ADVERTISEMENT

ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಿಗಲಿ

‘ಮುಸ್ಲಿಮ್ ಸಮುದಾಯ ಸಬಲೀಕರಣ ಸಮಾವೇಶ’ದಲ್ಲಿ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 11:24 IST
Last Updated 11 ಜನವರಿ 2017, 11:24 IST

ತುಮಕೂರು: ‘ಮುಸ್ಲಿಮರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಸಿಗಬೇಕು. ಕೋಮುಗಲಭೆ ಸೃಷ್ಟಿಸುವವರನ್ನು ಪೊಲೀಸರು ಮಟ್ಟ ಹಾಕಬೇಕು’ ಎಂದು  ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.

ಮಂಗಳವಾರ ಕರ್ನಾಟಕ ಮುಸ್ಲಿಮರ ಸಮನ್ವಯ ಸಮಿತಿಯು (ಕೆಎಂಸಿ) ಆಯೋಜಿಸಿದ್ದ ‘ಮುಸ್ಲಿಂ ಸಮುದಾಯ ಸಬಲೀಕರಣ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಮುಸ್ಲಿಂ ಸಮುದಾಯದ ಸ್ಥಿತಿಗತಿ ಸುಧಾರಿಸಿಲ್ಲ. ಶಾಲೆಗೆ ಹೋಗಬೇಕಾದ ಮಕ್ಕಳು ಇಂದಿಗೂ ಗ್ಯಾರೇಜ್, ವರ್ಕ್‌ಶಾಪ್‌ಗಳಲ್ಲಿ ಕೆಲಸ ಮಾಡುತ್ತಾರೆ. ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಿಲ್ಲ. ಸಮಾಜದ ಮುಖ್ಯವಾಹಿನಿಯಲ್ಲಿ ಗಟ್ಟಿಯಾಗಿ ನಿಲ್ಲಲು ಕಷ್ಟಪಡಬೇಕಿದೆ. ದಲಿತರು, ಬಡವರು, ರೈತರ ಸ್ಥಿತಿಗತಿಯಲ್ಲೂ ಸುಧಾರಣೆ ಕಂಡಿಲ್ಲ’ ಎಂದು ವಿಷಾದಿಸಿದರು.

‘ಈ ದೇಶದಲ್ಲಿ ಮಾನವ ಸಂಪನ್ಮೂಲ, ನೈಸರ್ಗಿಕ ಸಂಪತ್ತು, ಜ್ಞಾನ ಸಂಪತ್ತು ಎಲ್ಲವೂ ಇದೆ. ಆದಾಗ್ಯೂ ಒಟ್ಟು ಸಮುದಾಯದ ಅಭಿವೃದ್ಧಿ ಆಗದೇ ಇರುವುದಕ್ಕೆ ಕಾರಣ ಏನು ಎಂಬುದನ್ನು ಜನರೇ ಪ್ರಶ್ನಿಸಬೇಕಾಗಿದೆ ಎಂದು ಹೇಳಿದರು.

‘ನಮ್ಮ ದೇಶಕ್ಕೆ 5000 ವರ್ಷಗಳ ಇತಿಹಾಸವಿದ್ದು, ಸಹೋದರತ್ವ, ಸಹಬಾಳ್ವೆ ಈ ನೆಲದ ಗುಣವಾಗಿದೆ.  ನಮ್ಮದು ಸಾಂಸ್ಕೃತಿಕ ಶ್ರೀಮಂತಿಕೆಯ ರಾಷ್ಟ್ರವಾಗಿದೆ. ಬಡವರು, ಅಲ್ಪಸಂಖ್ಯಾತರು, ಮಹಿಳೆಯರು ಎಲ್ಲರೂ ಸಮಾನರೇ ಆಗಿದ್ದು, ಸಮಾನ ಹಕ್ಕುಗಳಿವೆ. ನಮ್ಮ ಧರ್ಮ ಗ್ರಂಥಗಳ ಸಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಪ್ಪು ಸಂದೇಶ, ಹೇಳಿಕೆ ನೀಡಿ ಸಮಾಜವನ್ನೇ ದಿಕ್ಕು ತಪ್ಪಿಸುತ್ತಾರೆ. ಕೋಮು ಗಲಭೆ ಸೃಷ್ಟಿಗೂ ಕಾರಣರಾಗುತ್ತಾರೆ. ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

‘ದೇಶದ ಭದ್ರತೆಯ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು. ದೇಶ ರಕ್ಷಣೆಗೆ ನಿಂತ ಸೈನಿಕರು ಭಯೋತ್ಪಾದಕರ ಕೃತ್ಯಕ್ಕೆ ಬಲಿಯಾಗುತ್ತಾರೆ. ಶ್ರಮಿಕ ಕುಟುಂಬಗಳಿಂದಲೇ ಸೈನಿಕರು ಹೊರಹೊಮ್ಮಿ ದೇಶ ರಕ್ಷಿಸುತ್ತಾರೆ. ಅಂತಹವರ ತ್ಯಾಗ, ಹೋರಾಟದ ಬಗ್ಗೆ ತಿಳಿದು ಜವಾಬ್ದಾರಿಯುತವಾಗಿ ನಡೆಯುವುದು ನಾಗರಿಕರ ಕರ್ತವ್ಯ’ ಎಂದು ಹೇಳಿದರು.

‘ಸಂಸತ್ತು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಯಾವುದೂ ಈ ದೇಶದಲ್ಲಿ ಸಾರ್ವಭೌಮತ್ವ ಹೊಂದಿಲ್ಲ. ಈ ದೇಶದ ಜನರೇ ಸಾರ್ವಭೌಮರು. ಈ ಸಾರ್ವಭೌಮರ  ಹಿತರಕ್ಷಣೆಗೆ ಎಲ್ಲರೂ ಎಚ್ಚರಿಕೆಯಿಂದ ಜಾತ್ಯತೀತ ತಳಹದಿ ಮೇಲೆ ಕೆಲಸ ಮಾಡಬೇಕು. ಸಂವಿಧಾನದ ತತ್ವ ಮತ್ತು ತಾತ್ಪರ್ಯ ಅರ್ಥಮಾಡಿಕೊಂಡು ಅಧಿಕಾರದಲ್ಲಿರುವವರು ಆಡಳಿತ ನಡೆಸಬೇಕಾಗುತ್ತದೆ. ಇದನ್ನು ಕಡೆಗಣಿಸಿ ಮಾಡುವ ಕೆಲಸಗಳು ಅಸಿಂಧುವಾಗುತ್ತವೆ’ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಮುಸ್ಲಿಂ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಾಚಾರ್‌ ವರದಿ ಅನುಷ್ಠಾನಕ್ಕೆ ಬರಬೇಕು ಎಂದು ಹೇಳಿದರು.

‘ಬಹಳಷ್ಟು ವರದಿಗಳು ಮೂಲೆಗುಂಪಾಗುತ್ತವೆ. ಸರೋಜಿನಿ ಮಹಿಷಿ ವರದಿಯೂ ಹಾಗೆಯೇ ಆಗಿದೆ. ವರದಿಗಳು ವರದಿಗಳಷ್ಟೇ ಕಾಯ್ದೆಗಳಲ್ಲ ಎಂಬ ನಿಲುವಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಬರಬಾರದು’ ಎಂದು ತಿಳಿಸಿದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ಧರ್ಮಗಳಿಗೆ ಸಮಾನವಾಗಿ ಗೌರವಿಸಬೇಕು. ಎಲ್ಲಕ್ಕಿಂತ ದೊಡ್ಡ ಧರ್ಮ ಸಂವಿಧಾನ’ ಎಂದು ನುಡಿದರು.
‘ಮುಸ್ಲಿಂ ಸಮುದಾಯ ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆಗಳಿಂದ ಹೊರ ಬರಬೇಕು. ಇದಕ್ಕಾಗಿ ಸಮುದಾಯ ಸಂಘಟನೆಯಾಗಬೇಕು. ಈ ಸಂಘಟನೆ ಎಂಬುದು ಜಾಗೃತಿ ಪ್ರಜ್ಞೆಯಾಗಿ ಬರಬೇಕು’ ಎಂದು ಹೇಳಿದರು.

ಸಮಾವೇಶ ಉದ್ಘಾಟಿಸಿದ ಕೆಎಂಸಿ ಖಜಾಂಚಿ ಬಿ.ಎಂ.ಫಾರೂಕ್ ಮಾತನಾಡಿ, ‘ಮುಸ್ಲಿಂ ಸಮುದಾಯದ ಸಬಲೀಕರಣವೊಂದೇ ಕೆಎಂಸಿಯ ಧ್ಯೇಯವಾಗಿದೆ. ಸಮುದಾಯದ ಬೇರೆ ಸಂಘಟನೆಗಳಿಗೆ ಪರ್ಯಾಯ ಸಂಘಟನೆ ಎಂದು ಭಾವಿಸಬಾರದು’ ಎಂದರು.

‘ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ, ಹಕ್ಕುಗಳ ಬಗ್ಗೆ ಮನವರಿಕೆ, ಶಿಕ್ಷಣ ಜಾಗೃತಿ, ಸಮಾಜದ ಇತರ ವರ್ಗಗಳ ಜೊತೆಗೆ ಸೌಹಾರ್ದಯುತ ಬದುಕು ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ’ ಎಂದು ತಿಳಿಸಿದರು.

ಕೆಎಂಸಿ ಅಧ್ಯಕ್ಷ ಸೈಯದ್ ಜಮೀರ್ ಪಾಷಾ ಮಾತನಾಡಿ, ‘ಶಿಕ್ಷಣ ಹಕ್ಕು, ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಮುಸ್ಲಿಂ ಸಮುದಾಯ ಮಾತ್ರ ಈ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ಬಡತನ, ಆರ್ಥಿಕ ಸಮಸ್ಯೆ, ಅನಕ್ಷರತೆಯೇ ಇದಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

‘ನೂರು ಮಕ್ಕಳನ್ನು ಶಾಲೆಗೆ ಸೇರಿಸಿದರೆ ಪದವಿ ಶಿಕ್ಷಣ ಹಂತಕ್ಕೆ ಬರುವಷ್ಟರಲ್ಲಿ 15 ಮಂದಿ ಉಳಿದಿರುತ್ತಾರೆ. ಬಹಳಷ್ಟು ವಿದ್ಯಾರ್ಥಿಗಳು 10 ವರ್ಷದ ನಂತರ ಶಾಲೆಗೆ ಹೋಗುವುದನ್ನೇ ನಿಲ್ಲಿಸುತ್ತಾರೆ ಎಂಬುದು ಸಾಚಾರ, ರಂಗನಾಥ ಮಿಶ್ರಾ ವರದಿಯಲ್ಲಿ  ವ್ಯಕ್ತವಾಗಿದೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್ ಮಾತನಾಡಿ, ‘ಮುಸ್ಲಿಂ ಮಹಿಳೆಯರು ಕೀಳರಿಮೆ ಬಿಟ್ಟು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಐಎಎಸ್ ಅಧಿಕಾರಿ ಮೊಹಮ್ಮದ್ ಸನಾವುಲ್ಲಾ, ಎಸ್ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ನಿವೃತ್ತ ಐಪಿಎಸ್ ಅಧಿಕಾರಿ ಮೊಹಮ್ಮದ್ ವಜೀರ್ ಅಹಮ್ಮದ್, ಪತ್ರಕರ್ತ ನಾಗಣ್ಣ ವೇದಿಕೆಯಲ್ಲಿದ್ದರು. ಕೆಎಂಸಿ ಜಿಲ್ಲಾ ಘಟಕದ ಅಧ್ಯಕ್ಷ ಜಿಲ್ಲಾ ಘಟಕದ ಮುನೀರ್ ಅಹಮ್ಮದ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.