ADVERTISEMENT

ಉಪ್ಪೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಯೋಜನೆ: ಶಾಸಕ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 7:45 IST
Last Updated 28 ಮಾರ್ಚ್ 2015, 7:45 IST
ಬ್ರಹ್ಮಾವರ ಬಳಿಯ ಉಪ್ಪೂರು ಕೊಳಲಗಿರಿಯಲ್ಲಿ ಶನಿವಾರ ಯುವ ವಿಚಾರ ವೇದಿಕೆಯ 14ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮನೋಜ್‌ ಅವರನ್ನು ಸನ್ಮಾನಿಸಲಾಯಿತು. ಶಾಸಕ ಪ್ರಮೋದ್ ಮಧ್ವರಾಜ್, ವೆರೋನಿಕಾ ಕರ್ನೆಲಿಯೋ, ಡೇವಿಡ್‌ ಕ್ರಾಸ್ತಾ, ಪ್ರವೀಣ್‌ ಕುಮಾರ್‌ ಮತ್ತಿತರರು ಇದ್ದರು.
ಬ್ರಹ್ಮಾವರ ಬಳಿಯ ಉಪ್ಪೂರು ಕೊಳಲಗಿರಿಯಲ್ಲಿ ಶನಿವಾರ ಯುವ ವಿಚಾರ ವೇದಿಕೆಯ 14ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮನೋಜ್‌ ಅವರನ್ನು ಸನ್ಮಾನಿಸಲಾಯಿತು. ಶಾಸಕ ಪ್ರಮೋದ್ ಮಧ್ವರಾಜ್, ವೆರೋನಿಕಾ ಕರ್ನೆಲಿಯೋ, ಡೇವಿಡ್‌ ಕ್ರಾಸ್ತಾ, ಪ್ರವೀಣ್‌ ಕುಮಾರ್‌ ಮತ್ತಿತರರು ಇದ್ದರು.   

ಬ್ರಹ್ಮಾವರ: ವಿಜ್ಞಾನ ಕೇಂದ್ರ, ಸೇತುವೆಗಳ ನಿರ್ಮಾಣ, ಮೆಡಿಕಲ್ ಕಾಲೇಜು, ಆಸ್ಪತ್ರೆಗಳಂತಹ ಅನೇಕ ಯೋಜನೆಗಳನ್ನು ಉಪ್ಪೂರು ಗ್ರಾಮ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಮಾಡಲು ಯೋಜನೆ ಇದೆ. ಇದರಿಂದ ಉಪ್ಪೂರು ಗ್ರಾಮ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಶಾಸಕ ಪ್ರಮೋದ್ ಮಧ್ವರಾಜ್‌ ತಿಳಿಸಿದರು.

ಉಪ್ಪೂರು ಕೊಳಲಗಿರಿಯಲ್ಲಿ ಶನಿವಾರ ಅವರು ಯುವ ವಿಚಾರ ವೇದಿಕೆಯ 14ನೇ ವಾರ್ಷಿಕೋತ್ಸವದ ಸಂದರ್ಭ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನಿರ್ಮಿಸಲಾದ ನೂತನ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಉಪ್ಪೂರು ಪ್ರೌಢಶಾಲೆಯಲ್ಲಿ ವಿಜ್ಞಾನ ಸೆಂಟರ್‌ಗಾಗಿ ಇನ್ನು ಕೆಲವೇ ದಿನಗಳಲ್ಲಿ ಒಂದು ಕೋಟಿ ರೂ.ಬಿಡುಗ ಡೆಯಾಗಲಿದೆ.

ಉಪ್ಪೂರು ಕೊಳಲಗಿರಿ ವ್ಯಾಪ್ತಿಯಲ್ಲಿ ಸುಮಾರು 20ಎಕರೆ ಜಾಗದಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ನಿರ್ಮಾಣ, ಹಾವಂಜೆ, ಕೀಳಂಜೆ, ಉಪ್ಪೂರಿನಿಂದ ಮಣಿಪಾಲಕ್ಕೆ ಹೋಗಲು ಸ್ವರ್ಣ ನದಿಗೆ ಸುಮಾರು 20ಕೋಟಿ ರೂ.ಅಂದಾಜಿನಲ್ಲಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಇನ್ನು ಕೆಲವೇ ದಿನಗಳಲ್ಲಿ ನಿರ್ಣಯ ಹೊರಬೀಳಲಿದೆ ಎಂದು ಅವರು ತಿಳಿಸಿದರು.


ಉಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮವನ್ನು ಆರೂರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಎಂ.ಪಿ ರಾಘ ವೇಂದ್ರ ರಾವ್‌ ಮತ್ತು ಶೌಚಗೃಹವನ್ನು ಕಲ್ಯಾಣ ಪುರ ರೋಟರಿಯ ಪೀಟರ್‌ ಕರ್ನೆಲಿಯೋ ಉದ್ಘಾಟಿಸಿದರು.

ಸನ್ಮಾನ : ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕಿ ಮಾಲತಿ ವಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮನೋಜ್‌ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್‌ ಜಿಲ್ಲಾ ಚೆಯರ್ ಮ್ಯಾನ್‌ ಕಲ್ಯಾಣಪುರ ನೇಜಾರಿನ ಅಲೆನ್ ವಿನಯ್ ಲೂವಿಸ್‌ 14ಮಂದಿ ಬಡ ವಿದ್ಯಾರ್ಥಿಗಳಿಗೆ ಸೋಲಾರ್‌ ದೀಪಗಳನ್ನು ಉಚಿತವಾಗಿ ನೀಡಿದರು.

ವೇದಿಕೆಯಲ್ಲಿ ತಾ.ಪಂ ಸದಸ್ಯೆ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ, ಅಮ್ಮುಂಜೆ ಸಿರಿಯನ್‌ ಚರ್ಚ್‌ನ ಧರ್ಮಗುರು ಫಾ.ಡೇವಿಡ್‌ ಕ್ರಾಸ್ತಾ, ರೋಟರಿಯ ಸುಬ್ಬಣ್ಣ ಪೈ, ತಾ.ಪಂ ಮಾಜಿ ಸದಸ್ಯ ಸಂಜೀವ ಮಾಯಾಡಿ, ರೋಟರಿಯ ವಿಜಯ್‌ ಮಾಯಾಡಿ ಉಪಸ್ಥಿತರಿದ್ದರು.

ವೇದಿಕೆಯ ಅಧ್ಯಕ್ಷ ಶಶಿಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್‌ ವರದಿ ವಾಚಿಸಿದರು. ಭವಾನಿ ಶಂಕರ್ ಸನ್ಮಾನಿತರ ಪರಿಚಯ ನೀಡಿದರು. ಸದಾಶಿವ ಮತ್ತು ಯೋಗೀಶ್‌ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಉಪ್ಪೂರಿನ ಪದ್ಮನಾಭ ಸೇರ್ವೆಗಾರ ಧ್ವಜಾರೋಹಣ ನೆರವೇರಿಸಿದರು. ಹಾವಂಜೆ ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಉದಯ ಕೋಟ್ಯಾನ್, ಉದ್ಯಮಿ ಪ್ರಭಾಕರ ಕುಂದರ್, ಕೊಳಲಗಿರಿ ಸೈಂಟ್‌ ಕ್ಸೇವಿಯರ್‌ ಹಿರಿಯ ಪ್ರಾಥಮಿಕ ಶಾಲೆಯ ಸಿಸ್ಟರ್ ಲವಿನಾ ಕ್ರಾಸ್ತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT