ADVERTISEMENT

ಸ್ವಚ್ಛತೆ ನೆಪದಲ್ಲಿ ಹಂದಿ ಹಿಡಿಯುವ ದಂಧೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:46 IST
Last Updated 9 ನವೆಂಬರ್ 2017, 9:46 IST

ಚಿಕ್ಕನಾಯಕನಹಳ್ಳಿ: ಸ್ವಚ್ಛತೆಯ ನೆಪದಲ್ಲಿ ಹಂದಿ ಹಿಡಿಯುವ ದಂಧೆ ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಹಂದಿಗಳನ್ನು ಹಿಡಿಯದಂತೆ ಜಿಲ್ಲಾಧಿಕಾರಿ ಆದೇಶ ಇದ್ದರೂ ಲೆಕ್ಕಿಸದೆ ದಂಧೆ ಮುಂದುವರಿದಿದೆ. ಹಂದಿ ಹಿಡಿಯುವುದನ್ನು ನಿಲ್ಲಿಸದಿದ್ದರೆ ಅಲೆಮಾರಿ ಬುಡಕಟ್ಟು ಮಹಾಸಭೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಹುಳಿಯಾರು ರಾಜಪ್ಪ ಎಚ್ಚರಿಸಿದ್ದಾರೆ.

ಹೊರಗಡೆಯಿಂದ ಹಂದಿ ಹಿಡಿಯುವ ತಂಡಗಳನ್ನು ಕರೆಸಿ ಪುರಸಭೆ ಅಧಿಕಾರಿಗಳು ಸಾಕು ಹಂದಿಗಳನ್ನು ಹಿಡಿಸುತ್ತಿದ್ದಾರೆ. ಹಂದಿಗಳು ಬೆಳೆದು ದೊಡ್ಡದಾಗುವ ವರೆಗೂ ಸುಮ್ಮನಿದ್ದು, ಕೊಬ್ಬಿದ ಹಂದಿಗಳನು ಸ್ವಚ್ಛತೆಯ ಹೆಸರಲ್ಲಿ ಹಿಡಿಸಿ, ದುಡ್ಡಿಗೆ ಮಾರಿಕೊಳ್ಳುತ್ತಿದ್ದಾರೆ. ಇದಕ್ಕೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು ಇದೆ. ಪ್ರಶ್ನಿಸಿದ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಇದು ನಿಯಮಿತವಾಗಿ 4 ತಿಂಗಳಿಗೊಮ್ಮೆ ನಡೆಯುವ ದಂಧೆಯಾಗಿದೆ. ಹಂದಿ ಹಿಡಿಯುವ ಮುನ್ನ ಹಂದಿ ಮಾಲೀಕರ ಗಮನಕ್ಕೂ ತರುವುದಿಲ್ಲ ಎಚ್ಚರಿಕೆಯ ನೋಟಿಸ್ ಕೂಡ ಜಾರಿ ಮಾಡುವುದಿಲ್ಲ. ಹಿಡಿದ ಹಂದಿಗಳನ್ನು ಏನು ಮಾಡಿತ್ತಾರೆ. ಎಷ್ಟು ಹಂದಿಗಳನ್ನು ಹಿಡಿದಿದ್ದಾರೆ ಎಂಬ ಯಾವುದೇ ದಾಖಲೆಗಳನ್ನು ನೀಡುವುದಿಲ್ಲ. ಇದರಿಂದ ಅಲೆಮಾರಿ ಹಂದಿಜೋಗಿ ಸಮುದಾಯ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದೆ ಎಂದರು.

ADVERTISEMENT

ಪುರಸಭೆ ಅಪಾಯಕಾರಿ ಬೀದಿ ನಾಯಿಗಳನ್ನು ಹಿಡಿಯದೆ ಬೆಲೆಬಾಳುವ ಹಂದಿಗಳನ್ನು ಹಿಡಿಯುವುದರ ಹಿಂದೆ ವ್ಯವಸ್ಥಿತಿ ಹುನ್ನಾರ ಅಡಗಿದೆ. ಪುರಸಭೆ ಕ್ರಮವನ್ನು ನೋಡಿಕೊಂಡು ಹಲವು ಗ್ರಾಮ ಪಂಚಾಯಿತಿಗಳೂ ಹಂದಿ ಹಿಡಿಯಲು ಮುಂದಾಗುತ್ತಿವೆ. ಇದರಿಂದ ಹಂದಿ ಸಾಕಣೆದಾರರ ಬದುಕು ಅತಂತ್ರವಾಗುತ್ತದೆ. ಈ ಕೂಡಲೆ ಹಿಡಿದಿರುವ ಹಂದಿಗಳ ಲೆಕ್ಕ ನೀಡಬೇಕು ಹಾಗೂ ಹಿಡಿದ ಹಂದಿಗಳನ್ನೂ ಮಾಲೀಕರಿಗೆ ಹಿಂದಿರುಗಿಸಬೇಕು. ಇಲ್ಲವಾದರೆ ಹಂದಿಸಾಕಣೆದಾರರು ಪುರಸಭೆ ಮುಂದೆ ಅಮರಣಾಂತರ ಸತ್ಯಾಗ್ರಹಕ್ಕೆ ಮುಂದಾಗಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಪುನರ್ವಸತಿ ಕಲ್ಪಿಸಿ: ಹಂದಿ ಸಾಕಣೆ ಬಿಟ್ಟು ನಮಗೆ ಬೇರೆ ಕಸುಬು ಗೊತ್ತಿಲ್ಲ. ಇದರಲ್ಲಿ ನಮ್ಮ ಬದುಕು, ಆರ್ಥಿಕತೆ ಹಾಗೂ ಜೀವನ ಎಲ್ಲ ಇದೆ. ನಮಗೆ ಆಸ್ತಿ, ಮನೆ, ನಿವೇಶನಗಳು ಇಲ್ಲ. ಪಟ್ಟಣದಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ನಮಗೆ ಸ್ಥಳೀಯ ಆಡಳಿತ ಪುನರ್ವಸತಿ ಕಲ್ಪಿಸಿಕೊಡಲಿ. ಅಲ್ಲೇ ನೆಲೆ ನಿಂತು ವೈಜ್ಞಾನಿಕ ರೀತಿಯಲ್ಲಿ ಹಂದಿ ಸಾಕಣೆ ಮುಂದುವರಿಸುತ್ತೇವೆ. ನಮ್ಮ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳು ಸಮ್ಮನೆ ಕಿರುಕಳ ನೀಡುತ್ತಿದ್ದಾರೆ ಎಂದು ಹಂದಿಜೋಗಿ ಕುಟುಂಬಗಳು ಅಳಲು ತೋಡಿಕೊಂಡಿರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.