ADVERTISEMENT

‘ಕ್ರೀಡೆಗೆ ಸರ್ಕಾರದ ಪ್ರೋತ್ಸಾಹ ಅಗತ್ಯ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:35 IST
Last Updated 15 ನವೆಂಬರ್ 2017, 10:35 IST

ಬ್ರಹ್ಮಾವರ: ಕ್ರೀಡಾ ವಿದ್ಯಾರ್ಥಿಗಳಿಗೆ ನೀಡುವ ಪ್ರಯಾಣ ವೆಚ್ಚವನ್ನು ಸರ್ಕಾರವು ಹೆಚ್ಚಿಸಬೇಕು ಮತ್ತು ದೈಹಿಕ ಶಿಕ್ಷಕರಿಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ ಒತ್ತಾಯಿಸಿದರು.

ಬ್ರಹ್ಮಾವರದ ಎಸ್.ಎಂ.ಎಸ್ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಪದವಿಪೂರ್ವ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಟ ನಿರ್ದೇಶಕ, ನಿರ್ಮಾಪಕ ರಾಜಶೇಖರ ಕೋಟ್ಯಾನ್ ಮಾತನಾಡಿ, ‘ಸಾಧನೆಗೆ ಕಠಿಣ ಪರಿಶ್ರಮ ಬೇಕು. ಸರಿಯಾದ ತರಬೇತಿ ಇದ್ದರೆ ಮಾತ್ರ ಗೆಲುವು ಸಾಧ್ಯ’ ಎಂದು ಹೇಳಿದರು. ಓ.ಎಸ್.ಸಿ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾ.ಸಿ.ಎ.ಐಸಾಕ್ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ಉದ್ಯಮಿ ಸಂತೋಷ್ ಕೋಟ್ಯಾನ್, ಓ.ಎಸ್ ಸಿ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಅನಿಲ್ ರೋಹಾನ್, ಟ್ರಸ್ಟಿ ಅನಿಲ್ ರೋಡಿಗ್ರಸ್, ಉದ್ಯಮಿ ಕೆ.ಬಾಲಕೃಷ್ಣ ಹೆಗ್ಡೆ, ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಕ್ರೀಡಾ ಸಂಯೋಜಕ ದಿನೇಶ್ ಕುಮಾರ್ ಇದ್ದರು.

ಕ್ರೀಡಾಕೂಟದ ಯಶಸ್ಸಿನ ಹಿಂದೆ ಶ್ರಮಿಸಿದ ಎಸ್.ಎಂ.ಎಸ್ ಪಿಯು ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸತ್ಯನಾರಾಯಣ ನಾಯಕ್, ಸಂಸ್ಥೆಯ ಸಂಚಾಲಕ ಸಿ.ಎ.ಐಸಾಕ್ ಮತ್ತು ಸಂಸ್ಥೆಯ ಪ್ರಾಂಶುಪಾಲ ಐವನ್ ದೊನಾತ್ ಸುವಾರಿಸ್ ಅವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.

ಬೆಂಗಳೂರು ಉತ್ತರದ ಕ್ರೀಡಾಳು ಧನೇಶ್ವರಿ ಮತ್ತು ವ್ಯವಸ್ಥಾಪಕ ಬಸವರಾಜ್ ಅನಿಸಿಕೆ ವ್ಯಕ್ತಪಡಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಬಿ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಐವನ್ ದೊನಾತ್ ಸುವಾರಿಸ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸತ್ಯನಾರಾಯಣ ನಾಯಕ್ ವಂದಿಸಿದರು. ನಿವೃತ್ತ ಶಿಕ್ಷಕ ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.