ADVERTISEMENT

ಶಾಸಕರಿಂದ ದಬ್ಬಾಳಿಕೆ ರಾಜಕಾರಣ

ಶಾಸಕರ ಸಹೋದರ ಡಿ.ಕೃಷ್ಣಕುಮಾರ್: ಆರೋಪ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 4:57 IST
Last Updated 16 ಜನವರಿ 2017, 4:57 IST
ಶಾಸಕರಿಂದ ದಬ್ಬಾಳಿಕೆ ರಾಜಕಾರಣ
ಶಾಸಕರಿಂದ ದಬ್ಬಾಳಿಕೆ ರಾಜಕಾರಣ   

ಕುಣಿಗಲ್: ಶಾಸಕ ಡಿ. ನಾಗರಾಜಯ್ಯ ಅವರ ದಬ್ಬಾಳಿಕೆ ರಾಜಕಾರಣ ಹೆಚ್ಚಾಗಿದೆ. ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಅತಂತ್ರ ಸ್ಥಿತಿಯಲ್ಲಿವೆ ಎಂದು ಬಿಜೆಪಿ ಮುಖಂಡ ಶಾಸಕರ ಸಹೋದರ ಡಿ.ಕೃಷ್ಣಕುಮಾರ್ ಆರೋಪಿಸಿದರು.

ಎಪಿಎಂಸಿ ಚುನಾವಣೆಯ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಶಾಸಕ ಡಿ.ನಾಗರಾಜಯ್ಯ ಚುನಾವಣಾಧಿಕಾರಿಗಳ ಮೇಲೆ ಪ್ರಭಾವ ಬೀರಿ ಬಿಜೆಪಿ ಪಾಲಾಗಿದ್ದ ಅಮೃತೂರು ಕ್ಷೇತ್ರದ ಫಲಿತಾಂಶವನ್ನು ಜೆಡಿಎಸ್ ಪರಮಾಡಿಕೊಂಡರು ಎಂದು ಸುದ್ದಿಗೊಷ್ಠಿಯಲ್ಲಿ ದೂರಿದರು.

ವ್ಯಾಪಾರಗಾರರ ಕ್ಷೇತ್ರದ ಫಲಿತಾಂಶ ಸಹ ಜೆಡಿಎಸ್‌ಗೆ ಬರುವಂತೆ ನೋಡಿಕೊಂಡರು. ಶಾಸಕರು ಮತ ಎಣಿಕೆ ಕೇಂದ್ರಕ್ಕೆ ಬಂದು ತಮ್ಮ ಅಧಿಕಾರ ಬಳಸಿ ಬಿಜೆಪಿ ಪಾಲಾಗಿದ್ದ ಫಲಿತಾಂಶವನ್ನು ಜೆಡಿಎಸ್ ಪರ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ. ತಾಲ್ಲೂಕಿನಲ್ಲಿ ಬಿಜೆಪಿ ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ತಿಳಿಸಿದರು.

ಶಾಸಕರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸುತ್ತಿರುವಾಗ ಕಾರ್ಯಕರ್ತರು ಸಹ ಹೋಗುತ್ತಿದ್ದನ್ನು ಖಂಡಿಸಿದ ಬಿಜೆಪಿ ಮುಖಂಡನ ಶ್ರೀನಿವಾಸ್ ಮೇಲೆ ಶಾಸಕರ ಪುತ್ರ ಬಿ.ಎನ್.ಜಗದೀಶ್ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಹುಲಿಯೂರುದುರ್ಗ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶಾಸಕರ ಪುತ್ರ ಬಿ.ಎನ್.ರವಿ ಸೋಲಿಗೆ ಶ್ರೀನಿವಾಸ್ ಕಾರಣ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದರೆ  ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಶಾಸಕರು ಸಹ ತಮ್ಮ ಪುತ್ರರ ಪರ ಆಭಿಪ್ರಾಯಗಳಿಗೆ ಮನ್ನಣೆ ನೀಡಿದ್ದಾರೆ. ಅಲ್ಲದೆ ಟಿಎಪಿಎಂಎಸ್ ನಲ್ಲಿ ಜೆಡಿಎಸ್ ಹಿರಿಯ ನಿರ್ದೇಶಕರಿದ್ದರೂ ತಮ್ಮ ಸಹೋದರ ಬಿ.ಶಿವಣ್ಣ ಅವರನ್ನು  ಎಪಿಎಂಸಿಗೆ ಅವಿರೋಧ ಆಯ್ಕೆ ಮಾಡಿಸಿದ್ದಾರೆ ಎಂದು ಅವರು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಜನ ಶಾಸಕರ ಪುತ್ರರನ್ನು ತಿರಸ್ಕರಿಸಿದ್ದರೂ ತಾಲ್ಲೂಕಿನ ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಸಹಕರಿಸುತ್ತಿದ್ದಾರೆ ಎಂದರು.

ಹಿರಿಯ ಮುಖಂಡರಾದ ಬಿ.ಆರ್.ನಾರಾಯಣ್ ಗೌಡ, ವೆಂಕಟೇಶ್ ರಂಗಸ್ವಾಮಿ, ಶ್ರೀನಿವಾಸ್, ಎಪಿಎಂಸಿ ನಿರ್ದೇಶಕಿ ಶಶಿಕಲಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.