ADVERTISEMENT

ಕಾಮಗಾರಿ ಇಲ್ಲದೇ ಚೆಕ್ ಮಂಜೂರು

ಕಾರ್ಕಳ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 7:46 IST
Last Updated 28 ಮಾರ್ಚ್ 2015, 7:46 IST

ಕಾರ್ಕಳ: ತಾಲ್ಲೂಕಿನ 13 ಶಾಲೆಗಳ ದುರಸ್ತಿಗಾಗಿ ಶಿಕ್ಷಣ ಇಲಾಖೆಯ ಸೇರ್ಪಡೆ -ಮಾರ್ಪಾಡು ಯೋಜನೆಯಡಿಯಲ್ಲಿ ದುರಸ್ತಿ ನಡೆಸದೇ ಕಾಮಗಾರಿಯ ಚೆಕ್‌ನ್ನು ಪಾಸ್ ಮಾಡಿ ಅವ್ಯವಹಾರ ನಡೆಸಲಾಗಿದೆ ಎಂದು ಸದಸ್ಯ ಸುಜಿತ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಕಾರ್ಕಳ ತಾಲ್ಲೂಕು ಪಂಚಾ­ಯಿತಿ ಸಭಾಭವನದಲ್ಲಿ ಬುಧ­ವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕೆಲವು ಶಾಲೆಗಳಿಗೆ ₹40 ಸಾವಿರ, ಇನ್ನುಳಿದವುಗಳಿಗೆ ತಲಾ ₹ 50 ಸಾವಿರದಂತೆ ಮಂಜೂರಾತಿ ಮಾಡಲಾಗಿದ್ದು ಅವುಗಳಲ್ಲಿ 13 ಶಾಲೆ­ಗಳಲ್ಲಿ ದುರಸ್ತಿಯೇ ನಡೆಸಿಲ್ಲ. ಆದರೂ ಕಾಮಗಾರಿಯ ಚೆಕ್‌ ಅನ್ನು ಮಂಜೂರು ಮಾಡಿ ಅವ್ಯವಹಾರ ನಡೆಸಲಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿ, ಇನ್ನು ಮುಂದೆ ಕಾಮಗಾರಿ ಮುಗಿದ ತರುವಾಯವೇ ಚೆಕ್ ನೀಡಲಾಗುವುದು ಎಂದು ಭರವಸೆ ನೀಡಿದರೂ ಸದಸ್ಯರು ತೃಪ್ತರಾಗಲಿಲ್ಲ. ಕಡತದಲ್ಲಿ ಕಾಮಗಾರಿ ನಡೆದ ಕುರಿತು ಉಲ್ಲೇಖವಿದ್ದು ಅದಕ್ಕೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಹಿಯನ್ನೂ ಹಾಕಿದ್ದಾರೆ. ಅದನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಗೈರುಹಾಜರಾಗಿದ್ದ ಇಒ ಅವರು ನಂತರ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ದಾಖಲಿಸುವ ಪುಸ್ತಕಕ್ಕೆ ಸಹಿ ಹಾಕಿರುವುದಕ್ಕೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯರ ಆಗ್ರಹಕ್ಕೆ ಮಣಿದ ಅಧ್ಯಕ್ಷೆ ವಿಜಯ ಕುಮಾರಿ ಕಳೆದ ಸಾಮಾನ್ಯ ಸಭೆಯ ಇಡೀ ನಡಾವಳಿಯನ್ನೇ ರದ್ದುಪಡಿಸಿದರು. ತಾ. ಪಂ ಇಒ ಚೆನ್ನಪ್ಪ ಮೊಯಿಲಿ, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.