ADVERTISEMENT

ಜಾಗ ಪರಿಶೀಲನೆ: ಕಾಮಗಾರಿಗೆ ತಡೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 8:00 IST
Last Updated 20 ಏಪ್ರಿಲ್ 2017, 8:00 IST

ಸಿದ್ದಾಪುರ: ಶಂಕರನಾರಾಯಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಯ್ದಿರಿಸಿದ ಸ್ಥಳವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದಾರೆಂದು ಕಾಲೇಜಿನ ಪ್ರಾಂಶುಪಾಲರ ದೂರಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ತಡೆದರು.ಶಂಕರನಾರಾಯಣ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಸರ್ವೆ ನಂಬರ್ 246/2ಎ ಮತ್ತು 246/1ಎ, 246/2ಬಿ ರಲ್ಲಿ 14.54 ಎಕರೆ ಸ್ಥಳ ಕಾಯ್ದಿರಿಸಿದ್ದರು. ಅದರಲ್ಲಿ 4.54 ಎಕರೆ ಕಾಲೇಜಿನ ಹೆಸರಿಗೆ ಪಹಣಿ ಪತ್ರವಾಗಿತ್ತು. ಆದರೆ ಇದೂವರೆಗೆ ಪ್ರೌಢಶಾಲೆ ಹೆಸರಲ್ಲಿ ಪಹಣಿ ಪತ್ರ ಆಗಿರುವುದಿಲ್ಲ. ಈ ಕುರಿತು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಕಾಲೇಜಿನ ವತಿಯಿಂದ ಕಂದಾಯ ಇಲಾಖೆಗೆ ದಾಖಲೆ ಸಲ್ಲಿಸಿದೆ.

ಆದರೆ, ಕಾಲೇಜಿನ ಸಮೀಪದಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಕಾಲೇಜಿಗೆ ಸಂಬಂಧಿಸಿದ ಸುಮಾರು 2 ಎಕರೆ ಸ್ಥಳವನ್ನು ಒತ್ತುವರಿ ಮಾಡಿ ಕೊಂಡಿದ್ದರು. ಅಲ್ಲದೆ ಬೆಲೆ ಬಾಳುವ ಮರ ಕಡೆಯಲಾಗಿತ್ತು. ಬಾವಿ ತೋಡುತ್ತಿದ್ದರು. ಮನೆ ನಿರ್ಮಿಸುವುದಕ್ಕೆ ಎಲ್ಲ  ತಯಾರಿ ನಡೆಸಿದರು. ಸ್ಥಳ ಆಕ್ರಮಣ ಕುರಿತು ವಿವಿಧ ಇಲಾಖೆಗಳಿಗೆ ದೂರು ಸಲ್ಲಿಸಿ ದ್ದರೂ, ಯಾವುದೆ ಪ್ರಯೋಜನ ವಾಗಿಲ್ಲ. ಅಲ್ಲದೆ ಒತ್ತುವರಿ ಮಾಡಿಕೊಂಡು ಸ್ಥಳ ದಲ್ಲಿ ನಿರ್ಮಿಸುತ್ತಿದ್ದ ಬಾವಿಗೆ ಯಾವುದೆ ಅನುಮತಿ ಪಡೆದಿಲ್ಲ. ಮನೆ ರಚನೆಗೂ ಕೂಡ ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದಿಲ್ಲ. ಅನಧಿಕೃತ ಒತ್ತುವರಿ ಮಾಡಿಕೊಂಡು ಅಕ್ರಮ ಮನೆ, ಬಾವಿ ರಚನೆಗೆ ಮುಂದಾಗಿರುವ ವ್ಯಕ್ತಿಯ ವಿರುದ್ಧ ಶಂಕರನಾರಾಯಣ ಕಾಲೇಜಿನ ಪ್ರಾಂಶುಪಾಲ ದಿನೇಶ ನಾಯ್ಕ ಅವರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರು.

ಶಂಕರನಾರಾಯಣ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ಸಂಬಂಧಿಸಿದ ಸರ್ಕಾರಿ ಜಾಗವನ್ನು ಸ್ಥಳೀಯ ವ್ಯಕ್ತಿ ಅತಿಕ್ರಮಣಕ್ಕೆ ಮುಂದಾಗಿರುವ ಕುರಿತು ದೂರು ಬಂದಿತ್ತು. ಕಾಲೇಜು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಈ ಕುರಿತು ಕ್ರಮ ಕೈಗೊಳ್ಳಲು ವಿವಿಧ ಇಲಾಖೆಗಳಿಗೆ ತಿಳಿಸಲಾಗಿತ್ತು. ಅಧಿಕಾರಿಗಳ ಸೂಕ್ತ ಸ್ಪಂದನೆಯಿಲ್ಲದೆ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಳ್ಳಲು ಕುಮ್ಮಕ್ಕು ನೀಡಿದಂತಾಗಿದೆ. ಈ ಕಾರಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ತಡೆಯಲಾಗಿದೆ. ಅಧಿಕಾರಿಗಳು ಅತಿಕ್ರಮಣ ಮಾಡಿದ ಸ್ಥಳದ ಕುರಿತು ಸರ್ವೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಶಂಕರನಾರಾಯಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ ಶೆಟ್ಟಿ ಆಗ್ರಹಿಸಿದರು.ಪಿಡಿಒ ಶ್ವೇತಾಲತಾ, ಗ್ರಾಮ ಕರಣಿಕ ತಳವಾರ ಪರಸಪ್ಪ, ಕಾಲೇಜಿನ ಪ್ರಾಂಶು ಪಾಲ ದಿನೇಶ ನಾಯ್ಕ, ಉಪಪ್ರಾಂಶು ಪಾಲ ಚಂದ್ರಕುಲಾಲ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.