ADVERTISEMENT

ವೇದಿಕೆ ಸಿದ್ಧ ನೀವು...?

ಫೀನಿಕ್ಸ್ ಹುಡುಗರ ಟ್ಯಾಲೆಂಟ್ ಸ್ಟೇಜ್

ಎಂ.ಶ್ರೀನಿವಾಸ
Published 18 ಸೆಪ್ಟೆಂಬರ್ 2014, 4:51 IST
Last Updated 18 ಸೆಪ್ಟೆಂಬರ್ 2014, 4:51 IST

ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈಗ ‘ಟ್ಯಾಲೆಂಟ್ಸ್ ಆಫ್ ತುಮಕೂರ್’ ಸ್ಪರ್ಧೆಯದ್ದೇ ಸದ್ದು. ‘ಫೀನಿಕ್ಸ್’ ತಂಡದ ಸದಸ್ಯರಿಗೆ ವಿಪರೀತ ಅನ್ನುವಷ್ಟು ಕೆಲಸ. ಇಷ್ಟು ದಿನ ಕಾಲೇಜಿನಲ್ಲಿ ಇದ್ದ ಟೆಕ್ನಿಕಲ್ ಹಾಗೂ ಕಲ್ಚರಲ್ ಟೀಮ್‌ಗೆ ಹೊಸ ಸೇರ್ಪಡೆ ಈ ಫೀನಿಕ್ಸ್. ಕಾರ್ಯಕ್ರಮದ ಆಯೋಜನೆ-, ನಿರ್ವಹಣೆ ಇವರ ಜವಾಬ್ದಾರಿ. ಈ ತಂಡದ ಮೊದಲ ಸಾಹಸ ‘ಟ್ಯಾಲೆಂಟ್ಸ್ ಆಫ್ ತುಮಕೂರ್’: ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ಇದರ ಟ್ಯಾಗ್‌ ಲೈನ್.

ಜಿಲ್ಲೆಯ ಪ್ರತಿಭೆಗಳ ಹೊಳಪು ಹೆಚ್ಚಿಸಿಕೊಳ್ಳಲು, ಕ್ರಿಯಾಶೀಲತೆ ತೋರಲು ಅವಕಾಶ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶ. ಜನಪದಗೀತೆ, ಗಾಯನ, ಗುಂಪು ಗಾಯನ, ನೃತ್ಯ, ಗುಂಪು ನೃತ್ಯ, ಯೋಗ, ಭರತನಾಟ್ಯ... ಹೀಗೆ ಹಲವು ಬಗೆಯ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ ಎಂಬ ಒಕ್ಕಣೆಯೊಂದಿಗೆ ಜಿಲ್ಲೆಯ 350ಕ್ಕೂ ಹೆಚ್ಚು ಕಾಲೇಜಿಗಳಿಗೆ ಆಹ್ವಾನ ತಲುಪಿತ್ತು.

ಒಟ್ಟಾರೆ ಬಂದಿದ್ದ 130 ಪ್ರವೇಶಗಳ ಪೈಕಿ ‘ಅತ್ಯುತ್ತಮ’ ಎನಿಸಿದ 25 ತಂಡ ಸ್ಪರ್ಧೆಗಳಿಗೆ ಪೈಪೋಟಿ ನಡೆಸಲಿವೆ. ಸದ್ಯಕ್ಕೆ ಸ್ಪರ್ಧೆಯ ಒಂದು ಹಂತ ಮುಗಿದು, ಇದೇ 20, 21ಕ್ಕೆ ಅಂತಿಮವಾದ ತಂಡಗಳು, ವೈಯಕ್ತಿಕ ವಿಭಾಗದ ಸ್ಪರ್ಧಿಗಳು ಬೆವರು ಹರಿಸುತ್ತಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಕೆ.ಶಿವರುದ್ರಪ್ಪ ಅವರು ತೀರ್ಪುಗಾರರ ಪೈಕಿ ಒಬ್ಬರಾಗಿದ್ದರು. ಸೆ. 20ರಂದು ನಡೆಯುವ ಸ್ಪರ್ಧೆಗಾಗಿ ಈವ್ ಟೀಸಿಂಗ್, ಸ್ವಯಂ ಉದ್ಯೋಗ, ಶುದ್ಧ ಕುಡಿಯುವ ನೀರು, ಮಳೆ ನೀರು ಸಂಗ್ರಹ, ವಿದ್ಯುತ್ ಉತ್ಪಾದನೆ– ಈ ರೀತಿ ಐದು ವಿಷಯಗಳನ್ನು ನೀಡಲಾಗಿದೆ. ಸಮಾಜಕ್ಕೆ ಸಂದೇಶ ನೀಡುವಂಥ, ಜಾಗೃತಿ ಮೂಡಿಸಲು ಅಂದಿನ ವೇದಿಕೆ ಮೀಸಲು. ಜತೆಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ಕೂಡ ಇರುತ್ತದೆ. ಮಾರನೇ ದಿನ ಮಾಮೂಲಿನಂತೆ ಸ್ಪರ್ಧೆಯ ಅಂತಿಮ ಹಣಾಹಣಿ ನಡೆಯುತ್ತದೆ.

ಈ ಸಂದರ್ಭದಲ್ಲಿ ‘ಫೀನಿಕ್ಸ್’ ತಂಡದ ಉದ್ದೇಶದ ಬಗ್ಗೆಯೂ ತಿಳಿಸಬೇಕು. ಹಳ್ಳಿ-ಹಳ್ಳಿಯ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳಲ್ಲಿ ಎಂಜಿನಿಯರಿಂಗ್ ಬಗ್ಗೆ ಪ್ರೀತಿ ಬೆಳೆಯುವಂತೆ ಮಾಡಬೇಕು, ಶ್ರವಣ ದೋಷ ಇರುವ, ಮಾತು ಬಾರದ ಮಕ್ಕಳ ಶಾಲೆಗಳಿಗೆ ನೆರವು ಒದಗಿಸಬೇಕು ಎಂಬುದು ಈ ಬಾರಿಯ ಪ್ರಾಮುಖ್ಯತೆಯಾಗಿತ್ತು. ಎಷ್ಟೋ ದೂರ ಕ್ರಮಿಸುವ ರಸ್ತೆಯಲ್ಲಾದರೂ ಸರಿ, ಮೊದಲ ಹೆಜ್ಜೆ ಇಡಬೇಕು. ಅದು ‘ಟ್ಯಾಲೆಂಟ್ಸ್ ಆಫ್ ತುಮಕೂರ್’ನಿಂದ ಆರಂಭವಾಗಿದೆ. ಇದು ಇನ್ನೂ ಬೆಳೆಯಬೇಕು. ಅದಕ್ಕೂ ಮುಂಚೆ ಸೆ.21, 22 ನೀವು ಖಂಡಿತಾ ಬರಬೇಕು, ಮರೆಯಬೇಡಿ’ ಎಂದರು ತಂಡದ ಸದಸ್ಯರಲ್ಲೊಬ್ಬರಾದ ಸಾಗರ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.