ADVERTISEMENT

ಹೆಣ್ಮಕ್ಕಳಿಗೆ ಇನ್ನೂ ಸಿಗದ ಚೂಡಿದಾರ್ ಭಾಗ್ಯ

ಸಿ.ಕೆ.ಮಹೇಂದ್ರ
Published 19 ಜುಲೈ 2017, 11:11 IST
Last Updated 19 ಜುಲೈ 2017, 11:11 IST

ತುಮಕೂರು: ಶಾಲೆಗಳು ಆರಂಭವಾಗಿ ಒಂದೂವರೆ ತಿಂಗಳಾಗುತ್ತಾ ಬಂದರೂ ಹೆಣ್ಣು ಮಕ್ಕಳಿಗೆ ಸರ್ಕಾರ ನೀಡುವ ಚೂಡಿದಾರ್‌ ಸಮವಸ್ತ್ರ ಇನ್ನೂ ಬಂದಿಲ್ಲ.
ಇಷ್ಟು ವರ್ಷ ಕಾಲ ಸ್ಕರ್ಟ್ ಮಾದರಿಯ ಸಮವಸ್ತ್ರ ನೀಡಲಾಗುತ್ತಿತ್ತು. ಈ ವರ್ಷದಿಂದ  ಚೂಡಿದಾರ್‌ ನೀಡುವುದಾಗಿ ಸರ್ಕಾರ ಹೇಳಿತ್ತು. ಶಿಕ್ಷಕರು, ಬಾಲಕಿಯರು ಹಾಗೂ ಪೋಷಕರು ಇಂದು ಬರುತ್ತವೆ, ನಾಳೆ ಬರುತ್ತವೆ ಎಂದು ಬಾಗಿಲು ಕಾಯುವ ಕೆಲಸ ಮಾಡುತ್ತಿದ್ದಾರೆ.

‘ಒಂದನೇ ತರಗತಿಯಿಂದ ಏಳನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆಯಾಗಿದೆ. ಪ್ರೌಢಶಾಲೆಯಲ್ಲಿ ಬಾಲಕರಿಗೂ ಸಮವಸ್ತ್ರ  ಸಿಕ್ಕಿದೆ. ಆದರೆ  ಹೆಣ್ಣು ಮಕ್ಕಳ ವಿಷಯದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಹ ತುಟಿ ಬಿಚ್ಚುತ್ತಿಲ್ಲ. ಇದು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ’ ಎಂದು ಸಿಆರ್‌ಪಿ ಶಿಕ್ಷಕರೊಬ್ಬರು ತಿಳಿಸಿದರು.

ಒಂದೇ ಶಾಲೆಯಲ್ಲಿ ಗಂಡು ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗೆ ಬಂದರೆ ಹೆಣ್ಣು ಮಕ್ಕಳು ತರಹೇವಾರಿ ಬಣ್ಣದ ಧಿರಿಸು ತೊಟ್ಟು ಬರುತ್ತಿದ್ದಾರೆ. ಇದು ಅಶಿಸ್ತಿಗೂ ಕಾರಣವಾಗುತ್ತಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ADVERTISEMENT

ಚೂಡಿದಾರ್ ಪ್ಯಾಂಟ್‌, ಟಾಪ್ ಹಾಗೂ ವೇಲ್ ಕೊಡಲಾಗುತ್ತದೆ. ಮಕ್ಕಳು ತಮ್ಮ ಅಳತೆಗೆ  ತಕ್ಕಂತೆ ಹೊಲಿಸಿಕೊಳ್ಳಬೇಕು. ಈಗ ಬಟ್ಟೆ ಕೊಟ್ಟರೂ ಅವುಗಳನ್ನು ಹೊಲಿಸಿಕೊಳ್ಳಲು ಇನ್ನೂ  ಒಂದು ತಿಂಗಳು ಸಮಯಾವಕಾಶ ಬೇಕಾಗಲಿದೆ ಎನ್ನುತ್ತಾರೆ ಶಿಕ್ಷಕರು.

ವರ್ಷಕ್ಕೆ  ಎರಡು ಜೊತೆ ಸಮವಸ್ತ್ರ  ನೀಡಲಾಗುತ್ತದೆ. ವಿಪರ್ಯಾಸವೆಂದರೆ, ಎರಡನೇ ಸಮವಸ್ತ್ರಕ್ಕೆ ತಗುಲುವ ಹಣವನ್ನು ಪ್ರತಿ ವಿದ್ಯಾರ್ಥಿನಿಗೆ ₹ 200ರಂತೆ ಆಯಾ ಶಾಲೆಗಳ  ಎಸ್‌ಡಿಎಂಸಿ ಖಾತೆಗಳಿಗೆ ಹಾಕಲಾಗಿದೆ. ಆದರೆ ಮೊದಲ ಜೊತೆ ಬಟ್ಟೆ ಕೊಡದ ಹೊರತು ಎಸ್‌ಡಿಎಂಸಿಯವರು ಎರಡನೇ ಜೊತೆ ಬಟ್ಟೆ ಕೊಡದಂತೆ ಕೈಕಟ್ಟಿ ಹಾಕಲಾಗಿದೆ.

ಸರ್ಕಾರದ ನಿಯಮದಂತೆ, ಮೊದಲ ಜೊತೆ ಬಟ್ಟೆಯನ್ನು ಸರ್ಕಾರದಿಂದ ಪೂರೈಸಲಾಗುತ್ತದೆ.  ಇದೇ ಮಾದರಿಯ, ಗುಣಮಟ್ಟದ ಬಟ್ಟೆಯನ್ನು ಎಸ್‌ಡಿಎಂಸಿಯವರು ಮಕ್ಕಳಿಗೆ ಪೂರೈಸಬೇಕಾಗಿದೆ. ಮೊದಲ ಜೊತೆ ಬಟ್ಟೆ ಬಾರದ ಕಾರಣ  ಎರಡನೇ ಜೊತೆ ಬಟ್ಟೆ ವಿತರಣೆ ಮಾಡಲು ಸಾಧ್ಯವಿಲ್ಲವಾಗಿದೆ.

ಎಸ್‌ಡಿಎಂಸಿಯಲ್ಲಿ ಐದು ಜನರ ಸಮಿತಿ ಮಾಡಿಕೊಂಡು ಕೊಟೇಶನ್‌ ಕರೆಯಬೇಕು. ಕಡಿಮೆ ದರ ಇರುವ, ಗುಣಮಟ್ಟದ ಬಟ್ಟೆಗಳಿಗೆ ಕಾರ್ಯಾದೇಶ ನೀಡಬೇಕು. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಟ್ಟೆ ಖರೀದಿ ಇದ್ದರೆ  ಟೆಂಡರ್ ಕರೆದು ಆ ಮೂಲಕವೇ ಬಟ್ಟೆ ಖರೀದಿಸಬೇಕು ಎಂದು ಹೇಳಲಾಗಿದೆ. ಹೀಗಾಗಿ ಸರ್ಕಾರದ ಬಟ್ಟೆ ಬರುವುದನ್ನೆ ಎಸ್‌ಡಿಎಂಸಿಯವರು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.