ADVERTISEMENT

ಸ್ವಾಧೀನಪಡಿಸಿಕೊಂಡ ಭೂಮಿಗೆ ₹ 400 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:19 IST
Last Updated 8 ಜುಲೈ 2017, 10:19 IST

ತುಮಕೂರು: ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿ ಮಾಲೀಕರಿಗೆ ಹಣ ಪಾವತಿಸಿ ಅಭಿವೃದ್ಧಿಪಡಿಸಲು ₹ 400 ಕೋಟಿ ಮೊತ್ತವನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೈಗಾರಿಕಾ ಪ್ರದೇಶಕ್ಕೆ 9,200 ಎಕರೆ ಭೂ ಸ್ವಾಧೀನ ಮಾಡಿಕೊಳ್ಳುವುದು ಸರ್ಕಾರದ ಯೋಜನೆಯಾಗಿದೆ. ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಈಗಾಗಲೇ 1ನೇ, 2ನೇ, 3ನೇ ಮತ್ತು 4ನೇ ಹಂತದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಿದೆ. 5ನೇ ಹಂತದ ಅಭಿವೃದ್ಧಿಗೆ ಭೂ ಸ್ವಾಧೀನ ಪ್ರಕ್ರಿಯೆಯೂ ನಡೆದಿದೆ ಎಂದರು.

ಒಂದೆಡೆ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದರೂ ಜಮೀನಿನ ಮಾಲೀಕರಿಗೆ ಹಣ ಪಾವತಿ ಮಾಡಲು ವಿಳಂಬವಾಗಿತ್ತು. ಹೀಗಾಗಿ, ಸದ್ಯಕ್ಕೆ ₹ 400 ಕೋಟಿ  ಬಿಡುಗಡೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಚೆನ್ನೈ– ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಈಗ ಚಿತ್ರದುರ್ಗದವರೆಗೆ ವಿಸ್ತರಣೆಯಾಗಲಿದೆ. ಇದರಲ್ಲಿ ತುಮಕೂರನ್ನು ಪ್ರಮುಖ ಕೇಂದ್ರವಾಗಿ ಗುರುತಿಸಲಾಗಿದೆ. ಅಲ್ಲದೇ ಆರ್ಥಿಕ ವಲಯವಾಗಿ ಅಭಿವೃದ್ಧಿಪಡಿಸಿದರೆ  ₹ 50 ಸಾವಿರ ಕೋಟಿ ಬಂಡವಾಳ ಹೂಡಿಕೆ ನೀರಿಕ್ಷೆ ಇದೆ. ಎರಡೂವರೆ ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಆದಷ್ಟು ಬೇಗ ಈ ಗುರಿ ಸಾಧನೆಯಾಗಬೇಕಾಗಿದೆ. ಇದಕ್ಕಾಗಿ ವಸಂತನರಸಾಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ ಎಂದು ತಿಳಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ತುಮಕೂರು, ದಾವಣಗೆರೆ, ಕೋಲಾರ, ವಿಜಯಪುರ ಸೇರಿ 5 ಕಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸರ್ಕಾರ ಸ್ಥಾಪಿಸುತ್ತಿದೆ. ತುಮಕೂರಿನಲ್ಲಿ 200 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದರು. ಈಗಿರುವ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಸ್ಥಳದಲ್ಲಾಗಲಿ ಅಥವಾ ಬೇರೆ ಕಡೆಯಾಗಲಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

ದಾನಿಗಳಿಗೆ ಮನವಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ದಾನಿಗಳೂ ಕೈಜೋಡಿಸಬಹುದು. ದಾನಿಗಳು, ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದರೆ ಆಸ್ಪತ್ರೆಗೆ ಅವರ ಹೆಸರು ಇಡಲು ಸರ್ಕಾರ ಬದ್ಧವಾಗಿದೆ ಎಂದರು.

ನೀರೇ ಇಲ್ಲ: ನೀರು ಇದ್ದರೆ ತಾನೇ ಬಗುಡನಹಳ್ಳಿ ಕೆರೆಯಿಂದ ಹಿರೇಹಳ್ಳಿ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ  ನೀರು ಕೊಡುವ ವಿಚಾರ. ನೀರೇ ಇಲ್ಲವಲ್ಲ. ಹೀಗಾಗಿ, ಸದ್ಯಕ್ಕೆ ಆ ಕುರಿತು ಚರ್ಚೆ ಮಾಡುವುದೇ ಅಪ್ರಸ್ತುತ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.