ADVERTISEMENT

ಅಕ್ರಮ ಮದ್ಯ: ಕಡಿವಾಣಕ್ಕೆ ಒತ್ತಾಯ

ಗ್ರೀಷ್ಮಾ ಭಿಡೆ ನೇತೃತ್ವದಲ್ಲಿ ಮಹಿಳೆಯರಿಂದ ಗೃಹ ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 6:06 IST
Last Updated 29 ಆಗಸ್ಟ್ 2016, 6:06 IST
ಕುಂದಾಪುರದ ಕೊಲ್ಲೂರಿಗೆ ಇತ್ತೀಚೆಗೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿದ ಮಹಿಳಾ ಸಂಘಟನೆಯ ಸದಸ್ಯರು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ನಿಯಂತ್ರಣಕ್ಕೆ ಒತ್ತಾಯಿಸಿ ಮನವಿ ನೀಡಿದರು.
ಕುಂದಾಪುರದ ಕೊಲ್ಲೂರಿಗೆ ಇತ್ತೀಚೆಗೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿದ ಮಹಿಳಾ ಸಂಘಟನೆಯ ಸದಸ್ಯರು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ನಿಯಂತ್ರಣಕ್ಕೆ ಒತ್ತಾಯಿಸಿ ಮನವಿ ನೀಡಿದರು.   

ಕುಂದಾಪುರ: ತಾಲ್ಲೂಕಿನ ಗ್ರಾಮೀಣ ಭಾಗದ ಹಳ್ಳಿ ಪ್ರದೇಶಗಳಲ್ಲಿ ನಿರಂತರ ವಾಗಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದರೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.

ಈ ಅಕ್ರಮ ಮದ್ಯ ಜಾಲದ ನಿಯಂತ್ರಣದ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಗ್ರೀಷ್ಮಾ ಭಿಡೆ ನೇತೃತ್ವದಲ್ಲಿ ಕೊಲ್ಲೂರು ಪರಿಸರದ ವಿವಿಧ ಮಹಿಳಾ ಸಂಘಟನೆಯ ಸದಸ್ಯರ ನಿಯೋಗ ಕೊಲ್ಲೂರಿನಲ್ಲಿ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಈಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಿತು.

ಜಡ್ಕಲ್- ಮುದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರವಾನಗಿ ರಹಿತವಾಗಿ ತಲೆಯೆತ್ತಿರುವ ಅನಧಿಕೃತ ಗೂಡಂಗಡಿಗಳಲ್ಲಿ ಹಾಗೂ ಸ್ಥಳೀಯ ಕೆಲವರ ಮನೆಗಳಲ್ಲಿಯೂ ಅನಿಯಮಿತ ವಾಗಿ ಅಕ್ರಮ ಮದ್ಯ ಮಾರಾಟ ನಡೆಯು ತ್ತಿದೆ. ಈ ರೀತಿಯ ಮಾರಾಟ ದಂದೆ ಯಿಂದಾಗಿ ಬಡ ಕುಟುಂಬ ಗಳು ಬೀದಿಗೆ ಬಂದಿವೆ. ಈ ಪರಿಸರದಲ್ಲಿ ನಡೆಯುತ್ತಿ ರುವ ಅಕ್ರಮ ದಂದೆಗಳ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಸ್ಪಷ್ಟವಾದ ಮಾಹಿತಿ ಇದ್ದರೂ, ಜಾಣ ಕುರುಡು ನೀತಿಯನ್ನು ತೋರುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು ಎಂದು ನಿಯೋಗದ ಸದಸ್ಯರು ಆಗ್ರಹಿಸಿದರು.

ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಅಕ್ರಮ ಮದ್ಯ ಮಾರಾಟ ಮಾಡುವುದು ಸರಿಯಲ್ಲ. ಈ ಮಾರಾಟ ಜಾಲವನ್ನು ನಿಯಂತ್ರಿಸುವ ಹೊಣೆ ಅಬಕಾರಿ ಇಲಾಖೆಯ ಮೇಲಿದೆ.ಇದಕ್ಕಾಗಿಯೇ ಇಲಾಖೆಯಲ್ಲಿ ವಿಶೇಷ ತಂಡಗಳು ಇವೆ. ಈ ಕುರಿತು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರುತ್ತೇನೆ.

ಗ್ರಾಮೀಣ ಭಾಗದಲ್ಲಿ ನಡೆಯುವ ಅಕ್ರಮ ಮಾರಾಟಗಳ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ಅಥವಾ ಮಾಹಿತಿ ಬಂದಲ್ಲಿ ಸ್ಥಳೀಯ ಠಾಣಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸುತ್ತಾರೆ ಎಂದು ಸಮಜಾಯಿಷಿ ನೀಡಿದರು.  ಕೊಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್. ವಿಶ್ವನಾಥ ಅಡಿಗ, ಜಡ್ಕಲ್-ಮುದೂರು ಗ್ರಾಮ ಪಂಚಾಯಿತಿ ಸದಸ್ಯರಾದ ಅಲ್ಫಾಂಸಾ, ಆಶಾ, ಪಿ. ಎಲ್. ಜೋಸ್ ನಿಯೋಗದ ಜತೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.