ADVERTISEMENT

ಕನ್ನಡದ ಉಳಿವಿಗಾಗಿ ಹೋರಾಟ: ಕಳವಳ

ಸಮ್ಮೇಳನಾಧ್ಯಕ್ಷ ಅಂಬಾತನಯ ಮುದ್ರಾಡಿ ಅವರಿಂದ ನಲವತ್ತು ನಿಮಿಷಗಳ ಭಾಷಣ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 10:03 IST
Last Updated 7 ಜೂನ್ 2013, 10:03 IST

ಉಡುಪಿ: ಆಂಗ್ಲ ಭಾಷಾ ವ್ಯಾಮೋಹ ನೂರ‌್ಮಡಿ ಆಗಿ ಕನ್ನಡದ ಉಳಿವಿಗಾಗಿ ಹೋರಾಟಕ್ಕಿಳಿವ ದುಃಸ್ಥಿತಿಗೆ ವಿಷಾದ. ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸಲು ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಮೂಲಕ ಕನ್ನಡಕ್ಕೆ ಕಂಟಕ ಆಗುತ್ತಿರುವ ಬಗ್ಗೆ ಕಳವಳ. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ ಕೃಷಿ ಭೂಮಿ ಬಂಜರಾಗುತ್ತಿರುವುದು. ಸಾಹಿತಿ ಮತ್ತು ಸಾಹಿತ್ಯ ದ್ವೇಷ ಬೆಳೆಸಿಕೊಳ್ಳುತ್ತಿರುವ ಸಾಹಿತಿಗಳ ವರ್ತನೆ- ಒಳಜಗಳಕ್ಕೆ ಬೇಸರ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿಯ ಅನಂತಪದ್ಮನಾಭ ಸನ್ನಿಧಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ ಎಂಟನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಅಂಬಾತನಯ ಮುದ್ರಾಡಿ ಅವರು ಸುಮಾರು ನಲವತ್ತು ನಿಮಿಷಗಳ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕೃಷಿ, ಸಾಹಿತಿಗಳ ಗತಿ- ಮತಿ, ಸಾಮಾಜಿಕ ವ್ಯವಸ್ಥೆ ಈ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲಿದರು.

ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರ ಏಳ್ಗೆಗಾಗಿ ಎಲ್ಲರೂ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರು ಮುಂದಡಿ ಇಡಬೇಕು ಎಂಬುದು ಅವರ ಭಾಷಣದ ಒಟ್ಟಾರೆ ಸಾರಾಂಶ ಆಗಿತ್ತು.

ಆಂಗ್ಲ ಭಾಷೆಯ ವ್ಯಾಮೋಹ ಹಿಂದಿನಿಂದಲೂ ಇದೆ. 1911ರಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಭಾಷಣ ಮಾಡಿದ ಕನ್ನಡದ ಕಣ್ವ ಬಿಎಂಶ್ರೀ ಅವರು ಆಂಗ್ಲ ಭಾಷೆಯ ಮೋಹದ ಬಗ್ಗೆ ಮಾತನಾಡಿದ್ದರು. ಆದರೆ ಅದು ಈಗ ನೂರ‌್ಮಡಿ ಆಗಿದೆ. ಕನ್ನಡ ಉಳಿವಿಗಾಗಿ ಕನ್ನಡನಾಡಿನಲ್ಲಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದೊದಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸಿದರೆ ಅವರು ಕೈತುಂಬ ಹಣ ಗಳಿಸುತ್ತಾರೆ. ವಿಶ್ವದ ಯಾವ ಮೂಲೆಯಲ್ಲಾದರೂ ಕೆಲಸ ಗಿಟ್ಟಿಸುತ್ತಾರೆ ಎಂಬ ನಂಬಿಕೆ ವಿದ್ಯಾವಂತರು ಮಾತ್ರವಲ್ಲ ಜನ ಸಾಮಾನ್ಯರಲ್ಲೂ ಇದೆ. ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುವುದೇ ಒಂದು ಪ್ರತಿಷ್ಠೆಯಾಗಿದೆ. ಕನ್ನಡದ ಬಗ್ಗೆ ವೇದಿಕೆಗಳಲ್ಲಿ ಭಾಷಣ ಮಾಡುವವರು ತಮ್ಮ ಮಕ್ಕಳನ್ನು ಮಾತ್ರ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸುವುದಾಗಿ ಹೇಳಿ ಸರ್ಕಾರದಿಂದ ಅನುಮತಿ ಪಡೆದು ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಸಲಾಗುತ್ತಿದೆ. ಇಂತಹ ಸುಮಾರು ಸಾವಿರ ಶಾಲೆಗಳು ರಾಜ್ಯದಲ್ಲಿ ಇರಬಹುದು. ಶಾಲೆ ನಡೆಸುತ್ತಿರುವವರಿಗೆ ಇದೊಂದು ಸಂಪಾದನೆಯ ಹಾದಿಯಾಗಿದೆ. ಇಂತಹವರಲ್ಲಿ ಸಮಾಜದ ಧನಾಢ್ಯರಿದ್ದಾರೆ, ಸಾಮಾಜಿಕ ನೇತಾರರಿದ್ದಾರೆ, ರಾಜಕಾರಣಿಗಳೂ ಇದ್ದಾರೆ. ಇಂತಹ ಅಕ್ರಮವನ್ನು ತಡೆಯುವ ಇಚ್ಛಾಶಕ್ತಿ ನಮ್ಮ ಪ್ರಭುತ್ವಕ್ಕೆ ಇಲ್ಲದಾಗಿದೆ ಎಂದರು.

ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಬೇಕು ಎಂದು ಜಗತ್ತಿನ ಶಿಕ್ಷಣ ತಜ್ಞರೆಲ್ಲರೂ ಅಭಿಪ್ರಾಯಪಡುತ್ತಾರೆ. ಆದರೆ ಕನ್ನಡಿಗರು ಇದನ್ನು ಅವಗಣಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಕಲಿತರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ, ಸಮಾಜದಲ್ಲಿ ಸ್ಥಾನಮಾನ ಗಳಿಸುತ್ತಾರೆ ಎಂಬುದು ಕೇವಲ ಭ್ರಮೆಯಷ್ಟೇ, ಎಂಟು ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿದ್ದಾರೆ, ಅವರೆಲ್ಲ ಕನ್ನಡ ಮಾಧ್ಯಮ ಶಾಲೆಯಲ್ಲೇ ಓದಿದವರು ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.

ಪದವಿ ಕಾಲೇಜುಗಳ ಕಲಾ ಮತ್ತು ವಿಜ್ಞಾನ ವಿಭಾಗವು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದೆ. ಕನ್ನಡ ಮೇಜರ್ ಇರುವ ಕೆಲವು ಕಾಲೇಜುಗಳು ಕನ್ನಡ ವಿಷಯವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಿವೆ. ಇದೊಂದು ಕಳವಳಕಾರಿಯಾದ ಸಂಗತಿಯಾಗಿದೆ. ಇದೇ ರೀತಿ ಮುಂದುವರೆದರೆ ಅಧ್ಯಾಪನಾ ಸಂಶೋಧನೆಗಳು ನಿಂತು ಪಶ್ಚತ್ತಾಪಪಡುವ ಕಾಲ ಬರಬಹುದು ಎಂದು ಅವರು ಎಚ್ಚರಿಸಿದರು.

ಅನ್ಯ ಭಾಷೆಯ ಕೃತಿಗಳು ಕನ್ನಡಕ್ಕೆ ಹೇರಳವಾಗಿ ಅನುವಾದ ಆಗುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕನ್ನಡದ ಕೃತಿಗಳು ಅನುವಾದ ಆಗುತ್ತಿಲ್ಲ. ಅದರಲ್ಲೂ ವಿಶ್ವದ ಭಾಷೆ ಎನಿಸಿರುವ ಆಂಗ್ಲ ಭಾಷೆಗೆ ಕನ್ನಡದ ಕೃತಿಗಳು ಅನುವಾದಗೊಂಡಿರುವುದು ತೀರ ವಿರಳ. ಮೌಲಿಕ ಕೃತಿಗಳು ಅನುವಾದಗೊಂಡಿದ್ದರೆ ಕನ್ನಡಕ್ಕೆ ನೊಬೆಲ್ ಪುರಸ್ಕಾರ ಬರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಮಕ್ಕಳ ಸಾಹಿತ್ಯ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆಯಾಗದಿರುವುದು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯ ಪರಿಷತ್‌ನಿಂದ ಸಾಹಿತಿಗಳು ದೂರ ಆಗುತ್ತಿರುವುದು, ಸಾಹಿತಿಗಳಲ್ಲಿರುವ ಗುಂಪುಗಾರಿಕೆ, ಗಡಿ ತಂಟೆಯಿಂದ ಗೊಂದಲ ಏರ್ಪಟ್ಟಿರುವುದು, ಕಾವೇರಿ ಜಲ ವಿವಾದ ಹೀಗೆ ಎಲ್ಲ ವಿಷಯಗಳ ಬಗ್ಗೆ ಅಂಬಾತನಯ ಮುದ್ರಾಡಿ ಬೆಳಕು ಚೆಲ್ಲಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪುಂಡಲೀಕ ಹಾಲಂಬಿ ಸಮ್ಮೇಳನವನ್ನು ಉದ್ಘಾಟಿಸಿದರು. ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಮಾತನಾಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಪುಸ್ತಕ ಮಳಿಗೆಗಳನ್ನು ಮತ್ತು ಕಲಾವಿದ ರಮೇಶ್ ರಾವ್ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದರು. ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸಿದರು.

ಅಮೃತ ಭಾರತಿ ವಿದ್ಯಾಲಯದ ಮಕ್ಕಳು ನಾಡಗೀತೆ ಮತ್ತು ಪೆರುವಾಜೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ರೈತ ಗೀತೆಯನ್ನು ಹಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಯೋಗೀಶ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು.

ಜಿಲ್ಲಾ ವಾರ್ತಾಧಿಕಾರಿ ಎಂ. ಜುಂಜಣ್ಣ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಎನ್ ಅಡ್ಯಂತಾಯ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್, ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಕಾಸರಗೋಡು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕುಂದಾಪುರದ ನಾರಾಯಣ ಖಾರ್ವಿ, ಉಡುಪಿಯ ಉಪೇಂದ್ರ ಸೋಮಯಾಜಿ, ಕಾರ್ಕಳದ ಬಿ.ಸಿ. ರಾವ್ ಶಿವಪುರ ಉಪಸ್ಥಿತರಿದ್ದರು.

ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಣೆ ಮಾಡಿದರು. ರಂಗಪ್ಪಯ್ಯ ಹೊಳ್ಳ ಧನ್ಯವಾದ ಸಮರ್ಪಿಸಿದರು. ಸೀತಾರಾಮ್ ಹೆಬ್ಬಾರ್ ನಿರ್ವಹಿಸಿದರು.

`ಆತಂಕದ ಕ್ಷಣ ಎದುರಿಸುತ್ತಿರುವ ಕನ್ನಡ'
ಉಡುಪಿ: `ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಆತಂಕದ ಕ್ಷಣ ಎದುರಿಸುತ್ತಿದೆ. ಕನ್ನಡ ಶಾಲೆಗಳಿಗೆ ಮಕ್ಕಳು ಬಾರದಿರುವ ಕಾರಣ ಮುಚ್ಚುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಂಭೀರವಾದ ಚಿಂತನೆ ಮಾಡಬೇಕಾಗಿದೆ. ಬದುಕನ್ನು ಕಟ್ಟಿಕೊಡುವ ರೀತಿಯಲ್ಲಿ ನಮ್ಮ ಭಾಷೆಯನ್ನು ಬೆಳೆಸಬೇಕಾಗಿದೆ' ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ .

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿಯಲ್ಲಿ ಗುರುವಾರ ಏರ್ಪಡಿಸಿದ ಎಂಟನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ಏಕೆ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸಲು ಇಚ್ಛಿಸುತ್ತಾರೆ. ಕನ್ನಡ ಶಾಲೆಗಳ ಇಂದಿನ ದು:ಸ್ಥಿತಿಗೆ ಕಾರಣ ಏನು ಎಂದು ಚಿಂತಿಸಬೇಕಾಗಿದೆ. ಆಂಗ್ಲ ಭಾಷೆ ಮಾತ್ರ ಅನ್ನ ಕೊಡುವ ಭಾಷೆ ಎಂಬ ಭ್ರಮೆ ಸೃಷ್ಟಿಯಾಗಿದೆ. ಆದ್ದರಿಂದ ಕನ್ನಡ ಭಾಷೆ ಬದುಕನ್ನು ಕಟ್ಟಿಕೊಡುವ ರೀತಿಯಲ್ಲಿ ಚಿಂತನೆ ಮಾಡಬೇಕಿದೆ ಎಂದು ಅವರು ಹೇಳಿದರು.

ನಮ್ಮನ್ನು ಆಳುವ ವರ್ಗದವರು ಭಾಷೆಯ ಬಗ್ಗೆ ಬದ್ಧತೆ ತೋರಿಸಬೇಕು. ಡಾ. ಸರೋಜಿನಿ ಮಹಿಷಿ ಅವರು ಇಪ್ಪತ್ತು ವರ್ಷಗಳ ಹಿಂದೆಯೇ ಕನ್ನಡಿಗರ ಉದ್ಯೋಗ ಮೀಸಲಾತಿ ಬಗ್ಗೆ ವರದಿ ನೀಡಿದ್ದಾರೆ. ಆದರೆ ಅದು ಜಾರಿಯಾಗಿಲ್ಲ. ಜಾರಿಯಾಗಿದ್ದರೆ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗುತ್ತಿತ್ತು. ಬದಲಾದ ಪರಿಸ್ಥಿತಿಯಲ್ಲಿ ಮಹಿಷಿ ಅವರ ವರದಿಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು. ಸರ್ಕಾರ ಪೋಷಕನಾಗಿ ವರ್ತಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾವೇರಿ, ಕೃಷ್ಣಾ ಮುಂತಾದ ರಾಜ್ಯದ ವಿಷಯಗಳು ಬಂದಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಹೋರಾಟಕ್ಕೆ ಬರುವುದಿಲ್ಲ ಎಂಬ ಅಪವಾದದ ಮಾತುಗಳು ಕೇಳಿಬರುತ್ತವೆ. ಇದನ್ನು ತೊಡೆದು ಹಾಕಬೇಕು. ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ವಿಷಯ ಬಂದರೂ ಬೀದಿಗಿಳಿದು ಹೋರಾಟ ಮಾಡುವ ಮೂಲಕ ಕರಾವಳಿಯ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT