ADVERTISEMENT

ಅಷ್ಟಮಿಗೆ ವೇಷಹಾಕಿ ರೂ 1ಲಕ್ಷ ದೇಣಿಗೆ

ಸೆಂಟ್ರಿಂಗ್ ಯುವಕನ ಸಮಾಜ ಸೇವೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 4:52 IST
Last Updated 22 ಸೆಪ್ಟೆಂಬರ್ 2014, 4:52 IST
ರವಿ ಮತ್ತು ಸಂಗಡಿಗರು ಅನ್ವಿತಾಳ ಚಿಕಿತ್ಸೆಗೆ ನೆರವಿನ ಚೆಕ್‌ ಅನ್ನು ಆಕೆಯ ತಾಯಿ ಮೂಕಾಂಬಿಕಾ ಅವರಿಗೆ ಶುಕ್ರವಾರ ವಿತರಿಸಿದರು.
ರವಿ ಮತ್ತು ಸಂಗಡಿಗರು ಅನ್ವಿತಾಳ ಚಿಕಿತ್ಸೆಗೆ ನೆರವಿನ ಚೆಕ್‌ ಅನ್ನು ಆಕೆಯ ತಾಯಿ ಮೂಕಾಂಬಿಕಾ ಅವರಿಗೆ ಶುಕ್ರವಾರ ವಿತರಿಸಿದರು.   

ಶಿರ್ವ: ಸೆಂಟ್ರಿಂಗ್ ಕೆಲಸ ಮಾಡುತ್ತಿ ರುವ ಕಟಪಾಡಿ ಏಣಗುಡ್ಡೆ ಜೆ.ಎನ್. ನಗರದ ನಿವಾಸಿ ರವಿ ಕಟಪಾಡಿ  ಅವರು ಶ್ರೀಕೃಷ್ಣ ಜನ್ಮಾಷ್ಟಮಿಯಂದು ತಮ್ಮ 18 ಮಂದಿ ಗೆಳೆಯರೊಂದಿಗೆ ವೇಷ ಹಾಕಿ ಸಂಗ್ರಹಿಸಿದ ₨ 1,04,810 ಅನ್ನು ಬಡ ಕುಟುಂಬದ ಹೆಣ್ಣುಮಗುವಿನ ಚಿಕಿತ್ಸೆಗೆ ದೇಣಿಗೆಯಾಗಿ ನೀಡಿದ್ದಾರೆ. ಈ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರವಿ ಕಟಪಾಡಿ ಮತ್ತು ಸಂಗಡಿಗರು ಎರಡು ದಿನ ವೇಷ ಹಾಕಿ ಊರೂರು ಸುತ್ತಿ ಶ್ರಮಪಟ್ಟು ಸಮಾಜದಿಂದ ಸಂಗ್ರ ಹಿಸಿದ ಹಣವನ್ನು ಎಳ್ಳಂಪಳ್ಳಿಯ  ದೀಪಾನ್ ಗುಡ್ಡೆಯ ಮೂಕಾಂಬಿಕಾ ಅವರ ಪುಟ್ಟ ಮಗು ಅನ್ವಿತಾಳ ಬಲಗೈ ಶಸ್ತ್ರಚಿಕಿತ್ಸೆಗೆ ಶುಕ್ರವಾರ ಕಟಪಾಡಿಯ ಎಸ್.ವಿ.ಎಸ್ ಕಾಲೇಜಿನಲ್ಲಿ ಹಸ್ತಾಂತರಿಸಿದರು.

ಬಡಕುಟುಂಬದ ಮೂಕಾಂಬಿಕಾ ಎಂಬವರು ಉಡುಪಿಯ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾದ ಸಂದರ್ಭ ವೈದ್ಯರ ನಿರ್ಲಕ್ಷದಿಂದ ಹೆರಿಗೆ ಯಾದ ಮಗು ಅನ್ವಿತಾಳ ಬಲಗೈ ಸ್ಪರ್ಶ ಜ್ಞಾನವನ್ನು ಕಳೆದುಕೊಂಡಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದಾಗ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸುವಂತೆ ವೈದ್ಯರು ತಿಳಿಸಿದ್ದರು. ಈ ಬಡ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲು ಸಾಧ್ಯ ವಾಗದೆ ಪತ್ರಿಕೆಗಳಲ್ಲಿ ನೆರವಿಗೆ ಕೋರಿಕೊಂಡಿದ್ದರು.

ರವಿ ಮತ್ತು ಬಳಗದವರು ಈ ದಾರುಣ ಕಥೆಯನ್ನು ಮಾಧ್ಯಮದಿಂದ ತಿಳಿದು ಹೇಗಾದರೂ ಮಾಡಿ ಮಗುವಿನ ಚಿಕಿತ್ಸೆಗೆ ನೆರವಾಗಬೇಕು ಎಂದು ಚಿಂತಿಸಿ ಅಷ್ಟಮಿಗೆ ವೇಷ ಹಾಕಿದ ಸಂಪೂರ್ಣ ಹಣವನ್ನು ಮಗುವಿನ ಚಿಕಿತ್ಸೆ ಒದಗಿಸ ಬೇಕು ಎಂದು ನಿರ್ಧರಿಸಿದರು. ಅದರಂತೆ ನಡೆದುಕೊಂಡು ಸಮಾಜಕ್ಕೆ ಮಾದರಿಯಾದರು. ಅನ್ವಿತಾಳ ಚಿಕಿತ್ಸೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಚಿಕಿತ್ಸೆ ವೆಚ್ಚವಿದೆ, ಮುಂದೆ ನಮ್ಮಂತೆ ಸಹೃದಯಿ ದಾನಿಗಳು ನೆರವಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಿಭಿನ್ನ ವೇಷಗಳ ರವಿ
ತೀರಾ ಬಡಕುಟುಂಬದಲ್ಲಿ ಜನಿಸಿರುವ ರವಿ ಕಟಪಾಡಿ ವ್ಲತ್ತಿಯಲ್ಲಿ ಸೆಂಟ್ರಿಂಗ್‌ ಕೆಲಸಗಾರ. ಒಳ್ಳೆಯ ಹೃದಯವಂತಿಕೆ ಮತ್ತು ಕಲಾವಂತಿಕೆಯನ್ನು ಹೊಂದಿ ರುವ ರವಿ ಕಟಪಾಡಿ ಅವರು ಪ್ರತಿ ವರ್ಷ ಶ್ರೀ ಕೃಷ್ಣಜನ್ಮಾಷ್ಟಮಿಗೆ ಕಲಾತ್ಮಕ ಹಾಗೂ ಸೃಜನಶೀಲ ವಿಭಿನ್ನ ವೇಷಗಳನ್ನು ಧರಿಸಿ ಗಮನಸೆಳೆಯುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ರವಿ  ವಿವಿಧ ವೇಷಗಳಿಂದ ಜನರನ್ನು ರಂಜಿಸುತ್ತಾ ಬಂದಿದ್ದಾರೆ.

ಆಧುನಿಕ ಮಾದರಿಯ ವಿವಿಧ ವೇಷಗಳಾದ ಸ್ಪೈಡರ್‌ಮ್ಯಾನ್‌, ಅವತಾರ್, ಅಕ್ಟೋಪಸ್,ಜಾನ್ ಕಾರ್ಟರ್, ಪ್ಯಾನ್ಸ್ ಲಾಬರೆಂತ್ ವೇಷಗಳನ್ನು ಧರಿಸಿ ಅಷ್ಟಮಿಗೆ ರಂಗು ತುಂಬುತ್ತಾರೆ. ಪ್ರತೀ ಬಾರಿ ವಿಶಿಷ್ಟ ಆಲೋಚನೆಯೊಂದಿಗೆ ರವಿ ಕಟಪಾಡಿ ಉಡುಪಿ ಕೃಷ್ಣ ಲೀಲೋತ್ಸವದಲ್ಲಿ ಕಂಡುಬರುತ್ತಾರೆ. ಈ ಬಾರಿ ರವಿ ಅವರು ವಿಭಿನ್ನ ಆಕರ್ಷಣೆಯ ಪ್ಯಾನ್ಸ್ ಲಾಬರೆಂತ್ ವೇಷ ಹಾಕುವ ಮೂಲಕ ಜನರಿಂದ ಧನ ಸಂಗ್ರಹಿಸಿ ಬಡಕುಟುಂಬಕ್ಕೆ ದಾನ ಮಾಡಿದ್ದಾರೆ. ಇವರ ಎಲ್ಲಾ ವೇಷಗಳಿಗೆ ಇವರ ಗೆಳೆಯ ಕಲಾವಿದ ದಿನೇಶ್ ಮಟ್ಟು ಸಹಕರಿಸಿರುವುದನ್ನು ರವಿ ಸ್ಮರಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.