ADVERTISEMENT

ಸಾಮರಸ್ಯದ ಬದುಕಿಗೆ ಅಹಿಂಸೆ ಪಾಲನೆ ಅವಶ್ಯ

ಸಿದ್ದಗಂಗಾ ಶ್ರೀಗಳಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:56 IST
Last Updated 18 ಏಪ್ರಿಲ್ 2017, 5:56 IST
ಸಾಮರಸ್ಯದ ಬದುಕಿಗೆ ಅಹಿಂಸೆ ಪಾಲನೆ ಅವಶ್ಯ
ಸಾಮರಸ್ಯದ ಬದುಕಿಗೆ ಅಹಿಂಸೆ ಪಾಲನೆ ಅವಶ್ಯ   
ತುಮಕೂರು: ‘ಸಮಾಜದಲ್ಲಿ ಸಾಮರಸ್ಯದ ಬದುಕಿಗೆ ಅಹಿಂಸೆ ಪಾಲನೆ ಅವಶ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
 
ಸೋಮವಾರ ಸಿದ್ದಗಂಗಾಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಸಿದ್ದಗಂಗಾ ಮಠಾಧೀಶರಾದ ಶಿವಕುಮಾರ ಸ್ವಾಮೀಜಿ ಅವರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
 
‘ಅಹಿಂಸೆ ಮತ್ತು ಶಾಂತಿ ಜೈನ ಧರ್ಮದ ತಿರುಳಾಗಿದೆ. ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದ ಭಗವಾನ್ ಮಹಾವೀರರು ದೇಶದ ಉದ್ದಗಲಕ್ಕೂ ಜೈನ ಧರ್ಮ ಪ್ರಚಾರ ಮಾಡಿದ್ದಾರೆ’ ಎಂದು ತಿಳಿಸಿದರು.
 
‘ಎಲ್ಲಿ ಹಿಂಸೆ ಇರುವುದಿಲ್ಲವೊ ಅಲ್ಲಿ ಶಾಂತಿ ಮತ್ತು ಸಾಮರಸ್ಯದ ಬದುಕು ಇರುತ್ತದೆ.  ಅದರಲ್ಲೂ ಭಾರತದಂತಹ ದೇಶದಲ್ಲಿ ಅನೇಕ ಧರ್ಮ, ಜಾತಿ, ಪಂಗಡ ಎಲ್ಲವೂ ಇವೆ. ಇಲ್ಲಿ ಸಹನೆ, ಶಾಂತಿ, ಸಹಿಷ್ಣುತೆಯಿಂದ ಇರಬೇಕಾಗುತ್ತದೆ’ ಎಂದು ಹೇಳಿದರು.
 
‘ಇನ್ನೊಬ್ಬರನ್ನು ಪ್ರೀತಿಸಿ ಗೌರವಿಸುವ ಮನೋಭಾವ ಇರಬೇಕು. ಇದರಿಂದ ಸಾಮರಸ್ಯದ ಸಮಾಜ ರೂಪುಗೊಳ್ಳುತ್ತದೆ. ಬುದ್ಧ, ಮಹಾವೀರ, ಬಸವಾದಿ ಶರಣರು, ಸೂಫಿಗಳು, ದಾಸರು ಇದನ್ನೇ ಜಗತ್ತಿಗೆ ಹೇಳಿದ್ದಾರೆ’ ಎಂದು ಹೇಳಿದರು.
 
‘ಶಿವಕುಮಾರ ಸ್ವಾಮೀಜಿಯವರು ಶಾಂತಿದೂತರಾಗಿದ್ದಾರೆ. ಪರಧರ್ಮ ಗೌರವಿಸಿ ಸಹಿಷ್ಣುತೆಯಿಂದ ಬಾಳುವುದಕ್ಕೆ ಮಾರ್ಗದರ್ಶನ ಮಾಡಿದ್ದಾರೆ’ ಎಂದರು.
 
ರಾಷ್ಟ್ರೀಯ ಪ್ರಶಸ್ತಿ: ‘ಮಹಾವೀರ ಶಾಂತಿ ಪ್ರಶಸ್ತಿಯೂ ರಾಜ್ಯ ಪ್ರಶಸ್ತಿಯಲ್ಲ. ಇದೊಂದು ರಾಷ್ಟ್ರೀಯ ಪ್ರಶಸ್ತಿಯಾಗಿದೆ’ ಎಂದರು.
 
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಬದುಕಿಗೆ ಚೇತನ ತುಂಬುವ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಬದುಕು ಎಂದರೆ ಸಮಚಿತ್ತ, ಸಮಭಾವ, ಸಮಾಧಾನ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬದುಕಿಗೆ ಬುನಾದಿಯಾಗಿದ್ದಾರೆ’ ಎಂದು ನುಡಿದರು.
 
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಸುರೇಶಗೌಡ ಮಾತನಾಡಿ, ‘ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲು ನಿಯೋಗದಲ್ಲಿ ತೆರಳಿ ಪ್ರಧಾನಿಯವರಿಗೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.
 
ಸಾನ್ನಿಧ್ಯ ವಹಿಸಿದ್ದ ಸಿದ್ದಗಂಗಾಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ, ‘ಶಿವಕುಮಾರ ಸ್ವಾಮೀಜಿಯವರಿಗೆ  ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಪ್ರದಾನ ಮಾಡಿರುವುದಕ್ಕೆ ಮಠ, ಮಠದ ಶಿಷ್ಯರ ಪರವಾಗಿ ಸರ್ಕಾರಕ್ಕೆ ಅಭಿನಂದಿಸುತ್ತೇನೆ’ ಎಂದು ಅವರು ನುಡಿದರು.
 
‘ಶಾಂತಿ ಮನುಷ್ಯನ ಹೃದಯದಲ್ಲಿ ಹುಟ್ಟಬೇಕು. ಎಲ್ಲರನ್ನು ಪ್ರೀತಿಸುವಂತಹುದು ಧರ್ಮ. ವಿಂಗಡಿಸುವುದು ಜಾತಿಯಾಗಿದೆ. ಎಲ್ಲರನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಅವರು ಹೇಳಿದರು.
 
ವಿಧಾನ ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಎಂ.ಡಿ.ಲಕ್ಷ್ಮಿನಾರಾಯಣ, ಉಪಮೇಯರ್ ಫರ್ಜಾನಾ ಖಾನಂ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್‌ಕುಮಾರ್ ಇದ್ದರು.
***
ಮಹಾವೀರರ ತತ್ವ ಪಾಲಿಸಿ
‘ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯೆ ಮತ್ತು ಅಪರಿಗ್ರಹ– ಇವು ಮಹಾವೀರರ ಬೋಧನಾ ತತ್ವಗಳಾಗಿವೆ. ಈ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ, ಸಹಬಾಳ್ವೆಯಿಂದ ಬದುಕಬೇಕು’ ಎಂದು ಶಿವಕುಮಾರ ಸ್ವಾಮೀಜಿ ನುಡಿದರು.

‘ಸರ್ಕಾರ ಭಗವಾನ್ ಮಹಾವೀರ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ರೀಮಠದ ಕೆಲಸ ಕಾರ್ಯಗಳ ಬಗ್ಗೆ ಸರ್ಕಾರದ ಗೌರವ ಸೂಚಕವೆಂದು ತಿಳಿಯಬೇಕಾಗಿದೆ’ ಎಂದು ಹೇಳಿದರು.
***
ನಾಡಗೀತೆಗೆ ಸ್ವಾಮೀಜಿ ಗೌರವ
ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡಗೀತೆ ಹಾಡುವಾಗ ಶಿವಕುಮಾರ ಸ್ವಾಮೀಜಿ ಎದ್ದು ನಿಲ್ಲಲು ಪ್ರಯತ್ನಿಸಿದರು. ಪಕ್ಕದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಪರವಾಗಿಲ್ಲ ಕುಳಿತುಕೊಳ್ಳಿ ಕುಳಿತುಕೊಳ್ಳಿ’ ಎಂಬಂತೆ ಕೈ ಸನ್ನೆ ಮಾಡಿದರು.ಆದರೆ, ಸ್ವಾಮೀಜಿಯವರ ಮನಸ್ಸು ತಡೆಯಲಿಲ್ಲ. ನಾಡಗೀತೆ ಪೂರ್ಣ ಮುಗಿಯುವವರೆಗೂ ಎದ್ದು ನಿಂತು ಗೌರವ ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.