿತ್ರಮ್ಮ, ಸರೋಜಮ್ಮ, ನಾಗಲಕ್ಷ್ಮಿ, ಮಲ್ಲಮ್ಮ, ಭಾರತಿ, ಪಾರ್ವತಮ್ಮ, ಅಕ್ಷರ ದಾಸೋಹ ಪದಾಧಿಕಾರಿಗಳಾದ ನಾಗರತ್ನಮ್ಮ, ಮಂಜುಳಾ, ಶಿವರುದ್ರಮ್ಮ, ಜಯಲಕ್ಷ್ಮಮ್ಮ, ಚಂದ್ರಮ್ಮ, ಲಕ್ಷ್ಮಮ್ಮ, ನಾಗಲಕ್ಷ್ಮಿ ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.