ADVERTISEMENT

ಜಾತಿದ್ವೇಷದ ವಿಷ ಬೀಜ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2017, 9:11 IST
Last Updated 27 ಜನವರಿ 2017, 9:11 IST
ಜಾತಿದ್ವೇಷದ ವಿಷ ಬೀಜ: ಎಚ್ಚರಿಕೆ
ಜಾತಿದ್ವೇಷದ ವಿಷ ಬೀಜ: ಎಚ್ಚರಿಕೆ   

ಸಿದ್ದಾಪುರ: ರಾಜ್ಯದಲ್ಲಿ ನಡೆಯುತ್ತಿರುವ ಕುರುಬ- ಲಿಂಗಾಯಿತ ನಾಯಕರ ನಡುವಿನ ಕಿತ್ತಾಟ ನಾಚಿಕೆಗೇಡಿನ ಸಂಗತಿ ಎಂದು ಹಿಂದೂ ಜಾಗರಣ ವೇದಿಕೆ ಪ್ರಾಂತ ಕ್ಷೇತ್ರ ಸಂಚಾಲಕ ಜಗದೀಶ ಕಾರಂತ ಕಿಡಿ ಕಾರಿದರು.

ಯಳಂತೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾತಿಗಳ ನಡುವಿನ ಕಿತ್ತಾಟದಿಂದ ಸಮಾಜ ವಿಘಟನೆಯಾಗುತ್ತದೆ. ಜಾತಿದ್ವೇಷದಿಂದ ಕಾಶ್ಮೀರದಲ್ಲಿಂದು ಬಮ್ಮನ್, ಬರಿಯಾ, ಜಾಟ್, ಕಾಶ್ಮೀರಿ ಪಂಡಿತರಿಗೆ ನೆಲೆಯಿಲ್ಲದಂತಾಗಿದೆ. ರಾಜ್ಯದಲ್ಲಿಯೂ ಕೂಡ ಕುರುಬ- ಲಿಂಗಾಯಿತ ನಾಯಕರ ನಡುವೆ ಕಿತ್ತಾಟ ಪ್ರಾರಂಭಗೊಂಡಿರುವುದು ನಾಚಿಕೆ ಗೇಡಿನ ವಿಷಯವಾಗಿದೆ. ಜಾತಿದ್ವೇಷದ ವಿಷ ಬೀಜ ಅವಿಭಜಿತ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗೂ ವ್ಯಾಪಿಸುತ್ತಿದೆ. ಕರಾವಳಿಯಲ್ಲಿ ಬಲಿಷ್ಠವಾಗಿರುವ ಬಂಟ- ಬಿಲ್ಲವ ಸಮುದಾಯದ ನಡುವೆ ದ್ವೇಷದ ವಿಷಬೀಜ ಬಿತ್ತುವ ಮೂಲಕ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ ಎಂದರು.

ಆರ್‍ಎಸ್‍ಎಸ್‌ನ ಜಿಲ್ಲಾ ಕಾರ್ಯವಾಹ ವಾದಿರಾಜ ಗೋಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಗಣೇಶ್ ಕಿಣಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಪ್ರಸನ್ನಕುಮಾರ್ ಶೆಟ್ಟಿ ಚಾರ, ತಾಲೂಕು ಪಂಚಾಯಿತಿ ಸದಸ್ಯ ಅಮೃತಕುಮಾರ್ ಶೆಟ್ಟಿ ಬೆಳೆಂಜೆ  ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟಕ ಯಳಂತೂರು ವಸಂತಕುಮಾರ್ ಶೆಟ್ಟಿ ಸ್ವಾಗತಿಸಿದರು. ಧರ್ಮ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.