ADVERTISEMENT

ಕನ್ನರ್ಪಾಡಿ: ಟ್ರಾಫಿಕ್ ಜಾಮ್; ಪರದಾಟ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 9:14 IST
Last Updated 23 ಸೆಪ್ಟೆಂಬರ್ 2017, 9:14 IST

ಉಡುಪಿ: ‘ನಗರಕ್ಕೆ ಹೊಂದಿಕೊಂಡಿರುವ ಕನ್ನರ್ಪಾಡಿಯ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಸುಮಾರು ಒಂದು ಗಂಟೆ ವಾಹನ ದಟ್ಟಣೆ, ಸಂಚಾರ ಸ್ಥಗಿತ (ಟ್ರಾಫಿಕ್ ಜಾಮ್) ಆಗಿ ಜನರು ತೀವ್ರ ತೊಂದರೆ ಅನುಭವಿಸಿದರು.

ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಬಸ್‌ಗಳಲ್ಲಿ ಮನೆಗೆ ಹೊರಟ್ಟಿದ್ದ ಪುಟಾಣಿಗಳು ಸಂಚಾರ ದಟ್ಟಣೆಯಲ್ಲಿ ಸಿಕ್ಕಿ ಪರದಾಡಿದರು. ಸಂಚಾರ ನಿರ್ವಹಣೆ ಮಾಡದ ಪೊಲೀಸರ ನಿರ್ಲಕ್ಷ್ಯಕ್ಕೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಕನ್ನರ್ಪಾಡಿಯ ಜಯದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾವಿರಾರು ಜನರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಬರುವ ಜನರು ರಸ್ತೆಯ ಬದಿಯಲ್ಲಿಯೇ, ಎಲ್ಲೆಂದರಲ್ಲಿ ವಾಹನವನ್ನು ಅಡ್ಡಾದಿಡ್ಡಿ ನಿಲುಗಡೆ ಮಾಡುತ್ತಿರುವುದು ಸಮಸ್ಯೆಗೆ ಮೂಲ ಕಾರಣ. ಕಿರಿದಾದ ರಸ್ತೆಯ ಎರಡೂಬದಿಗಳಲ್ಲಿ ವಾಹನ ನಿಲ್ಲಿಸಿದ ಪರಿಣಾಮ ವಾಹನ ಸಂಚಾರ ಸಂಪೂ ರ್ಣ ಸ್ತಬ್ಧವಾಯಿತು’ ಎಂದು ಸ್ಥಳೀಯರು ಮಾಹಿತಿ ನೀಡಿದರು.

ADVERTISEMENT

‘ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊ ಳ್ಳುವ ವರೆಗೂ ಸುಮ್ಮನಿದ್ದ ಪೊಲೀಸರು ಆ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪರದಾಡಿದರು’ ಎಂಬುದು ಪ್ರಯಾಣಿಕರ ಅಳಲು.

‘ಕನ್ನರ್ಪಾಡಿಯಲ್ಲಿ ಸೇಂಟ್ ಮೇರಿಸ್ ಇಂಗ್ಲಿಷ್ ಶಾಲೆಯಿದ್ದು ಅಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆರೇಳು ಶಾಲಾ ವಾಹನಗಳು ಹಾಗೂ ನೂರಾರು ಕಾರು, ಬೈಕ್‌ಗಳು ಬೆಳಿಗ್ಗೆ ಮತ್ತು ಸಂಜೆ ಸಂಚರಿಸುತ್ತವೆ. ಈಗ ಪರೀಕ್ಷೆ ನಡೆಯುತ್ತಿರುವುದರಿಂದ ಮಧ್ಯಾಹ್ನ ಶಾಲೆ ಮುಗಿದಿತ್ತು. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಆಯಿತು’ ಎಂದು ಸ್ಥಳೀಯ ನಿವಾಸಿ ಶ್ವೇತ ಹೇಳಿದರು.

‘ದೇವಸ್ಥಾನಗಳಲ್ಲಿ ಮುಖ್ಯ ಕಾರ್ಯಕ್ರಮಗಳು,ಮದುವೆ ನಡೆಯುವ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸುವುದು ಎಲ್ಲ ಸಮಸ್ಯೆಗೆ ಕಾರಣ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.