ADVERTISEMENT

ಶಾಸಕಾಂಗ ಪ್ರವೇಶಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:46 IST
Last Updated 24 ಡಿಸೆಂಬರ್ 2017, 5:46 IST

ಕುಣಿಗಲ್: ದೇಶದ ರಾಜಕೀಯ ಪಕ್ಷಗಳಿಂದ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ, ರೈತರು ಜಾಗೃತರಾಗಿ ಶಾಸಕಾಂಗದಲ್ಲಿ ಪ್ರವೇಶಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ತಾಲ್ಲೂಕು ರೈತಸಂಘದ ವತಿಯಿಂದ ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ನೀಡಿದ ಭರವಸೆಗಳು ಈಡೇರಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಜಾರಿಯಾಗಿಲ್ಲ. ಮುಂಬರುವ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಯ ಯಡೆಯೂರಪ್ಪ ಅಂಡ್ ಕಂಪೆನಿ ಉತ್ತರ ನೀಡಬೇಕಿದೆ. ರಾಷ್ಟ್ರಿಕೃತ ಬ್ಯಾಂಕ್‌ಗಳು ಉದ್ಯಮಿಗಳಿಗೆ ಶೇ 0.05 ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಹಿಂದೇಟು ಹಾಕ್ಕುತ್ತಿದೆ ಎಂದು ಟೀಕಿಸಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿದಂತೆ ಕೆಲ ಸಂಘ ಸಂಸ್ಥೆಗಳು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕೇಂದ್ರ ಸರ್ಕಾರದಿಂದ ಶೂನ್ಯ ಬಡ್ಡಿ ದರದಲ್ಲಿ ಹಣ ತಂದು ಶೇ 30 ಬಡ್ಡಿ ವಸೂಲಿ ಮಾಡಿ ದಂಧೆ ಮಾಡುತ್ತಿವೆ. ದೇವಾಲಯದ ಹುಂಡಿ ಹಣವನ್ನೇನು ತಂದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಾಲ ನೀಡುತ್ತಿಲ್ಲ ಎಂದು ಹೇಳಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ದೇಶ ಮತ್ತು ರಾಜ್ಯವನ್ನು ಆಳಿದ ಸರ್ಕಾರಗಳು ದೇಶದ ರಕ್ಷಣೆ ಮಾಡುವ ಯೋಧ ಮತ್ತು ಅನ್ನದಾತನಿಗೆ ಗೌರವ
ನೀಡಿಲ್ಲ. ತಾಲ್ಲೂಕಿನಲ್ಲಿ ನಾಲ್ಕು ವರ್ಷ ಅಧಿಕಾರ ಮಾಡಿದ ಶಾಸಕರಾಗಲಿ ಸಂಸದರಾಗಲಿ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ಹೇಮಾವತಿ ನೀರು ಹರಿಸಲು ವಿಫಲರಾಗಿದ್ದಾರೆ. ತಾಲ್ಲೂಕಿನಲ್ಲಿ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ. ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲ ಕೆರೆಗಳಿಗೆ ನೀರು ಹರಿಸಿ ಚಲುವರಾಯಸ್ವಾಮಿ ಋಣ ತೀರಿಸಲು ಹೊರಟ್ಟಿದ್ದಾರೆ. ಶ್ರೀರಂಗ ಏತನೀರಾವರಿ ಯೋಜನೆ ಮೂಲಕ ಮಾಗಡಿ ತಾಲ್ಲೂಕು ಕೆರೆಗಳಿಗೆ ನೀರು ತುಂಬಿಸಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.

ಡಿ.ಕೆ.ರವಿ ಅವರ ತಾಯಿ ಗೌರಮ್ಮ, ತಂದೆ ರಾಮಣ್ಣ, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದರಾಜು, ಚನ್ನರಾಯಪಟ್ಟಣ ಚಂದ್ರಪ್ಪ, ಹುಣಸೂರು ಬೆಟ್ಟೆಗೌಡ, ತುರುವೆಕೆರೆ ಕೀರ್ತಿ, ಕೆಂಕೆರೆ ಸತೀಶ್, ಬೆಂಗಳೂರು ಗ್ರಾಮಾಂತರ ಚಿಕ್ಕೇಗೌಡ ಇದ್ದರು. ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ರೈತ ಮಹಿಳೆಯರು ಮತ್ತು ಪುರುಷರನ್ನು ಪಾದ ತೊಳೆದು ಪೂಜಿಸಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.