ADVERTISEMENT

ಇಂದಿನಿಂದ ರಸ್ತೆ ಸುರಕ್ಷತಾ ಸಪ್ತಾಹ

ಸಾರಿಗೆ ಉಪ ಆಯುಕ್ತ ಎಚ್‌. ಗುರುಮೂರ್ತಿ ಕುಲಕರ್ಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:28 IST
Last Updated 9 ಜನವರಿ 2017, 9:28 IST
ಉಡುಪಿ: ಕುಂದಾಪುರದ ಭಂಡಾರ್‌ ಕರ್ಸ್‌ ಕಾಲೇಜಿನಲ್ಲಿ ಇದೇ 9ರಿಂದ 15ರ ವರೆಗೆ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಗುವುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಸಾರಿಗೆ ಉಪ ಆಯುಕ್ತ ಎಚ್‌. ಗುರುಮೂರ್ತಿ ಕುಲಕರ್ಣಿ ಹೇಳಿದರು.
 
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಮಾಹಿತಿ ನೀಡಿದರು. 
 
ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ವಾಗಿ ಬ್ಯಾರಿಕೇಡ್‌ ಹಾಕಬೇಡಿ. ಅಗತ್ಯವಿರುವೆಡೆ ವೈಜ್ಞಾನಿಕವಾಗಿ ಮಾತ್ರ ಬ್ಯಾರಿಕೇಡ್‌ ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೂಚನೆ ನೀಡಬೇಕೆಂದು ತಿಳಿಸಿದರು. 
 
ಬಾರ್ಕೂರಿನ ಮಂದಾರ್ತಿ ರಸ್ತೆಯಲ್ಲಿ ಅಪಘಾತಗಳು ಹೆಚ್ಚು ನಡೆಯುತ್ತಿದ್ದು, ಪಿಡಬ್ಲ್ಯುಡಿ ರಸ್ತೆ ಇದಾಗಿದ್ದು, ಕ್ರಮಕೈ ಗೊಳ್ಳಲು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಅವರು ಸೂಚಿಸಿದರು.  
 
ರಸ್ತೆ ಬದಿಗಳಲ್ಲಿ ಅತ್ಯಾಕರ್ಷಕ ಹೋರ್ಡಿಂಗ್‌ನಿಂದಲೂ ಅಪಘಾತಗಳು ಸಂಭವಿಸುವ ಅವಕಾಶವಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ್‌ ಹೇಳಿದರು. 
 
ರಾಷ್ಟ್ರೀಯ ಹೆದ್ದಾರಿ 66ರ ಕುಂದಾ ಪುರ ಬಸ್ರೂರು ಮೂರುಕೈ ಜಂಕ್ಷನ್‌ನಲ್ಲಿ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಸಮ್ಮತಿಸಿದರು. ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಲ್ಲಿರುವ ಜೋಡು ರಸ್ತೆಯಲ್ಲಿ ಹಂಪ್ಸ್‌ ಬದಲು ಹೊಸ ವಿಧಾನದ ರಿಫ್ಲೆಕ್ಟರ್‌ ಪೈಂಟ್‌ ಹಾಕಿ, ವಾಹನಗಳನ್ನು ನಿಧಾನವಾಗಿ ಚಲಿಸುವಂತೆ ಮಾಡಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ನಗರದ ವಾಹನ ದಟ್ಟಣೆ ಹೆಚ್ಚಿರುವ ಕಡೆಗಳಲ್ಲಿ ಅಧಿಕ ಸಂಚಾರ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಹೇಳಿದರು.  
 
ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆ ಬಳಿ ಇರುವ ಬಸ್‌ ನಿಲ್ದಾಣವನ್ನು ಸ್ಥಳಾಂತರಿಸುವ ಮನವಿ ಬಗ್ಗೆ ನಗರಸಭೆ ಅಭಿಪ್ರಾಯಕ್ಕೆ ಕಳುಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.