ADVERTISEMENT

ಪ್ರಧಾನಿ ಸುಳ್ಳು ಆರೋಪ ಜನ ನಂಬಲ್ಲ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 7:06 IST
Last Updated 9 ಫೆಬ್ರುವರಿ 2018, 7:06 IST

ಕೊರಟಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದರು.

ಪಟ್ಟಣದ ಕಾಳಿದಾಸ ಪ್ರೌಢಶಾಲೆ ಆವರಣದಲ್ಲಿ ತಾಲ್ಲೂಕು ಕುರುಬರ ಸಂಘ ಮತ್ತು ಕುರುಬ ನೌಕರರ ಸಂಘದ ವತಿಯಿಂದ ಈಚೆಗೆ ಏರ್ಪಡಿಸಿದ್ದ ಕುರುಬರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿಯವರು ಸಾರ್ವಜನಿಕವಾಗಿ ಸುಳ್ಳು ಹೇಳುವುದು ಸರಿಯಲ್ಲ. ತಮ್ಮ ಹುದ್ದೆಗೆ ತಕ್ಕಂತೆ ಗೌರವಯುತವಾಗಿ ಮಾತನಾಡಬೇಕು. ರಾಜ್ಯದ ಜನರು ಸುಳ್ಳು ಆರೋಪಗಳನ್ನು ನಂಬುವುದಿಲ್ಲ ಎಂದು ಹೇಳಿದರು.

ADVERTISEMENT

ರಾಜ್ಯದಲ್ಲಿ ರಾಜಕೀಯ ವಿರೋಧಿಗಳು ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಇಲ್ಲ-ಸಲ್ಲದ ಆರೋಪ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ನಾನು ಮತ್ತು ಸಿದ್ದರಾಮಯ್ಯ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ತಾಲ್ಲೂಕಿನ ಕುರುಬ ಸಮುದಾಯಕ್ಕೆ ಈಗಾಗಲೇ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಕುರುಬ ಸಮುದಾಯ ವಿದ್ಯಾರ್ಥಿ ನಿಲಯಕ್ಕೆ ₹ 50 ಲಕ್ಷ ಮತ್ತು ಅಕ್ಕಿರಾಂಪುರ ಬಳಿಯ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದ ಅಭಿವೃದ್ದಿಗೆ ₹15 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.
  
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಈಚನೂರು ಗ್ರಾಮದ ಪ್ರೀಯಾಂಕ ಎಂಬುವರು ರಾಜ್ಯದಲ್ಲಿ ನಡೆದ ಐಎಎಸ್ ಪರೀಕ್ಷೆಯಲ್ಲಿ 84ನೇ ರ‍್ಯಾಂಕ್ ಪಡೆದ ಪ್ರಯುಕ್ತ ಸನ್ಮಾನಿಸಲಾಯಿತು.

ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದರ್ಶಿ ಜಿ.ಡಿ.ನಾಗಭೂಷಣ್, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಮುಖಂಡರಾದ ಕೆಂಪರಾಜು, ಆನಂದ್, ಲಕ್ಷ್ಮೀಕಾಂತ್, ರಂಗಶಾಮಯ್ಯ, ಡಾ.ನಾಗಭೂಷಣ್, ರಂಗಧಾಮಯ್ಯ, ಹನುಮಂತರಾಯಪ್ಪ, ಕೆ.ಎಂ.ನಾಗಪ್ಪ, ಚಿಕ್ಕನಾಗಪ್ಪ, ವೀರಮಲ್ಲಪ್ಪ, ಬಸವರಾಜು, ಹಳ್ಳಪ್ಪ, ಕೆಂಗಣ್ಣ, ಪುಟ್ಟಲಿಂಗಪ್ಪ, ರಂಗಶಾಮಯ್ಯ, ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.