ADVERTISEMENT

‘ಏಪ್ರಿಲ್‌ ಅಂತ್ಯದೊಳಗೆ ಡೀಸೆಲ್‌ ಸಬ್ಸಿಡಿ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 6:16 IST
Last Updated 15 ಏಪ್ರಿಲ್ 2017, 6:16 IST

ಉಡುಪಿ:‘ಜನವರಿಯಿಂದ ಮಾರ್ಚ್‌ ತಿಂಗಳವರೆಗಿನ ಬಾಕಿ ಡೀಸೆಲ್‌ ಸಬ್ಸಿಡಿಯನ್ನು  ಏಪ್ರಿಲ್‌ ಅಂತ್ಯದೊಳಗೆ ನೇರವಾಗಿ ಮೀನುಗಾರರ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗುವುದು, ಈ ಬಗ್ಗೆ ಮೀನುಗಾರರು ಯಾವುದೇ ಆತಂಕಪಡುವ ಅಗತ್ಯವಿಲ’ ಎಂದು ಮೀನುಗಾರಿಕೆ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಭರವಸೆ ನೀಡಿದರು.

ಮಲ್ಪೆ ಬಂದರು ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ಮೀನು ಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಜನವರಿಯಲ್ಲಿ ₹8 ಕೋಟಿ, ಫೆಬ್ರುವರಿಯಲ್ಲಿ ₹15ಕೋಟಿ ಹಾಗೂ ಮಾರ್ಚ್‌ನಲ್ಲಿ ₹15 ಕೋಟಿ ಸೇರಿದಂತೆ ಮೀನುಗಾರರಿಗೆ ನೀಡಲು ಬಾಕಿ ಇರುವ ಒಟ್ಟು ₹38 ಕೋಟಿ ಡೀಸೆಲ್‌ ಸಬ್ಸಿಡಿ ಮೊತ್ತವನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಹಾಗೆಯೇ ಏಪ್ರಿಲ್‌ ನಂತರ ಕಾಲಕಾಲಕ್ಕೆ ಸಬ್ಸಿಡಿ ಹಣವನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಡೀಸೆಲ್‌ ಸಬ್ಸಿಡಿಯ ಅಕ್ರಮವನ್ನು ತಡೆಯಲು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರಕ್ಕೆ ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದರು.

ದೇಶದಲ್ಲಿ ಗುಜರಾತ್‌ ಹೊರತುಪಡಿಸಿದರೆ ಅತಿ ಹೆಚ್ಚಿನ ಮೀನುಗಾರಿಕಾ ದೋಣಿಗಳು ಮಲ್ಪೆಯಲ್ಲಿವೆ. ಹಾಗಾಗಿ ಎಲ್ಲಾ ಮೀನುಗಾರಿಕಾ ದೋಣಿಗಳಿಗೆ ಸಾಧ್ಯತಾ ಪತ್ರಗಳನ್ನು ವಿತರಿಸಿ, ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆ ಬಳಿಕ ಮೀನುಗಾರಿಕಾ ನಿಯಮವನ್ನು ಕಠಿಣಗೊಳಿಸಲಾಗುತ್ತದೆ. ಒಬ್ಬರ ಬ್ಯಾಂಕ್‌ ಖಾತೆಯ ಡೀಸೆಲ್‌ ಅನ್ನು ಇನ್ನೊಬ್ಬರಿಗೆ ನೀಡಿದಲ್ಲಿ, ಆ ಡೀಸೆಲ್‌ ಬಂಕ್‌ಅನ್ನು ಕಪ್ಪುಪಟ್ಟಿಗೆ ಸೇರಿಸಿ, ಪರವಾನಗಿಯನ್ನು ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಈ ಬಾರಿಯ ಬಜೆಟ್‌ನಲ್ಲಿ ಡೀಸೆಲ್‌ ಸಬ್ಸಿಡಿಗಾಗಿ ₹157 ಕೋಟಿ ಮೀಸಲಿ ಡಲಾಗಿದೆ. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು ₹2ಲಕ್ಷದಿಂದ ₹5 ಲಕ್ಷಕ್ಕೆ ಏರಿಸಲಾಗಿದೆ. ಜಿಲ್ಲೆಗೆ ನ್ಯಾಯ ಬದ್ಧವಾದ ಮೀನುಗಾರಿಕೆ ಕಚೇರಿಯ ಕೊರತೆ ಇತ್ತು. ಶೀರೂರಿ ನಿಂದ ಹೆಜಮಾಡಿವರೆಗಿನ ಮೀನುಗಾ ರರು ಮೀನುಗಾರಿಕೆಗೆ ಸಂಬಂಧಪಟ್ಟ ಕೆಲಸ ಗಳಿಗೆ ಮಂಗಳೂರಿಗೆ ಹೋಗಬೇಕಿತ್ತು. ಮೀನುಗಾರರ ಈ ಸಂಕಷ್ಟವನ್ನು ಕಂಡು ಮಲ್ಪೆಯಲ್ಲಿ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಸ್ಥಾಪಿಸಲಾಗಿದೆ. ಆ ಮೂಲಕ ಜಿಲ್ಲೆಯ ಮೀನುಗಾರರ 20 ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಮಲ್ಪೆ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಮಂಗಳೂರು ಮೀನು ಗಾರಿಕಾ ಇಲಾಖೆಯ ಉಪನಿರ್ದೇಶಕ ಮಹೇಶ್‌ ಕುಮಾರ್‌, ಉಡುಪಿ ಮೀನು ಗಾರಿಕ ಇಲಾಖೆಯ ಜಂಟಿ ನಿರ್ದೇಶಕ ಗಣಪತಿ ಭಟ್‌, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮಿನ್ ಪಡುಕೆರೆ ಇದ್ದರು. ಉಡುಪಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಿ. ಪಾರ್ಶ್ವನಾಥ್‌ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.