ADVERTISEMENT

ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯಲ್ಲಿ ವೇಷ ಹಾಕಿ ಸಿಕ್ಕಿದ ₹5.12 ಲಕ್ಷ ಬಡವರಿಗೆ ದಾನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 9:54 IST
Last Updated 20 ಸೆಪ್ಟೆಂಬರ್ 2017, 9:54 IST
ಕಟಪಾಡಿ ರವಿ
ಕಟಪಾಡಿ ರವಿ   

ಉಡುಪಿ: ರವಿ ಕಟಪಾಡಿ ಅವರು ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯ ದಿನದಂದು ವೇಷ ಹಾಕಿ ಸಂಗ್ರಹಿಸಿದ ₹5.12 ಲಕ್ಷ ಹಣವನ್ನು ಅನಾರೋಗ್ಯಪೀಡಿತ ಬಡ ಮಕ್ಕಳಿಗೆ ನೀಡಿದ್ದಾರೆ.

ಎಂಟು ವರ್ಷಗಳಿಂದ ಅವರು ವೇಷ ಹಾಕುತ್ತಿದ್ದಾರೆ. ತಮ್ಮ ವೇಷ ಕೇವಲ ಹೆಸರು ಗಳಿಸಲು ಅಥವಾ ಸ್ವಂತಕ್ಕಾಗಿ ಹಣ ಗಳಿಸಲು ಸೀಮಿತವಾಗಬಾರದೆಂದು ನಿರ್ಧರಿಸಿದ ಅವರು, ಕಳೆದ ಮೂರು ವರ್ಷಗಳಿಂದ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

ಈ ಬಾರಿ ಅವರು ‘ಕ್ರಾಂಪಸ್’ ಎಂಬ ವಿಚಿತ್ರ ಮತ್ತು ಭಯಾನಕ ವೇಷ ಹಾಕಿದ್ದರು. ಇಂಗ್ಲಿಷ್ ಚಿತ್ರವೊಂದರ ಭೂತದ ಪಾತ್ರ ಇದಾಗಿದೆ. ಆ ವೇಷದ ಮೂಲಕ ಅವರು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನರು ಸಹ ಉದಾರವಾಗಿ ಹಣ ನೀಡಿದ ಪರಿಣಾಮ ದೊಡ್ಡ ಮೊತ್ತ ಸಂಗ್ರಹವಾಗಿದೆ.

ADVERTISEMENT

‘ಜನರಿಗೆ ಏನಾದರೂ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ವೇಷ ಹಾಕಿ ಒಟ್ಟು ಮಾಡಿದ ಹಣವನ್ನು ಅಗತ್ಯ ಇರುವ ಬಡವರಿಗೆ ನೀಡುತ್ತಿದ್ದೇನೆ. ಈ ಬಾರಿಯ ವೇಷ ಹಾಕವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಸತತ 24 ಗಂಟೆ ಮೇಕಪ್‌ಗೆ ಬೇಕಾಯಿತು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿಯ ಎರಡು ದಿನ ಉಡುಪಿ, ಮಲ್ಪೆ, ಪಡುಕೆರೆ ಮತ್ತು ಕಟಪಾಡಿಯ ವಿವಿಧ ಭಾಗಗಳಲ್ಲಿ ಸಂಚರಿಸಿ ಹಣ ಸಂಗ್ರಹಿಸಲಾಯಿತು. ಸಮಯದ ಅಭಾವವಾದ ಕಾರಣ ಕೆಲವು ಊರುಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿಗೂ ಹೋಗಿದ್ದರೆ ಇನ್ನಷ್ಟು ಹಣ ಸಂಗ್ರಹವಾಗುತ್ತಿತ್ತು’ ಎಂದು ಅವರು ಹೇಳಿದರು.

‘ಶಿವಮೊಗ್ಗದ ಬಾಲಕಿ ಕ್ಯಾನ್ಸರ್ ಪೀಡಿತ ಮೆಹಕ್‌, ಉಡುಪಿಯ ಬಾಲಕಿ ಲಾವಣ್ಯ ಹಾಗೂ ದೆಂದೂರು ಕಟ್ಟೆಯ ಸುನಿತಾ ಎಂಬುವರ ಮಗುವಿಗೆ ಹಣ ನೀಡಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಮಂದಾರ್ತಿ ನಿವಾಸಿಯೊಬ್ಬರು ಕರೆ ಮಾಡಿ ಹಣದ ಸಹಾಯ ಕೇಳಿದ್ದಾರೆ. ಅವರಿಗೂ ನೀಡಲಾಗುವುದು’ ಎಂದರು.

ಅನಾರೋಗ್ಯಪೀಡಿತರಿಗೆ ಸಹಾಯ ಮಾಡುವ ಉದ್ದೇಶದಿಂದ ಭಗವತಿನಾಸಿಕ್ ತಂಡದವರು ವೇಷ ಹಾಕಿದ್ದರು. ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಏರ್ಪಡಿಸಿದ್ದ ಹುಲಿ ವೇಷ ಕುಣಿತ ಸ್ಪರ್ಧೆಯಲ್ಲಿ ಅಲೆವೂರಿನ ವಿಷ್ಣು ಸೇವಾ ಬಳಗ ತಂಡ ಪ್ರಥಮ ಬಹುಮಾನ ಗಳಿಸಿತ್ತು. ಬಹುಮಾನದ ಮೊತ್ತ ₹15 ಸಾವಿರವನ್ನು ಪರ್ಯಾಯ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅವರು ನಡೆಸುತ್ತಿರುವ ನೀಲಾವರ ಗೋಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.

‘5 ಮಕ್ಕಳ ಚಿಕಿತ್ಸೆ’ 
ಶಿರ್ವ: ರವಿ ಕಟಪಾಡಿ ಫ್ರೆಂಡ್ಸ್ ಬಳಗವು ಸಂಗ್ರಹಿಸಿರುವ ₹5,12,745 ಹಣವನ್ನು ಫಲಾನುಭವಿ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ಉಪನ್ಯಾಸಕ ದಯಾನಂದ್ ಮಾಸ್ಟರ್ ತಿಳಿಸಿದ್ದಾರೆ.

ಕಟಪಾಡಿಯ ರವಿ ಫ್ರೆಂಡ್ಸ್ ಬಳಗದೊಂದಿಗೆ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ಸಂಪೂರ್ಣ ಹಣವನ್ನು 5 ಮಕ್ಕಳ ನೆರವಿಗೆ ವಿತರಿಸಲಾಗುವುದು ಎಂದು  ರವಿ ಕಟಪಾಡಿ ತಿಳಿಸಿದರು. ಲಿ ಉದ್ಯಾವರ ಗ್ರಾಮ ಪಂಚಾಯಿತಿ ಸದಸ್ಯ ರವಿ ಕೋಟ್ಯಾನ್, ಸಂತೋಷ್ ಕಟಪಾಡಿ,ಚರಣ್ ಸುಧೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.