ADVERTISEMENT

50 ಗ್ರಾಮಗಳಲ್ಲಿ ಜೈನರಿದ್ದ ಕುರುಹು

ಗೋಕುಲ ಬಡಾವಣೆಯಲ್ಲಿ ಮಹಾವೀರರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 4:37 IST
Last Updated 10 ಏಪ್ರಿಲ್ 2017, 4:37 IST

ತುಮಕೂರು:  ನಗರದ ಗೋಕುಲ ಬಡಾವಣೆಯಲ್ಲಿ ಜೈನ ಸಮುದಾಯದವರು 24ನೇ ತೀರ್ಥಂಕರಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಮಹಾವೀರ ತೀರ್ಥಂಕರಿಗೆ ಅಗ್ರ್ಯ ನೀಡಿ ಭಕ್ತಿಯಿಂದ ಪೂಜಿಸಲಾಯಿತು.

ಪಾಲಿಕೆ ಸದಸ್ಯೆ ಧನಲಕ್ಷ್ಮಿ ರವಿ, ತುಮಕೂರು ವಿ.ವಿ ಪ್ರಾಧ್ಯಾಪಕ ಕೊಟ್ರೇಶ್‌ ಹಾಗೂ ಲೇಖಕ ಪಿ. ಪದ್ಮಪ್ರಸಾದ್ ಅವರುಗಳು ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾಧ್ಯಾಪಕ ಕೊಟ್ರೇಶ್‌ ಮಾತನಾಡಿ, ಗುಬ್ಬಿ ಹಾಗೂ ಹಿರೇಹಳ್ಳಿ, ನಿಟ್ಟೂರು ಹಾಗೂ ತುಮಕೂರು ಸುತ್ತಮುತ್ತಲ 50 ಗ್ರಾಮಗಳಲ್ಲಿ ಜೈನರು ಇದ್ದ ಕುರುಗಳು ಪತ್ತೆಯಾಗಿವೆ ಎಂದು ಹೇಳಿದರು.

ಈ ಪ್ರದೇಶಗಳಲ್ಲಿ ಹಲವಾರು ಜಿನ ಮಂದಿರಗಳ ಅವಶೇಷಗಳು ಪತ್ತೆಯಾಗಿವೆ. ತಾಮ್ರಪತ್ರಗಳು ದೊರೆತಿವೆ. ಇದರಿಂದ ಜಿಲ್ಲೆಯಲ್ಲಿ 1400 ವರ್ಷಗಳ ಹಿಂದೆ ಜೈನರು ಪ್ರಬಲವಾಗಿದ್ದರು ಎಂಬುದು ತಿಳಿದು ಬರುತ್ತದೆ ಎಂದರು. ಜಿಲ್ಲೆಯಲ್ಲಿ ಜೈನರ ಇತಿಹಾಸ ಉತ್ಕೃಷ್ಟವಾಗಿದೆ. ಗಂಗರ ಕಾಲದಿಂದಲೂ  ಇಲ್ಲಿ ವಾಸವಿದ್ದಾರೆ ಎಂದರು.

ಉಳ್ಳಾಲದ ರಾಣಿ ಅಬ್ಬಕ್ಕದೇವಿಯವರು ಕಾಳಿನ ಮೆಣಸಿನ ರಾಣಿ ಎಂದೇ ಪ್ರಖ್ಯಾತವಾಗಿದ್ದರು. ಇವರು ಸಾಂಬಾರ್‌ ಪದಾರ್ಥಗಳನ್ನು ಜರ್ಮನಿಗೆ ಆ ಕಾಲಕ್ಕೆ ರಫ್ತು ಮಾಡುತ್ತಿದ್ದರು. ಈ ಎಲ್ಲ ವಿಷಯಗಳ ಮರು ಸಂಶೋಧನೆ ಅಗತ್ಯವಾಗಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿನ ಜೈನ ಸಮುದಾಯ, ಸಾಹಿತ್ಯ, ಇತಿಹಾಸದ ಬಗ್ಗೆ ಜಿಲ್ಲೆಯ ಯುವಕರು ಸಂಶೋಧನೆ ಮಾಡಲು ಮುಂದೆ ಬಂದರೆ ಅವರಿಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಲೇಖಕ ಪಿ.ಪದ್ಮಪ್ರಸಾದ್‌ ಮಾತನಾಡಿ, ತೀರ್ಥಂಕರರು ಹಾಗೂ ಮಹಾವೀರರ ಜೀವನಗಾಥೆ ಕುರಿತು ಉಪನ್ಯಾಸ ನೀಡಿದರು.

ಸಮುದಾಯದ ಹಿರಿಯರಾದ ನಿವೃತ್ತ ಎಂಜಿನಿಯರ್‌ ಎಸ್‌.ವಿಜಯ್‌ಕುಮಾರ್‌, ಲೆಕ್ಕ ಪರಿಶೋಧಕ ಚಕ್ರವರ್ತಿ, ಬ್ಯಾಂಕ್‌ ನಿವೃತ್ತ ಅಧಿಕಾರಿ ಚಂದ್ರಕೀರ್ತಿ ಅವರನ್ನು ಸನ್ಮಾನಿಸಲಾಯಿತು.

ಸಮುದಾಯದ ಮುಖಂಡರಾದ ವಿ.ಸುನಿಲ್‌ ಕುಮಾರ್‌, ಸುಮತಿ ಕುಮಾರ್‌, ಅಜಿತ್‌. ಕೆ.ಪಿ.ವೀರೇಂದ್ರ, ಶ್ಯಾಮಣ್ಣ, ಅಜಿತ್‌, ರತ್ನಾಕರ, ಇದ್ದರು.
ಕಾರ್ಯಕ್ರಮಕ್ಕೆ ಬಂದಿದ್ದ ಬಡಾವಣೆಯ ಜನರಿಗೆ ಪ್ರಸಾದ ಹಂಚಲಾಯಿತು.  ಮಂಜುಳಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.