ADVERTISEMENT

30ರಂದು ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 28 ಮೇ 2017, 5:52 IST
Last Updated 28 ಮೇ 2017, 5:52 IST

ತುಮಕೂರು: ‘ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾಲು ಶತಮಾನ ಪೂರೈಸಿದ ಜಿ.ಎಂ.ಸಣ್ಣಮುದ್ದಯ್ಯ ಅವರಿಗೆ ಮೇ 30ರಂದು ಸಂಘದ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ’ ಎಂದು ಸಂಘದ ಜಿಲ್ಲಾ ಘಟಕದ  ಉಪಾಧ್ಯಕ್ಷ ಬಿ.ವೀರನಗೌಡ ಹೇಳಿದರು.

‘ಸಣ್ಣಮುದ್ದಯ್ಯ ಅವರು ಅದೇ ದಿನ ಸರ್ಕಾರಿ ಕೆಲಸದಿಂದಲೂ ನಿವೃತ್ತಿ ಆಗಲಿದ್ದಾರೆ. ನಾಲ್ಕು ದಶಕಗಳ ಕಾಲ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದು, ಸದ್ಯ ತಹಶೀಲ್ದಾರ್‌ ಆಗಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅಂದು ಸಂಜೆ 5.30ಕ್ಕೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್‌ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ಕೆ.ಜೆ. ಶಾಂತಾರಾಂ ಪಾಲ್ಗೊಳ್ಳುವರು’ ಎಂದು ವಿವರಿಸಿದರು.

ADVERTISEMENT

‘ರಾಜ್ಯ ಸರ್ಕಾರಿ ನೌಕರರ ಸಂಘ, ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ, ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ಲಿಂಗರಾಜು, ಖಜಾಂಚಿ ಕೆ.ಎಚ್‌.ಲೋಕೇಶ್‌, ರಾಜ್ಯ ಪರಿಷತ್‌ ಸದಸ್ಯ ಸಿ.ಸತೀಶ್‌ಕುಮಾರ್‌, ರಮೇಶಕುಮಾರ್‌ ಗೋಷ್ಠಿಯಲ್ಲಿ ಇದ್ದರು.

ಸಣ್ಣಮುದ್ದಯ್ಯ ಪರಿಚಯ: ರಾಮನಗರ ತಾಲ್ಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ 19ನೇ ವಯಸ್ಸಿನಲ್ಲಿಯೇ ಕೆಲಸಕ್ಕೆ ಸೇರಿದರು. ನಂತರ ಬೆಂಗಳೂರು ಸಚಿವಾಲಯ, ಮಧುಗಿರಿ ಉಪವಿಭಾಧಿಕಾರಿ ಕಚೇರಿ, ತುಮಕೂರು ಮೇಲ್ಮನವಿ ಪ್ರಾಧಿಕಾರ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ ಮತ್ತು ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿ ಒಟ್ಟು 40 ವರ್ಷ 4 ತಿಂಗಳು ಕೆಲಸ ಮಾಡಿದ್ದಾರೆ.

2014ರಲ್ಲಿ ಪದೋನ್ನತಿ ಪಡೆದು ತಾಲ್ಲೂಕು ಕಚೇರಿಯಲ್ಲಿ ಗ್ರೇಡ್‌ 2 ತಹಶೀಲ್ದಾರರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಅಧ್ಯಕ್ಷತೆಯ ಅವಧಿಯಲ್ಲಿ ಸಂಘದ ಕಟ್ಟಡದಲ್ಲಿ ಧ್ಯಾನ ಮಂದಿರ, ಅತಿಥಿ ಗೃಹ ನಿರ್ಮಿಸಿದ್ದಾರೆ. ನೌಕರರ ಪತ್ತಿನ ಸಹಕಾರ ಸಂಘ ಸ್ಥಾಪಿಸಿದ್ದಾರೆ. ಸರ್ಕಾರಿ ನೌಕರರ ಅಭಿವೃದ್ಧಿ, ಸಂಘಟನೆ ಮತ್ತು ಆಡಳಿತಾತ್ಮಕ ಸೇವೆಗೆ ಪೂರಕವಾದ ಕಾರ್ಯಕ್ರಮ ರೂಪಿಸಿದ್ದಾರೆ. ತರಬೇತಿ, ಕಾರ್ಯಾಗಾರ, ಆರೋಗ್ಯ ಚಿಕಿತ್ಸೆ, ನೌಕರರ ಮಕ್ಕಳಿಗೆ ಬೇಸಿಗೆ ತರಬೇತಿ ಶಿಬಿರವನ್ನೂ ಏರ್ಪಡಿಸಿದ್ದರು.

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರ ಒಂದು ದಿನದ ವೇತನವನ್ನು ಸಂಗ್ರಹಿಸಿ ದಾಸೋಹಕ್ಕಾಗಿ ₹ 1 ಕೋಟಿ ದೇಣಿಗೆ ನೀಡಿದ್ದರು. 2002ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೌಕರರಿಂದ ₹ 65 ಲಕ್ಷ ವಂತಿಗೆ ಸಂಗ್ರಹಿಸಿ ಕನ್ನಡ ಭವನ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಅವರಿಗೆ ರಾಜ್ಯಪಾಲರ ಸರ್ವೋತ್ತಮ ಸೇವಾ ಪ್ರಶಸ್ತಿಯೂ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.