ADVERTISEMENT

ಕಲೆ–ಸಂಸ್ಕೃತಿ ಜಾಗೃತಿ ಅಗತ್ಯ: ವಿಶ್ವೇಶತೀರ್ಥ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 8:40 IST
Last Updated 17 ಏಪ್ರಿಲ್ 2017, 8:40 IST

ಉಡುಪಿ: ‘ಮಕ್ಕಳಿಗೆ ಶಾಲೆಯ ಶಿಕ್ಷಣದ ಜತೆಗೆ ಮಹಾತ್ಮರ ಕಥೆಗಳನ್ನು ಹಾಗೂ ನಮ್ಮ ಕಲೆ–ಸಂಸ್ಕೃತಿಯನ್ನು ತಿಳಿಸುವ ಅಗತ್ಯವಿದೆ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಶ್ರೀಕೃಷ್ಣಮಠದಲ್ಲಿ ಮಕ್ಕಳಿಗೆ ಹಮ್ಮಿಕೊಂಡಿದ್ದ 7 ದಿನಗಳ ಹಿಂದೂ ಸಂಸ್ಕಾರ ಶಿಕ್ಷಣ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

‘ಮಕ್ಕಳು ಪ್ರತಿದಿನ ದೇವರ ಶ್ಲೋಕ, ಸಂಕೀರ್ತನೆಗಳನ್ನು ಪಠಿಸಬೇಕು. ದೇವರ ಭಕ್ತಿ ಹಾಗೂ ದೇಶ ಭಕ್ತಿ ನಮ್ಮಲ್ಲಿರ ಬೇಕು. ಅದು ಇಲ್ಲದಿದ್ದರೆ ನಮ್ಮ ಯಾವುದೇ ಕಾರ್ಯ ಸಾರ್ಥಕತೆಯನ್ನು ಪಡೆಯುವುದಿಲ್ಲ’ ಎಂದರು.‘ಹಿಂದೂ ಧರ್ಮದಿಂದಲೇ ಆಧ್ಯಾತ್ಮಿಕ, ಧಾರ್ಮಿಕ ವಿಚಾರಗಳನ್ನು ಕಲಿತುಕೊಂಡವರು, ಇಂದು ನಮಗಿಂತ ಉತ್ತಮ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮುಸ್ಲಿಂ ಧರ್ಮದಲ್ಲಿ ದಿನಕ್ಕೆ 5 ಬಾರಿ ನಮಾಜ್‌ ಮಾಡಿದರೆ, ಕ್ರಿಶ್ಚಿಯನ್‌ ಧರ್ಮದಲ್ಲಿ ಪ್ರತಿದಿನ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಆದರೆ, ಹಿಂದುಗಳು ಸರಳವಾದ ಶ್ಲೋಕಗಳನ್ನು ಹೇಳಲು ಮುಂದಾಗದಿರುವುದರಿಂದ ಹಿಂದು ಸಂಸ್ಕೃತಿಯ ಉನ್ನತಿಗೆ ತೊಡ ಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ದೇವರ ನಂಬಿಕೆ ಇದ್ದಲ್ಲಿ ಯಾವುದೇ ಕೆಟ್ಟ ಕೆಲಸ ನಡೆಯುವುದಿಲ್ಲ. ಇದನ್ನು ಮಕ್ಕಳು ಅರಿಯಬೇಕು. ದೇಶದ ಮಹಾನ್‌ ವ್ಯಕ್ತಿಗಳ ಬಗ್ಗೆ ತಿಳಿದುಕೊ ಳ್ಳಬೇಕು. ಭಾರತೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕು. ಆಗ ಸಂಸ್ಕಾರಯುತ ಸಮಾಜದ ನಿರ್ಮಾಣ ಸಾಧ್ಯ’ ಎಂದು ಸ್ವಾಮೀಜಿ ಹೇಳಿದರು. ಪೆರಂಪಳ್ಳಿ ವಾಸುದೇವ ಭಟ್‌ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.