ADVERTISEMENT

ಸರ್ಕಾರಿ ಜಾಗದಲ್ಲಿ ರಾತ್ರೋ ರಾತ್ರಿ ಕಟ್ಟಡ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 7:12 IST
Last Updated 22 ಜನವರಿ 2018, 7:12 IST

ಕೊಡಿಗೇನಹಳ್ಳಿ: ಸರ್ವೆ ನಡೆಸಿ ಬಾಂಡು ಕಲ್ಲು ಹಾಕುವವರಿಗೆ ಯಾವುದೇ ಕಾಮಗಾರಿ ನಡೆಸಬಾರದು ಎಂದು ಅಧಿಕಾರಿಗಳು ಸೂಚಿಸಿದ್ದರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರಾತ್ರೋ ರಾತ್ರಿ ಕಮಲ್ ಪಾಷಾ ಎಂಬ ಉದ್ಯಮಿ ಕಟ್ಟಡ ನಿರ್ಮಿಸಲು ಪಿಲ್ಲರ್ ಎಬ್ಬಿಸಿರುವುದಕ್ಕೆ ಗ್ರಾಮಸ್ಥರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಸರ್ವೆ ನಂ 32, 33, 34, 35 ಮತ್ತು 42ರಲ್ಲಿ ಸುಮಾರು 55 ಎಕೆರೆ ಸರ್ಕಾರಿ ಗೋಮಾಳವಿದ್ದು ಇದನ್ನು ಅದೇ ಗ್ರಾಮದ ದಲಿತರು ಸಾಗು ಮಾಡುತ್ತಿದ್ದಾರೆ. ಅದೇ ಜಾಗದಲ್ಲಿ ಕಮಲ್ ಪಾಷಾ ಎಂಬ ಉದ್ಯಮಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲು ಮುಂದಾದಾಗ ದಲಿತರಿಂದ ಭಾರಿ ಪ್ರತಿರೋಧವುಂಟಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಮಾಡಿಸಿ ಕಾಮಗಾರಿ ನಡೆಸದಂತೆ ಸೂಚಿಸಿದ್ದರು. ಆದರೂ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಪ್ರಸನ್ನಕುಮಾರ್, ಅಂಜಿನಪ್ಪ, ಗಂಗಾಧರಯ್ಯ, ನರಸಿಂಹಮೂರ್ತಿ, ಕ್ವಾಮಿಟಿ ಮೂರ್ತಿ, ದೇವರಾಜು, ಟಿ.ಜಿ. ನರಸಿಂಹಯ್ಯ ಆರೋಪಿಸಿದರು.

ಕಾಮಗಾರಿ ನಡೆಯದಂತೆ ವಿರೋಧ ವ್ಯಕ್ತಪಡಿಸಿ ಕಾವಲುಗಾರರು ಮತ್ತು ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮುಕಿ ನಡೆಯಿತು. ಆಗ ಇಲ್ಲಿಗೆ ಬಂದು ವಿರೋಧ ವ್ಯಕ್ತಪಡಿಸುವವರಿಗೆಲ್ಲ ಹಣ ನೀಡುತ್ತೇವೆ ಎಂದು ಅವರ ಸಿಬ್ಬಂದಿಯವರು ಆಮಿಷ ಒಡುತ್ತಿದ್ದಾರೆ ಎಂದು ಟಿ.ಜಿ.ಕಾಂತರಾಜು ದೂರಿದರು.

ADVERTISEMENT

ಸರ್ಕಾರಿ ಜಮೀನನ್ನು ಕಬಳಿಸಲು ಮುಂದಾಗಿರುವದಲ್ಲದೆ ನಮ್ಮ ಬಗುರ್ ಹುಕುಂ ಸಾಗುವಳಿ ಜಮೀನು ಕೂಡ ಕಬಳಿಸಲು ಮುಂದಾಗಿದ್ದರು. ಸರ್ಕಾರಿ ಆಸ್ತಿ ರಕ್ಷಿಸಬೇಕಾದ ಅಧಿಕಾರಿಗಳು ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಟಿ.ಜಿ.ತಿಪ್ಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಸತ್ಯಕಂ ವೆಂಕಟೇಶ್ ಅವರು ಇದೇ ರೀತಿ ಸರ್ಕಾರಿ ಆಸ್ತಿ ಕಬಳಿಸಲು ಮುಂದಾದಾಗ ಸ್ಥಳೀಯರೆಲ್ಲ ಸೇರಿ ಶಾಸಕ ಕೆ.ಎನ್.ರಾಜಣ್ಣ ಅವರ ಗಮನಕ್ಕೆ ತಂದಾಗ ಅಧಿಕಾರಿಗಳಿಗೆ ಸೂಚಿಸಿ ಸರ್ಕಾರಿ ಜಮೀನು ಉಳಿಯುವಂತೆ ಮಾಡಿದ್ದಾರೆ ಎಂದು ತಿಂಗಳೂರು ಟಿ.ಎಸ್. ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.