ADVERTISEMENT

2022ರ ವೇಳೆಗೆ ರೈತರ ಆದಾಯ ದ್ವಿಗುಣ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 5:24 IST
Last Updated 22 ಡಿಸೆಂಬರ್ 2017, 5:24 IST

ತುಮಕೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದ (ನಾಫೆಡ್) ನಿರ್ದೇಶಕ ಅಶೋಕ್ ಠಾಕೂರ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಯೋಜನೆಗಳು ರೈತರಿಗೆ ಅನುಕೂಲವಾಗುತ್ತಿವೆ. ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ವೈಜ್ಞಾನಿಕವಾಗಿ ಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಗುಣಮಟ್ಟದ ಬಿತ್ತನೆ ಬೀಜಗಳು, ರಸಗೊಬ್ಬರ, ಔಷಧವನ್ನು ಕೇಂದ್ರ ರೈತರಿಗೆ ಪೂರೈಸಲಿದೆ. ಭವಿಷ್ಯದಲ್ಲಿ ಮತ್ತಷ್ಟು ರೈತ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ದಿಸೆಯಲ್ಲಿ ಚಿಂತಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

2013ರಲ್ಲಿ ದೇಶದಲ್ಲಿ 60ರಿಂದ 70 ದಶಲಕ್ಷ ಟನ್ ಬೇಳೆಕಾಳು ಉತ್ಪಾದನೆ ಇತ್ತು. ಈಗ ಇದು 23.5 ದಶಲಕ್ಷ ಟನ್‌ಗಳಿಗೆ ಹೆಚ್ಚಿದೆ. ಕೃಷಿ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸುತ್ತಿದೆ. ಇದು ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ತಿಳಿಸಿದರು. 

ರೈತರು ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಗರಿಷ್ಠ ಸಾಲದ ಮಿತಿಯನ್ನು ₹ 1.50 ಲಕ್ಷಕ್ಕೆ ಮಿತಿಗೊಳಿಸಬೇಕು. ₹ 50 ಸಾವಿರದ ವರೆಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ ಬಳಕೆಗೆ ಅವಕಾಶ ನೀಡಬೇಕು ಎಂದು ಅವರು ತಿಳಿಸಿದರು.

ಮಣ್ಣು ಪರೀಕ್ಷೆಗೆ ನಾಫೆಡ್ ಯಂತ್ರವನ್ನು ರೂಪಿಸಿದೆ. ಇದರ ಬೆಲೆ ₹ 70 ಸಾವಿರ ಇದ್ದು ವ್ಯವಸಾಯ ಸಹಕಾರ ಸಂಘಗಳು ಈ ಯಂತ್ರ ಖರೀದಿಸುತ್ತಿವೆ. ಆ ಮೂಲಕ ರೈತರಿಗೆ ಅನುಕೂಲ ಕಲ್ಪಿಸುತ್ತಿವೆ. ಗುಜರಾತ್, ಮಹಾರಾಷ್ಟ್ರದಲ್ಲಿ ಯಂತ್ರಕ್ಕೆ ಬೇಡಿಕೆ ಬಂದಿದೆ. ಬೇಡಿಕೆ ಆಧರಿಸಿ ರಾಜ್ಯಕ್ಕೂ ಈ ಯಂತ್ರವನ್ನು ಪೂರೈಸಲಾಗುವುದು ಎಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್, ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ಹಿರಿಯ ಮುಖಂಡ ಹುಲಿನಾಯ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.