ADVERTISEMENT

ಒಳ್ಳೆಯ ಕಥೆ ಸಿಕ್ಕರೆ ತುಳು ಚಿತ್ರದಲ್ಲೂ ಅಭಿನಯ: ಶಿವರಾಜ್ ಕುಮಾರ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 9:50 IST
Last Updated 8 ಜುಲೈ 2017, 9:50 IST
ನಟ ಶಿವರಾಜ್ ಕುಮಾರ್ ಕಲ್ಯಾಣ್ ಜ್ಯುವೆಲರ್ಸ್‌ನ ಉಡುಪಿಯ ನೂತನ ಶೋ ರೂಂ ಉದ್ಘಾಟನಾ ಸಮಾರಂಭಕ್ಕೂ ಮೊದಲು ಜನರನ್ನು ಉದ್ದೇಶಿಸಿ ಮಾತನಾಡಿದರು. 	ಪ್ರಜಾವಾಣಿ ಚಿತ್ರ
ನಟ ಶಿವರಾಜ್ ಕುಮಾರ್ ಕಲ್ಯಾಣ್ ಜ್ಯುವೆಲರ್ಸ್‌ನ ಉಡುಪಿಯ ನೂತನ ಶೋ ರೂಂ ಉದ್ಘಾಟನಾ ಸಮಾರಂಭಕ್ಕೂ ಮೊದಲು ಜನರನ್ನು ಉದ್ದೇಶಿಸಿ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ‘ತುಳು ಚಿತ್ರರಂಗ ತುಂಬ ಚೆನ್ನಾಗಿ ಬೆಳೆಯುತ್ತಿದ್ದು, ಅವಕಾಶ ಸಿಕ್ಕಿ ದರೆ ತುಳು ಭಾಷೆಯ ಸಿನಿಮಾದಲ್ಲಿಯೂ ಅಭಿನಯಿಸುತ್ತೇನೆ’ ಎಂದು ನಟ ಶಿವರಾಜ್ ಕುಮಾರ್ ಹೇಳಿದರು. ಶುಕ್ರವಾರ ಕಲ್ಯಾಣ್ ಜ್ಯುವೆಲರ್ಸ್‌ನ ಉಡುಪಿಯ ನೂತನ ಶೋ ರೂಂ ಉದ್ಘಾಟನೆ ಮಾಡಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿ ಕ್ರಿಯಿಸಿದರು.

‘ಒಳ್ಳೆಯ ಕಥೆ ಸಿಕ್ಕಿದರೆ ತುಳು ಚಿತ್ರದಲ್ಲಿ ನಟಿಸುತ್ತೇನೆ. ಉಡುಪಿ, ಕುಂದಾಪುರ ಮತ್ತು ಮಂಗಳೂರು  ಎಂದರೆ ನನಗೆ ತುಂಬಾ ಪ್ರೀತಿ. ಇಲ್ಲಿನ ಜನರ ಪ್ರೀತಿ ನೋಡಿ ತುಂಬಾ ಖುಷಿಯಾಗಿದೆ. ಶೂಟಿಂಗ್‌ಗಾಗಿ ಕರಾವಳಿ ಭಾಗಕ್ಕೆ ಹಲವಾರು ಬಾರಿ ಬಂದಿದ್ದೇನೆ. ಆದರೆ ಈ ಬಾರಿ ವಿಶೇಷ ಕಾರಣಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಕೃಷ್ಣನ ಊರು ಉಡುಪಿಗೆ ಕಲ್ಯಾಣ ಜ್ಯುವೆಲರ್ಸ್‌ ಬಂದೆ, ಜನರ ಪ್ರೋತ್ಸಾಹ ಬೇಕು’ ಎಂದು ಮನವಿ ಮಾಡಿದರು.

ಜಮಾಯಿಸಿದ್ದ ಜನ: ಶೋರೂಂ ಉದ್ಘಾಟನೆಗೆ ಶಿವರಾಜ್ ಕುಮಾರ್ ಬರುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಕಾರಣ ಭಾರಿ ಸಂಖ್ಯೆಯಲ್ಲಿ ಜನರು ಶೋರೂಂ ಎದುರು ಜಮಾಯಿಸಿದ್ದರು. 10 ನಿಮಿಷ ತಡವಾಗಿ ಬಂದ ನಟ ನೇರವಾಗಿ ವೇದಿಕೆ ಮೇಲೇರಿ ಜನರತ್ತ ಕೈಬೀಸಿದರು. ತಮ್ಮದೇ ಚಿತ್ರದ ‘ಕುಂದಾಪುರದ ಮೀನಮ್ಮ ಸೂಪರ್ ಸೂಪರ್ ಟೇಸ್ಟಮ್ಮ’ ಹಾಡಿನ ಒಂದೆರಡು ಸಾಲು ಹೇಳಿ ರಂಜಿಸಿದರು.

ADVERTISEMENT

ಕಲ್ಯಾಣ್ ಜ್ಯುವೆಲರ್ಸ್‌ನ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್. ಕಲ್ಯಾಣ್‌ರಾಮ್‌, ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಕಲ್ಯಾಣ್‌ರಾಮ್‌, ರಮೇಶ್ ಕಲ್ಯಾಣ್‌ರಾಮ್ ಇದ್ದರು.

ಡಬ್ಬಿಂಗ್ ಬೇಕೋ ಬೇಡವೋ–ಜನರೇ ನಿರ್ಧರಿಸಲಿ
ಉಡುಪಿ: ‘ಡಬ್ಬಿಂಗ್ ಬೇಕೋ ಬೇಡವೋ ಎಂಬುದನ್ನು ಜನರೇ ತೀರ್ಮಾನಿಸಬೇಕು. ಅವರು ಯಾವ ನಿರ್ಧಾರ ಕೈಗೊಂಡರೂ ಅದಕ್ಕೆ ನಾನು ಬದ್ಧ. ಏಕೆಂದರೆ ನಾವೆಲ್ಲ ಸಿನಿಮಾ ಮಾಡುವುದು ಜನರಿಗಾಗಿಯೇ ಹೊರತು ನಮಗಾಗಿ ಅಲ್ಲ’ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.

ಶುಕ್ರವಾರ ಕಲ್ಯಾಣ್ ಜ್ಯುವೆಲರ್ಸ್‌ನ ನೂತನ ಶೋ ರೂಂ ಉದ್ಘಾಟನೆ ಮಾಡಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ವ್ಯಾವಹಾರಿಕವಾಗಿ ನೋಡಿದರೆ ಡಬ್ಬಿಂಗ್ ಬಗ್ಗೆ ಜನರೇ ನಿರ್ಧರಿಸಬೇಕು. ಆದರೆ ಕಾರ್ಮಿಕರ ಹಿತದೃಷ್ಟಿಯಿಂದ ಡಬ್ಬಿಂಗ್ ಬೇಡ ಎಂಬುದು ನನ್ನ ಅಭಿಪ್ರಾಯ.

ಪರಭಾಷಾ ಚಿತ್ರಗಳು ನೇರವಾಗಿ ಬಿಡುಗಡೆ ಆಗುವುದು ಬೇಡ, ಕನ್ನಡಕ್ಕೆ ಡಬ್ಬಿಂಗ್ ಆದ ಚಿತ್ರಗಳು ಮಾತ್ರ ಬಿಡುಗಡೆಯಾಗಲಿ. ಆಗ ಕನ್ನಡಕ್ಕೂ ಒಳ್ಳೆಯದಾಗುತ್ತದೆ’ ಎಂದರು.

‘ಮೂರೂ ಜನ ಸಹೋದರರು ಒಂದು ಸಿನಿಮಾದಲ್ಲಿ ಅಭಿನಯಿಸ್ತೀರಾ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಿನಿಮಾ ಎಂಬುದು ಅದಾಗಿಯೇ ಆಗಬೇಕು ಎಂದು ನಮ್ಮ ತಂದೆ ಹೇಳುತ್ತಿದ್ದರು. ಈಗಲೂ ಅಷ್ಟೇ ಅಂತಹ ಅವಕಾಶ ಬಂದಾಗ ನಟಿಸುತ್ತೇವೆ. ಸುದೀಪ್ ಜೊತೆಗೆ ಅಭಿನಯಿಸುತ್ತಿರುವ ‘ದಿ ವಿಲನ್’ ಚಿತ್ರ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಎಲ್ಲರೂ ಆ ಚಿತ್ರವನ್ನು ನೋಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.